Advertisement

Beach: ಕಾರವಾರದಿಂದ ಕಾಸರಗೋಡು ಬೀಚ್‌ ಅಭಿವೃದ್ಧಿಗೆ ಯೋಜನೆ: ಎಚ್‌.ಕೆ.ಪಾಟೀಲ್‌

12:31 AM Jan 15, 2024 | Team Udayavani |

ಕುಂದಾಪುರ: ಸರಕಾರವು ಖಾಸಗಿ ಸಹಭಾಗಿತ್ವದಲ್ಲಿ ಕಾರವಾರದಿಂದ ಕಾಸರಗೋಡಿನವರೆಗಿನ 320 ಕಿ.ಮೀ. ಸಮುದ್ರ ತೀರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಪರಿಣತರ ಜತೆ ಸಭೆ ನಡೆಸಿ ಏಪ್ರಿಲ್‌ ವೇಳೆಗೆ ಮೊದಲ ಹಂತದ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.

Advertisement

ಭಾನುವಾರ ಮಾಧ್ಯಮದ ಜತೆ ಮಾತನಾಡಿ, ಈ ಭಾಗದ ಸಮುದ್ರತೀರ, ಸೀವಾಕ್‌, ಬೀಚ್‌ ಪ್ರವಾಸೋದ್ಯಮ, ಸರ್ಫಿಂಗ್‌ ಮೊದಲಾದ ಸಮುದ್ರ ಸಾಹಸ ಕ್ರೀಡೆಗಳು, ಕಯಾಕಿಂಗ್‌ ಮೊದಲಾದ ಹಿನ್ನೀರಿನ ಕ್ರೀಡೆಗಳನ್ನು ಉತ್ತೇಜಿಸಬೇಕಿದೆ ಎಂದರು.

ಕರಾವಳಿಯ ಬೀಚ್‌ಗಳು ರಾಜ್ಯದ ಪ್ರವಾಸೋದ್ಯಮದ ಆಸ್ತಿಗಳು. ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿರುವ ಶ್ರದ್ಧಾ ಕೇಂದ್ರಗಳು, ಧಾರ್ಮಿಕ ಕೇಂದ್ರಗಳು ಬಯಲುಸೀಮೆಯ ಜನ ಈ ಭಾಗಕ್ಕೆ ಬರುವಂತೆ ಮಾಡಿ ಧಾರ್ಮಿಕ ಶ್ರದ್ಧೆ ಹೆಚ್ಚಿಸುವ ಜತೆಗೆ ಪ್ರವಾಸೋದ್ಯಮವನ್ನು ಬೆಳೆಸಿವೆ. ಇಲ್ಲಿನ ಸಮುದ್ರತೀರಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ ಅದಕ್ಕಾಗಿ ಖಾಸಗಿ ಸಹಭಾಗಿತ್ವದ ಯೋಜನೆ ರೂಪಿಸಲಾಗುವುದು. 4 ಹಂತಗಳಲ್ಲಿ ಅನುಷ್ಠಾನ ಮಾಡಲಾಗುವುದು ಎಂದರು.

ಬೀಚ್‌ ಸುದರೀಕರಣಕ್ಕೆ ಸಹಕಾರ
ಕರಾವಳಿಯ ಸಮುದ್ರ ಸೌಂದರ್ಯ ಬೇರೆಲ್ಲೂ ಇಲ್ಲ. ಅಷ್ಟು ದೊಡ್ಡ ಸೌಕರ್ಯ ಇಲ್ಲಿದೆ. ರಾಜ್ಯ ಸರಕಾರ ಇಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸಲು, ಬೀಚ್‌ ಸುಂದರೀಕರಣಕ್ಕೆ ಸಹಕಾರ ನೀಡಲಿದೆ ಎಂದರು.

ಕುಂದಾಪುರ, ಬೀಜಾಡಿಯಲ್ಲಿ ಸಿಲ್ವರ್‌ ಸ್ಯಾಂಡ್‌ ವಿಶಿಷ್ಟವಾಗಿದೆ. ಇದರ ಬಗ್ಗೆ ವಿಶೇಷ ಆಸಕ್ತಿಯ ಕ್ರಮಗಳಿವೆಯೇ ಎಂದು ಕೇಳಿದಾಗ, ಈಗಷ್ಟೇ ನಾವು ಯೋಜನೆ ರೂಪಿಸಲು ಹೊರಟಿದ್ದೇವೆ. ನಮ್ಮ ಸಲಹಾ ತಂಡ ನೀಡುವ ಸಲಹೆಗಳ ಆಧಾರದಲ್ಲಿ ಯೋಜನೆಗಳನ್ನು ಮಾಡುತ್ತೇವೆ ಎಂದರು.

Advertisement

ಸ್ವಚ್ಛ ಕಡಲತೀರದಲ್ಲಿ ಕಡಲಾಮೆಗಳು ಮೊಟ್ಟೆ ಇಡುತ್ತಿದ್ದು ಒಡಿಶಾದ ಬಳಿಕ ಕರ್ನಾಟಕದಲ್ಲೇ ಕಾಣಿಸಿಕೊಳ್ಳುತ್ತಿವೆ. ಗಾಯಗೊಂಡ ಕಡಲಾಮೆಗಳ ಚಿಕಿತ್ಸೆಗೆ ಕೇಂದ್ರ ಬೇಕೆಂದು ಗಮನ ಸೆಳೆದಾಗ, ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಅಗತ್ಯವಿದ್ದರೆ ಪಸುಸಂಗೋಪನ ಇಲಾಖೆ ಜತೆ ಮಾತನಾಡುತ್ತೇನೆ ಎಂದರು.
ಬೀಚ್‌ ಸ್ವತ್ಛತಾ ಅಭಿಯಾನ

ಹಾಜಿ ಕೆ. ಮೊಹಿದೀನ್‌ ಬ್ಯಾರಿ ಎಜುಕೇಶನ್‌ ಟ್ರಸ್ಟ್‌ ಮೆನೆಜಿಂಗ್‌ ಟ್ರಸ್ಟಿ ಸಯ್ಯದ್‌ ಮೊಹಮದ್‌ ಬ್ಯಾರಿ ಮಾತನಾಡಿ, ಬ್ಯಾರೀಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಳೆದ 28 ತಿಂಗಳಿನಿಂದ ಸ್ವತ್ಛ ಕೋಡಿ ಹಸುರು ಕೋಡಿ ಎಂಬ ಬೀಚ್‌ ಸ್ವತ್ಛತಾ ಅಭಿಯಾನ ನಡೆಸಲಾಗುತ್ತಿದೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳು ಇರುವ ಬ್ಲೂ ಬೀಚ್‌ ಇಲ್ಲಿದೆ. ಪ್ರವಾಸೋದ್ಯಮ ಮಾತ್ರವಲ್ಲ, ಶೈಕ್ಷಣಿಕ, ವಾಣಿಜ್ಯ, ಆರೋಗ್ಯ ಕ್ಲಸ್ಟರ್‌ಗಳಾಗಿಸಿ ಅಭಿವೃದ್ಧಿ ಮಾಡಿದರೆ ಈಗಿನ ಜನಾಂಗಕ್ಕಷ್ಟೇ ಅಲ್ಲ ಒಂದು ಪೀಳಿಗೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದರು.
ವಿಧಾನಪರಿಷತ್‌ ಸಭಾಪತಿ ಯು.ಟಿ. ಖಾದರ್‌, ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next