ಉದಯವಾಣಿ ಸಮಾಚಾರ
ಕಾರವಾರ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸವಿನೆನಪಿಗಾಗಿ ರೈತಬಂಧು ಅಭಿಯಾನದಡಿ ನಿರ್ಮಿಸಲಾದ ಎರೆಹುಳು ತೊಟ್ಟಿ ನಿರ್ಮಾಣ ಕಾಮಗಾರಿ ಇದೀಗ ಉತ್ತಮ ಆದಾಯ ಗಳಿಸುತ್ತಿದ್ದು, ಫಲಾನುಭವಿಗಳು ಈ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ಅಂಕೋಲಾ ತಾಲೂಕಿನ ವಾಸರ ಕುದ್ರಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು 27000 ರೂ. ವೆಚ್ಚದಲ್ಲಿ 2 ಎರೆಹುಳು ತೊಟ್ಟಿ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಒಂದು ಪ್ರಗತಿಯಲ್ಲಿದೆ. ನರೇಗಾ ಯೋಜನೆಯಡಿ ರೈತರ ಕೃಷಿ ಭೂಮಿಗೆ ಅನುಕೂಲವಾಗುವಂತೆ
ಕಾಮಗಾರಿ ನೀಡಲಾಗುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಅಭಿವೃದ್ಧಿಯೂ ಹೆಚ್ಚುತ್ತಿದೆ.
ಸುವ್ಯವಸ್ಥಿತವಾದ ತೊಟ್ಟಿ ನಿರ್ಮಿಸಿ ಹಸಿ ಕಸ, ತೊಪ್ಪಲುಗಳನ್ನು ಹಾಕಿ ಎರೆಹುಳು ಬಿಟ್ಟು ಆಗಾಗ ನೀರು ಚಿಮುಕಿಸಿದರೆ 15 ದಿನಗಳಲ್ಲಿ ಹುಳುಗಳು ಫಲಿತಾಂಶ ನೀಡುತ್ತವೆ. ಜೊತೆಗೆ ಈ ತೊಟ್ಟಿಯ ಸುತ್ತಲೂ ಚಿಕ್ಕದೊಂದು ಕಾಲುವೆಯಂತೆ ನಿರ್ಮಿಸಿ ನೀರು ನಿಲ್ಲುವಂತೆ ಜಾಗೃತಿ ವಹಿಸಬೇಕು. ಇದು ಇರುವೆ ಹಾಗೂ ಇತರ ಹುಳಗಳು ಬರದಂತೆ ತಡೆಯುತ್ತದೆ.
ಕೃಷಿಯಲ್ಲಿ ಹೊಸತನ ಕಾಣುವ ಹಂಬಲದ ರೈತ ಅನಂತ ಗೌಡ ಹೇಳುವಂತೆ, ಕಳೆದ ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯತ್‌ನಿಂದ ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಇದೀಗ ವಾರ್ಷಿಕವಾಗಿ ಸುಮಾರು 15 ಕ್ವಿಂಟಾಲ್ ವರೆಗೂ ಗೊಬ್ಬರ ಮಾಡಿ ನಮ್ಮ ಸ್ವಂತ ಭೂಮಿಯಲ್ಲಿಯೇ ಯಾವುದೆ ಖರ್ಚಿಲ್ಲದೆ ಉತ್ತಮ ಇಳುವರಿ ಪಡೆಯುತ್ತಿದ್ದೇನೆ.
ಅಷ್ಟೆ ಅಲ್ಲದೇ ಖಾತ್ರಿ ಯೋಜನೆಯಡಿ ದನದ ಕೊಟ್ಟಿಗೆ, ಬಚ್ಚಲು ಗುಂಡಿ ಕೂಡಾ ಪಡೆದಿದ್ದು, ಇದೀಗ ಕೋಳಿ ಶೆಡ್ ನಿರ್ಮಿಸಬೇಕು ಎಂದು ಕೊಂಡಿದ್ದೇನೆ. ಕೆಲಸ ಕಡಿಮೆ ಉತ್ತಮ ಆದಾಯ ನೀಡುವ ಎರೆಹುಳು ತೊಟ್ಟಿ ನಿರ್ಮಾಣದಿಂದ ನಮ್ಮ ಮೂರು ಎಕರೆ ಭೂಮಿಗೂ ಉತ್ತಮ ಗುಣಮಟ್ಟದ ಗೊಬ್ಬರ ಪಡೆಯುತ್ತಿದ್ದು, ತೋಟಗಾರಿಕಾ ಬೆಳೆಗಳಲ್ಲಿಯೂ ಹೆಚ್ಚಿನ ಆಸಕ್ತಿ ಇದ್ದು, ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ ಎಂದರು.