ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 7 ರಂದು ನಡೆಯುವ ಮತದಾನದ ದಿನದಂದು ಜಿಲ್ಲೆಯ ಅರ್ಹ ವಿಕಲಚೇತನರಿಗೆ ಮತಗಟ್ಟೆಗೆ ಆಗಮಿಸಲು ಮತ್ತು ಮತಗಟ್ಟೆಯಿಂದ ಮನೆಗೆ ತೆರಳಲು ಜಿಲ್ಲಾಡಳಿದ ಮೂಲಕ ಉಚಿತ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
Advertisement
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ ವಿಶೇಷಚೇತನರ ಮತದಾನ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಪ್ಪದೇ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನ ಮಾಡಿ, ಪ್ರಜಾಪ್ರಭುತ್ವದ ದೊಡ್ಡ ಹಬ್ಬವನ್ನು ಯಶಸ್ವಿಗೊಳಿಸಬೇಕು.
ಚಲಾವಣೆ ನಂತರ ಪುನಃ ಮನೆಗೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್‌ನ ವಿಆರ್‌ಡಬ್ಲ್ಯೂ ಮತ್ತು ಎಮ್‌ಆರ್‌ಡಬ್ಲ್ಯೂ ಮೂಲಕ ಬರುವ ವಾಹನ ಬೇಡಿಕೆ ಆಧಾರದ ಮೇಲೆ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಸ್ವಂತ ವಾಹನವಿದ್ದು ಅದರಲ್ಲಿ ಬಂದು ಮತ ಚಲಾಯಿಸುವ ವಿಕಲಚೇತನರಿಗೆ ಅವಶ್ಯವಿದ್ದಲ್ಲಿ ಅವರ ವಾಹನಕ್ಕೆ ಇಂಧನ ನೀಡುವ ವ್ಯವಸ್ಥೆ ಕೂಡಾ ಮಾಡಲಾಗುವುದು ಎಂದರು. ವಯೋವೃದ್ಧರು ಅಥವಾ ವಿಕಲಚೇತನತೆಯಿಂದ ಯಾವುದೇ ಮತದಾರರು ಮತದಾನದಿಂದ ಹೊರಗುಳಿಯದಂತೆ ಜಿಲ್ಲಾಡಳಿತದ ಮೂಲಕ ಎಲ್ಲಾ ಸೌಲಭ್ಯ ಒದಗಿಸಲಾಗುತ್ತಿದೆ. ಸ್ವೀಪ್ ಸ ಮಿತಿ ವತಿಯಿಂದ ಕೂಡ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಮತದಾನ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
Related Articles
Advertisement
ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾದ ವಿಶೇಷಚೇತನರ ಬೈಕ್ ಜಾಥಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಅರ್ಜುನ ಚಿತ್ರಮಂದಿರ, ಕಾಳಿ ನದಿ ಉದ್ಯಾನವನ, ನಂದನಗದ್ದಾ ಟೋಲ್ ನಾಕಾ, ಶಿವಾಜಿ ಶಾಲೆ ರಸ್ತೆ, ಕಾಜುಭಾಗ-ಕಾರವಾರ ರಸ್ತೆ, ಡಾ|ಪಿಕಳೆ ರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಧಿಕಾರಿ ಪ್ರಕಾಶ ರಜಪೂತ್, ಕನಿಷ್ಕ, ಜಿಲ್ಲಾ ಪಂಚಾಯತ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ಎಂ.ಸಿ ಚಂದ್ರಶೇಖರ, ಜಿಲ್ಲಾಮಟ್ಟದ ವಿವಿಧ ಅ ಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ 100 ಕ್ಕೂ ಹೆಚ್ಚು ವಿಕಲಚೇತನರು ತಮ್ಮ ತ್ರಿಚಕ್ರ ವಾಹನಗಳೊಂದಿಗೆ ಭಾಗವಹಿಸಿದ್ದು, ಎಲ್ಲರಿಗೂ ಮತದಾನದ ಪ್ರತಿಜ್ಞಾವಿಧಿ ಭೋಧಿಸಲಾಯಿತು.