Advertisement

ಕಾರವಾರ: ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳ ಹೊಂಡ ಮುಚ್ಚಲು ಒತ್ತಾಯ

04:36 PM Oct 01, 2024 | Team Udayavani |

ಉದಯವಾಣಿ ಸಮಾಚಾರ
ಕಾರವಾರ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 69, ಕುಮಟಾ-ಶಿರಸಿ ಹಾಗೂ ರಾಜ್ಯ ಹೆದ್ದಾರಿ ಕದ್ರಾ-ಅಣಶಿ-ಜೊಯಿಡಾಗಳಲ್ಲಿ ಭಾರೀ ಪ್ರಮಾಣದ ಹೊಂಡಗಳಾಗಿ ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ ಶೀಘ್ರದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಉಂಟಾಗಿರುವ ಅವ್ಯವಸ್ಥೆ ಸರಿ ಪಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್‌ ಪಟಗಾರ ಒತ್ತಾಯಿಸಿದರು.

Advertisement

ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆ ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿದೆ. ಗುಡ್ಡಗಾಡಿನಲ್ಲಿ ಜನ ವಸತಿ ಪ್ರದೇಶಗಳು, ಗ್ರಾಮಗಳು ಹೆಚ್ಚಾಗಿವೆ.

ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳು ವ್ಯಾಪಾರ, ಪ್ರವಾಸೋದ್ಯಮಕ್ಕೆ ಆಧಾರವಾಗಿವೆ. ರಸ್ತೆ ದುರಸ್ತಿ ತುರ್ತು
ಅಗತ್ಯವಾಗಿದೆ. ಸುಸಜ್ಜಿತ ರಸ್ತೆಗಳು ಜಿಲ್ಲೆಗೆ ತೀರಾ ಅವಶ್ಯಕವಾಗಿವೆ. ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿ, ಹೊಂಡ ಬಿದ್ದು ಸಂಚಾರ ದುಸ್ತರವಾಗಿದೆ. ರಸ್ತೆಗಳಲ್ಲಿ ಹೊಂಡಗಳೇ ತುಂಬಿದ್ದು ಸಾವಿರಾರು ವಾಹನ ಸವಾರರು ನಿತ್ಯ ಹರಸಾಹಸ ಪಡುವಂತಾಗಿದೆ ಎಂದರು.

ಪ್ರತಿ ವರ್ಷವೂ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ, ರಸ್ತೆಗಳನ್ನು ಸರಿಪಡಿಸುವ ಕಾಮಗಾರಿ ಮಾಡಿರುತ್ತಾರೆ. ಆದರೆ ಮತ್ತೂಂದು ಮಳೆಗಾಲ ಪ್ರಾರಂಭವಾದರೆ ಅದೇ ದುಸ್ಥಿತಿ. ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಈ ವರ್ಷದ ಭಾರಿ ಮಳೆಗೆ ಜಿಲ್ಲೆಯ ಶಿರಸಿ, ಕುಮಟಾ, ಭಟ್ಕಳ, ಹೊನ್ನಾವರ, ಮುಂಡಗೋಡ ,ಯಲ್ಲಾಪುರ, ಅಂಕೋಲಾ ಸಂಪೂರ್ಣ ಹೆದ್ದಾರಿಗಳು ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಿದ್ದು ಪ್ರಯಾಣ ಪ್ರಯಾಸವಾಗಿದೆ. ಈ ರಸ್ತೆಯಲ್ಲಿ ಸಂಚರಿಸಿದ ವಾಹನಗಳು
ಗ್ಯಾರೇಜ್‌ ಸೇರಬೇಕಾದ ಪರಿಸ್ಥಿತಿ ಇದೆ ಎಂದರು.

ಕೂಡಲೇ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಕಾಮಗಾರಿ ಕೈಗೊಂಡು ಸಂಪೂರ್ಣ ಹೊಂಡ ಬಿದ್ದಿರುವುದನ್ನು ಸರಿಪಡಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು. 15 ದಿನದ ಒಳಗೆ ಜಿಲ್ಲೆಯಲ್ಲಿರುವ ಎಲ್ಲಾ ರಸ್ತೆಗಳ ಹೊಂಡಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಸಿದ್ಧಗೊಳಿಸಬೇಕು. ಇಲ್ಲವಾದಲ್ಲಿ ರಸ್ತೆ ಬಂದ್‌ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜಿಲ್ಲಾಡಳಿತದ ಮೂಲಕ
ಸರ್ಕಾರಕ್ಕೆ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಕರವೇ ಮನವಿ ಸಲ್ಲಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next