Advertisement

ಕಾರವಾರ ಬಂದರು ಮೆರಿ ಟೈಮ್‌ ಬೋರ್ಡ್‌ಗೆ

05:35 PM Mar 24, 2019 | Naveen |

ಕಾರವಾರ: ಮೆರಿಟೈಮ್‌ ಬೋರ್ಡ್‌ ಸ್ಥಾಪನೆ ಸಂಬಂಧ ದಶಕದ ಹಿಂದೆ ಕೈಗೊಂಡ ಸಚಿವ ಸಂಪುಟದ ನಿರ್ಧಾರ ಇದೀಗ ಅಸ್ತಿತ್ವಕ್ಕೆ ಬಂದಿದೆ. ಇಲ್ಲಿನ ವಾಣಿಜ್ಯ ಬಂದರು ಸೇರಿದಂತೆ ರಾಜ್ಯದ ಎಲ್ಲಾ ಸಣ್ಣ ಬಂದರುಗಳ ಅಭಿವೃದ್ಧಿಗೆ ಮೆರಿಟೈಮ್‌ ಬೋರ್ಡ್‌ ಸ್ಥಾಪನೆಯಾಗಿದ್ದು, ಇದರ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿಯನ್ನಾಗಿ ಉಜ್ವಲ್‌ ಕುಮಾರ್‌ ಘೋಷ್‌ ಅವರನ್ನು ನೇಮಿಸಲಾಗಿದೆ.

Advertisement

2015ರಲ್ಲಿ ಕಾರವಾರ ವಾಣಿಜ್ಯ ಬಂದರು ಸೇರಿದಂತೆ ಸಣ್ಣ ಬಂದರುಗಳ ಅಭಿವೃದ್ಧಿಗೆ ಹಾಗೂ ಒಳನಾಡು ಜಲಸಾರಿಗೆಗೆ ಕಾಯಕಲ್ಪ ನೀಡಲು ಮೆರಿಟೈಮ್‌ ಬೋರ್ಡ್‌ಗೆ ಕಾನೂನಿನ ತಾತ್ವಿಕ ಸ್ವರೂಪ ನೀಡಲಾಗಿತ್ತು. ಅಲ್ಲದೇ ಸ್ಥಳೀಯ ಶಾಸಕರು, ಬಂದರು ಖಾತೆ ಸಚಿವರು, ಜಿಲ್ಲಾಧಿಕಾರಿ, ಕರಾವಳಿ ಕಾವಲು ಪಡೆ ಹಾಗೂ ನಾಮಕರಣ ಸದಸ್ಯರು ಸೇರಿದಂತೆ 12 ಸದಸ್ಯರನ್ನು ಮೆರಿಟೈಮ್‌ ಬೋರ್ಡ್‌ಗೆ ನೇಮಿಸಬೇಕಿದೆ. ನಂತರವೇ ಅದು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯ. ನಂತರ ಬಂದರು ನಿರ್ದೇಶಕರು ಮತ್ತು ಅಧಿಕಾರಿ ಹುದ್ದೆಗಳು ಮಹತ್ವ ಕಳೆದುಕೊಳ್ಳಲಿದ್ದು, ಬೋರ್ಡ್‌ ಅಧೀನ ಕೆಲಸ ಮಾಡಬೇಕಾಗುತ್ತದೆ. ಬಂದರು ಅಭಿವೃದ್ಧಿಗೆ ಸಂಬಂಧಿಸಿದಂತೆ ಬೋರ್ಡ್‌ ನಿರ್ಧಾರಗಳೇ ಮಹತ್ವದ್ದಾಗಿರುತ್ತದೆ.

ಕರ್ನಾಟಕ ಮೆರಿಟೈಮ್‌ ಬೊರ್ಡ್‌ಗೆ ಸಿಇಓ ನೇಮಕದ ನಂತರ ಉಜ್ವಲ್‌ಕುಮಾರ್‌ ಘೋಷ್‌ ಕಳೆದ ಮಂಗಳವಾರ ಕಾರವಾರ ಬಂದರಿಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳು, ಅನುಷ್ಠಾನಕ್ಕೆ ಬರಬೇಕಾದ ಯೋಜನೆಗಳ ಕುರಿತು ಮಾಹಿತಿ ಪಡೆದು ತೆರಳಿದ್ದಾರೆ. ಲೋಕಸಭಾ ಚುನಾವಣೆಗಳ ನಂತರ ಅಭಿವೃದ್ಧಿಗೆ ವೇಗ ದೊರೆಯಲಿದೆ.

ಏನು ಲಾಭ: ಕರ್ನಾಟಕ ಮೆರಿಟೈಮ್‌ ಬೋರ್ಡ್‌ ಅಸ್ತಿತ್ವಕ್ಕೆ ಬಂದ ಪರಿಣಾಮ ವಾಣಿಜ್ಯ ಬಂದರಿಗೆ ಖಾಸಗಿ ಹಿತಾಸಕ್ತಿಗಳ ಹಿಡಿತ ತಪ್ಪಲಿದೆ. ಕಾರವಾರ ಬಂದರಿನ ಎರಡನೇ ಹಂತದ ದಕ್ಕೆ ವಿಸ್ತರಣೆ ಹಾಗೂ ಬ್ರೇಕ್‌ ವಾಟರ್‌ ನಿರ್ಮಾಣಕ್ಕೆ ಚಾಲನೆ ಸಿಗಲಿವೆ. ಈಗಾಗಲೇ ಸಾಗರ ಮಾಲಾ ಯೋಜನೆಯಡಿ ಕಾರವಾರ ಬಂದರು ಅಭಿವೃದ್ಧಿಗೆ ಅನುದಾನ ಬಂದಿದೆ. ಅಲ್ಲದೇ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಅಭಿವೃದ್ಧಿಗೆ ಸಂಬಂ ಧಿಸಿದಂತೆ ಸಾರ್ವಜನಿಕ ಅಹವಾಲು ಸಭೆ ಸಹ ನಡೆದಿದ್ದು, ಅಂತಿಮ ನಿರ್ಣಯಕ್ಕಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವಾಲಯದಲ್ಲಿ ಕಡತವಿದೆ. ಅಲ್ಲದೇ ಬೇಲೆಕೇರಿ, ತದಡಿ, ಹೊನ್ನಾವರ, ಭಟ್ಕಳ ಬಂದರುಗಳ ಅಭಿವೃದ್ಧಿಗೆ ಮೆರಿಟೈಮ್‌ ಬೋರ್ಡ್‌ ಸಭೆಗಳ ನಿರ್ಧಾರಗಳು ಮಹತ್ವವಾಗಿವೆ.

ಕಾಣದ ಶಕ್ತಿಗಳ ಹಿಡಿತ ತಪ್ಪಲಿದೆ: ವಾಣಿಜ್ಯ ಬಂದರಿನಲ್ಲಿ ಸರಕುಗಳ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ವೇಳೆ ಇತರೆ ವಾಣಿಜ್ಯ ಬಂದರುಗಳಿಗಿಂತ ಮೂರುಪಟ್ಟು ಹೆಚ್ಚಿನ ದರ ನೀಡುವಿಕೆಗೆ ಬ್ರೇಕ್‌ ಬೀಳಲಿದೆ. ಬಂದರು ಕಾರ್ಮಿಕರಿಗೆ ಮತ್ತು ಹೊರ ಗುತ್ತಿಗೆ ಸಿಬ್ಬಂದಿಗೆ ಒಳ್ಳೆಯ ವೇತನ, ಕೆಲಸದಲ್ಲಿ ಸ್ಥಿರತೆ ಸಿಗಲಿದೆ ಎನ್ನಲಾಗುತ್ತಿದೆ.

Advertisement

ಕಾರವಾರ ಚತುಷ್ಪಥ ಅಗಲೀಕರಣ ಸಹ ವಾಣಿಜ್ಯ ಬಂದರಿನ ವಹಿವಾಟಿಗೆ ನೆರವಾಗಲಿದೆ. ಅಲ್ಲದೇ ಕುಮಟಾ- ತಡಸ- ಹುಬ್ಬಳ್ಳಿ ರಸ್ತೆ ಅಗಲೀಕರಣಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಕಾರವಾರ ಇಳಕಲ್‌ ರಸ್ತೆ, ಖಾನಾಪುರ-ಯಲ್ಲಾಪುರ- ಶಿರಸಿ -ತಾಳಗುಪ್ಪ ಹಾಗೂ ಲೋಂಡಾ- ರಾಮನಗರ- ಜೋಯಿಡಾ- ಸದಾಶಿವಗಡ ರಸ್ತೆಗಳ ಅಗಲೀಕರಣಕ್ಕೆ ಬರುವ ದಶಕದಲ್ಲಿ ಚಾಲನೆ ಸಿಗಲಿವೆ.

ಬಂದರಿನಲ್ಲಿನ ಮಾಫಿಯಾಕ್ಕೆ ಕಡಿವಾಣ
ಮೆರಿಟೈಮ್‌ ಬೋರ್ಡ್‌ ಅಸ್ತಿತ್ವಕ್ಕೆ ಬಂದ ಪರಿಣಾಮ ಬಂದರು ಮೇಲಿನ ಹಿಡಿತಕ್ಕಾಗಿ ದಶಕಗಳ ಹಿಂದೆ ನಡೆದ ಕಾದಾಟ ಮತ್ತು ಕೊಲೆಗಳಿಗೆ ಸಹ ಕಡಿವಾಣ ಬೀಳಲಿದೆ. ಕಾರವಾರ ಬಂದರು ಮೇಲಿನ ಹಿಡಿತ ಸಾಧನೆಗಾಗಿ ಕದನಗಳೇ ನಡೆದು ಹೋಗಿವೆ. ಮಾಫಿಯಾ ಹಿಡಿತಕ್ಕೆ ಸಹ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರದ ಹೆಜ್ಜೆ ಇದು ಎನ್ನಲಾಗಿದೆ. 1995-2000ನೇ ಅವಧಿಯಲ್ಲಿ ಕಾರವಾರ ಕ್ಷೇತ್ರದ ಶಾಸಕರಾಗಿದ್ದ ವಸಂತ ಅಸ್ನೋಟಿಕರ್‌ ಹತ್ಯೆಗೆ ಪ್ರಮುಖ ಕಾರಣವೂ ವಾಣಿಜ್ಯ ಬಂದರಿನ ಮೇಲಿನ ಹಿಡಿತ ಸಾಧಿಸುವ ಉದ್ದೇಶ ಗುಟ್ಟಾಗಿಯೇನು ಉಳಿದಿಲ್ಲ. ಅದು ಈಗ ಇತಿಹಾಸ ಸೇರಿದೆ. ಅಲ್ಲದೇ ಕಳೆದ ನವ್ಹೆಂಬರ್‌ನಲ್ಲಿ ಅಂಬೇಡ್ಕರ್‌ ಸೇನೆಯ ಪ್ರೇಮ್‌ಕುಮಾರ್‌ ಕೊಲೆಯ ಹಿಂದೆ ಬಂದರಿನ ವಹಿವಾಟು ಮೇಲಿನ ಹಿಡಿತ ಸಾಧನೆಯ ಕರಿನೆರಳು ಕಂಡು ಬಂದಿತ್ತು.

ನಾಗರಾಜ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next