ಕಾರವಾರ: ಕಾರವಾರ ಅಂಕೋಲಾ ವ್ಯಾಪ್ತಿಯ ಬಂಜರು ಭೂಮಿಯಲ್ಲಿ ಕೃಷಿ ಚಟುವಟಿಕೆ ಆರಂಭವಾಗಬೇಕು ಎನ್ನುವುದು ನನ್ನ ಕನಸು. ಅದಕ್ಕಾಗಿ ಕೃಷಿಯತ್ತ ಯುವ ಜನತೆ ಹೊರಳುವಂತಾಗಬೇಕು ಎಂದು ಸ್ವತಃ ಕೃಷಿಯನ್ನು ಆರಂಭಿಸಿದ್ದೇನೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಹಳಗಾದಲ್ಲಿ ಫಲವತ್ತತೆಯೆಡೆಗೆ ಮೊದಲ ಹೆಜ್ಜೆ ಎಂಬ ಕಾರ್ಯಕ್ರಮದ ಅಂಗವಾಗಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಅವರು ಮಾತನಾಡಿದರು. ಅಂಕೋಲಾ ಮತ್ತು ಕಾರವಾರ ತಾಲೂಕುಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಜಮೀನುಗಳು ಖಾಲಿ ಉಳಿದಿವೆ. ಯುವಕರಲ್ಲಿ ಕೃಷಿಯ ಬಗ್ಗೆ ಜಾಗೃತಿ ಮತ್ತು ಮಾಹಿತಿಯನ್ನು ನೀಡಿ, ಇಲ್ಲಿಯೂ ಕೃಷಿ ಕಾರ್ಯ ಮಾಡಬಹುದು ಎಂದು ಮನವರಿಕೆ ಮಾಡುವುದು ತಮ್ಮ ಉದ್ದೇಶಗಳಲ್ಲೊಂದು ಎಂದರು.
ಯುವ ಜನತೆಗೆ ಕೃಷಿಯಲ್ಲಿ ಆಸಕ್ತಿ ಹುಟ್ಟಿಸಲು ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೃಷಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬೇಸಾಯ ಮಾಡದೆ ಖಾಲಿ ಬಿಟ್ಟಿರುವ ಹಾಗೂ ಕೃಷಿ ಮಾಡುತ್ತಿರುವ ರೈತರಿಂದ ಕೃಷಿ ಜಮೀನನ್ನು ಗೇಣಿ ರೂಪದಲ್ಲಿ ಪಡೆದು ಕ್ಷೇತ್ರದ 65 ಎಕರೆ ಪ್ರದೇಶದಲ್ಲಿ ಕೃಷಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಒಂದೇ ತಳಿಯ ಬೀಜವನ್ನು ನಾಟಿ ಮಾಡುವ ಈ ಭಾಗದ ರೈತರಿಗೆ ಬೇರೆ ಬೇರೆ ತಳಿಗಳ ಪರಿಚಯ ಮಾಡುವ ಉದ್ದೇಶ ಹೊಂದಿದ್ದೇವೆ. ವಿಜ್ಞಾನಿಗಳ ಸಲಹೆ ಮೇರೆಗೆ ಇಲ್ಲಿಯ ಜಮೀನಿನಲ್ಲಿ ಯಾವ ಯಾವ ತಳಿಗಳನ್ನು ಬೆಳೆಯಬಹುದು ಎಂದು ಮಾಹಿತಿ ಪಡೆಯಲಾಗುತ್ತಿದೆ. ಮುಂದಿನ ದಿನದಲ್ಲಿ ಅವೆಲ್ಲದರ ಪ್ರಯೋಗ ಮಾಡಿ ಸ್ಥಳೀಯ ರೈತರಿಗೂ ಮಾಹಿತಿ ನೀಡಲಾಗುವುದು ಎಂದರು.
ಮುಂಬರುವ ದಿನಗಳಲ್ಲಿ ಕೃಷಿ, ತೋಟಗಾರಿಕೆ ಚಟುವಟಿಕೆಗೆ ಉತ್ತೇಜನ ನೀಡಿ, ಬೆಳೆಗಳು ಅಧಿಕ ಪ್ರಮಾಣದಲ್ಲಿ ಬೆಳೆಯುವಂತಾದಲ್ಲಿ ರೈಸ್‌ಮಿಲ್, ಸಕ್ಕರೆ ಕಾರ್ಖಾನೆ, ಹೈನುಗಾರಿಕೆ ಆರಂಭಕ್ಕೆ ಪ್ರಯತ್ನಿಸಲಾಗುವುದು. ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ ಕೃಷಿಯಿಂದ ಸುಭಿಕ್ಷವಾಗಬೇಕೆನ್ನುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ನುಡಿದರು.
ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ನಗರ ಮಂಡಲದ ಅಧ್ಯಕ್ಷ ನಾಗೇಶ್ ಕುಡೇìಕರ, ಗ್ರಾಪಂ ಸದಸ್ಯರು, ರೈತ ಮುಖಂಡರು, ಬಿಜೆಪಿ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.