ಕಾರವಾರ: ಸೀಬರ್ಡ್ ನೌಕಾನೆಲೆ ವಿಮಾನ ನಿಲ್ದಾಣ ನಿರ್ಮಾಣದ ಜೊತೆಗೆ ನಾಗರಿಕ ವಿಮಾನ ನಿಲ್ದಾಣ ಬಳಕೆಗೆ ರಾಜ್ಯ ಸರ್ಕಾರ ತೋರಿಸಿದ ಆಸಕ್ತಿಗೆ ಪೂರಕವಾಗಿ ಸೀಬರ್ಡ್ ರನ್‌ವೇಗಾಗಿ ಕೇಳಿದ್ದ 93.29 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಆ.31 ರಂದು ಅಧಿಸೂಚನೆ ಹೊರಡಿಸಿದೆ.
ಅಲ್ಲದೆ, ಅಂದೇ ಕುಮಟಾ ಸಹಾಯಕ ಕಮಿಷನರ್ ಸಹ ಭೂ ಸ್ವಾಧೀನ ಪ್ರಕ್ರಿಯೆಗೆ ಆದೇಶ ಹೊರಡಿಸಿದ್ದಾರೆ. ಸೆ.1 ರಂದು ಜಿಲ್ಲಾಧಿಕಾರಿ ಡಾ|ಹರೀಸಕುಮಾರ್ ಭೂಸ್ವಾಧೀನ ಮಾಡಿಕೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಭೂಸ್ವಾಧೀನ ಕಾಯ್ದೆ 2013 ಕಲಂ 12ರ ಅಡಿ ಅಧಿಕಾರ ಚಲಾಯಿಸಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದ್ದಾರೆ.
ಈ ಮೂಲಕ ವಿಮಾನ ನಿಲ್ದಾಣದ ನಿರ್ಮಾಣದ ಕನಸಿಗೆ ಈಗ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ವಿಮಾನ ನಿಲ್ದಾಣಕ್ಕೆ ಅಂಕೋಲಾ ತಾಲೂಕಿನ ಅಲಗೇರಿ ಗ್ರಾಮದ 69 ಎಕರೆ 21 ಗುಂಟೆ 2 ಅಣೆ ಭೂಮಿ, ಬೇಲೆಕೇರಿ ಗ್ರಾಮದ 20 ಎಕರೆ 35 ಗುಂಟೆ 15 ಅಣೆ ಭೂಮಿ ಹಾಗೂ ಭಾವಿಕೇರಿಯ 3 ಎಕರೆ 12 ಗುಂಟೆ 4 ಅಣೆ ಭೂಮಿ ಸ್ವಾಧೀನವಾಗಲಿದೆ. ಒಟ್ಟು 93 ಎಕರೆ, 29 ಗುಂಟೆ 5 ಅಣೆ ಭೂಮಿ ವಿಮಾನ ನಿಲ್ದಾಣ ರನ್ ವೇ ಹಾಗೂ ಇನ್ನಿತರ ಮೂಲ ಸೌಕರ್ಯ ನಿರ್ಮಿಸಲು ಅವಶ್ಯಕತೆ ಇದೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದ ಉದ್ದೇಶವೇನಿತ್ತು: ಸೀಬರ್ಡ್ ವಿಮಾನ ನಿಲ್ದಾಣದ ಜೊತೆಗೆ ನಾಗರಿಕ ವಿಮಾನ ನಿಲ್ದಾಣವನ್ನು ನಿರ್ಮಿಸುವ ಉದ್ದೇಶ ರಾಜ್ಯ ಸರ್ಕಾರಕ್ಕೆ ಮೊದಲಿನಿಂದ ಇತ್ತು. ಅದಕ್ಕೆ ಬೇಕಾದ ರನ್‌ವೇಗೆ ಭೂಮಿ ಕೊಟ್ಟಲ್ಲಿ ತಾನು ನಾಗರಿಕ ವಿಮಾನ ನಿಲ್ದಾಣ ಬಳಕೆಗೆ ನೀಡುವುದಾಗಿ ರಕ್ಷಣಾ ಇಲಾಖೆ ಹೇಳಿತ್ತು. ಭೂಮಿ ವಶಕ್ಕೆ ಹೊರಟಾಗ ರೈತರಿಗೆ ಪರಿಹಾರ ನೀಡುವ ಹೊಣೆಯನ್ನು ಸಹ ರಕ್ಷಣಾ ಇಲಾಖೆ ರಾಜ್ಯ ಸರ್ಕಾರಕ್ಕೆ ಬಿಟ್ಟಿತ್ತು. ಇದನ್ನು ಸ್ವೀಕರಿಸಿದ ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ. ಹಣ ಬಿಡುಗಡೆ ಮಾಡಿದೆ. ಸ್ಥಳೀಯವಾಗಿ 93 ಎಕರೆ ಭೂಮಿ ನೀಡುವವರನ್ನು ಸಹ ಗುರುತಿಸಿ ಅವರೊಂದಿಗೆ ಶಾಸಕಿ ರೂಪಾಲಿ ನಾಯ್ಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಮಾತುಕತೆ ಸಹ ಆಡಿದ್ದಾರೆ ಎನ್ನಲಾಗಿದೆ. ನೇರವಾಗಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೊಡಿಸಿ, ಯೋಜನೆಗೆ ಸಹಕರಿಸುವಂತೆ ಸಚಿವ ಹೆಬ್ಟಾರ ಪ್ರಯತ್ನ ನಡೆಸಿದ್ದಾರೆ.
2005ರಲ್ಲಿ ಸೀಬರ್ಡ್ ಯೋಜನೆಯ ಮೊದಲ ಹಂತದ ಯೋಜನೆ ಮುಗಿದು, ದೇಶಕ್ಕೆ ಸಮರ್ಪಣೆ ಆದಾಗಿನಿಂದ ವಿಮಾನ ನಿಲ್ದಾಣ ಸ್ಥಾಪನೆಯ ಮಾತು ಕಾಗದದಲ್ಲಿ ಉಳಿದಿತ್ತು. ಭೂಸ್ವಾಧೀನವಾಗಲಿ,ಯಾರು ಪರಿಹಾರ ನೀಡುವುದು ಎಂಬುದಾಗಲಿ, ಸ್ಪಷ್ಟವಾಗಿ ರನ್ ವೇಗೆ ಎಷ್ಟು ಭೂಮಿ ಬೇಕು ಎಂಬ ಬಗ್ಗೆ ಖಚಿತತೆ ಇರಲಿಲ್ಲ. ಅಧ್ಯಯನಗಳು ಸಹ ಆಗಿರಲಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲಾಗುವುದು ಎಂಬ ಮಾತು ಪತ್ರಿಕೆಗಳಲ್ಲಿ ಆಗಾಗ ಕೇಳಿ ಬರುತ್ತಿತ್ತು. ಎನ್‌ಡಿಎ ಸರ್ಕಾರದ 2014-2019 ರ ಅವಧಿಯಲ್ಲಿ ಸಹ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ ಯೋಜನೆಗೆ ರೆಕ್ಕೆ ಬಂದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದ್ಧತೆ ಸಹ ಕಾರಣ ಎನ್ನಬಹುದು.
ಅಪಪ್ರಚಾರ ತಡೆದ ಜಿಲ್ಲಾ ಉಸ್ತುವಾರಿ ಸಚಿವ: ಯೋಜನೆ ಬರುವ ಮುನ್ನ ಅಪಪ್ರಚಾರ ಮಾಡಿ, ಸಾಕಷ್ಟು ಲಾಭ ಮತ್ತು ಗುತ್ತಿಗೆ ಪಡೆಯುವ ಒಂದು ದಂಡಿನ ವಿರುದ್ಧ ಸಾಕಷ್ಟು ಮುಂಜಾಗ್ರತೆ ವಹಿಸಿದ್ದು ಶಾಸಕಿ ಹಾಗೂ ಸಚಿವ ಹೆಬ್ಟಾರ, ಸ್ಥಳೀಯ ಹುನ್ನಾರಗಳನ್ನು ಸಮರ್ಥವಾಗಿ ಎದುರಿಸುವ ಛಾತಿ ಇರುವ ಇವರು ವಿಮಾನ ನಿಲ್ದಾಣವನ್ನು ವಿರೋಧಿಸುವವರನ್ನು ಸದ್ದಿಲ್ಲದೇ ಬಾಯಿ ಮುಚ್ಚುವಂತೆ ಮಾಡಿದ್ದಾರೆ. ವಿಮಾನ ನಿಲ್ದಾಣದಿಂದ ಆಗುವ ಲಾಭಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಬಂದರು ಅಭಿವೃದ್ಧಿ ಮತ್ತು ರೈಲ್ವೆ ಲೈನ್‌ಗಳು ಸಹ ಮುಂದೆ ಆಗಲಿವೆ. ತಾನಾಗಿಯೇ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಾಗರಿಕರನ್ನು ಸರ್ಕಾರ ನಂಬಿಸಿದೆ. ಪ್ರವಾಸೋದ್ಯಮದ ಹೆಬ್ಟಾಗಿಲು ತೆರೆದಂತೆ ಎಂದು ಹೇಳಲಾಗಿದೆ.
ಅಂಕೋಲಾ ತಾಲೂಕಿನ ಅಲಗೇರಿ ಬಳಿ ನಾಗರಿಕ ವಿಮಾನ ನಿಲ್ದಾಣದ ಸ್ಥಾಪನೆಗೆ ಅಂತೂ ಕ್ರಿಯಾರೂಪದ ಮುನ್ನುಡಿ ಬರೆಯಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ 2025ಕ್ಕೆ ನಾಗರಿಕ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಅದು 2023ರಲ್ಲೇ ಆದರೂ ಅಚ್ಚರಿಯಿಲ್ಲ. ಈಗಿನ ರಾಜ್ಯ ಸರ್ಕಾರದ ವೇಗ ಹೀಗೆ ಮುಂದುವರಿದರೆ, ರೈತರಿಗೆ ಪರಿಹಾರ ನೀಡುವುದಷ್ಟೇ ಬಾಕಿ. ಹಣ ಬಿಡುಗಡೆಯಾಗಿದೆ. 200 ಕೋಟಿ ರೂ. ಹಣದಲ್ಲಿ ಮೊದಲ ಕಂತು 8 ಕೋಟಿ ಬಿಡುಗಡೆ ಸಹ ಆಗಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ಆಗುತ್ತದೆಯೋ ಅಥವಾ ರಾಜ್ಯ ಸರ್ಕಾರ ಮತ್ತು ಕೇಂದ್ರದ ರಕ್ಷಣಾ ಇಲಾಖೆ ಜಂಟಿಯಾಗಿ ನಿರ್ವಹಿಸುತ್ತವೆಯೋ ಎಂಬುದನ್ನು ಕಾದು ನೋಡಬೇಕಿದೆ.
-ನಾಗರಾಜ ಹರಪನಹಳ್ಳಿ