Advertisement

Karwar; ದ್ವೇಷ ಭಾಷಣ ಮಾಡಿದ ಅನಂತ ಕುಮಾರ್ ಹೆಗಡೆ ವಿರುದ್ಧ ಸೆ.505 ಅಡಿ ಪ್ರಕರಣ ದಾಖಲು

03:42 PM Jan 14, 2024 | Team Udayavani |

ಕಾರವಾರ: ದ್ವೇಷ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ‌ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಕುಮಟಾ ಪೊಲೀಸರು ಸ್ವಯಂ ಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಿದ್ದಾರೆ.

Advertisement

ದ್ವೇಷ ಭಾಷಣದ ಕಾರಣಕ್ಕೆ ಸೆಕ್ಷನ್ 505, ಶಾಂತಿ ಕದಡುವ ಮಾತಿನ ಕಾರಣಕ್ಕೆ ಸೆಕ್ಷನ್ 153 ಎ ಅಡಿಯಲ್ಲಿ ಸಂಸದರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳೀಯ ಮತ್ತು ರಾಜ್ಯ ಮಟ್ಟದ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧಾರಾಮಯ್ಯ ಅವರ ಬಗ್ಗೆ ಸಂಸದ ಅನಂತ ಕುಮಾರ್ ಬಳಸಿದ ಭಾಷೆ, ಚಿನ್ನದ ಪಳ್ಳಿ ಮಸೀದಿಯನ್ನು ಬಾಬರಿ ಮಸೀದಿ ತರಹ ಹೊಡೆದು ಹಾಕಲಾಗುವುದು, ರಣ ಭೈರವ ಎದ್ದಿದ್ದಾನೆ. ಅಹಿಂದ ಎಂಬ ಗತಿಗೆಟ್ಟ ಮಾನಸಿಕತೆ, ಅಲ್ಪಸಂಖ್ಯಾತರಿಗೆ ಮಾರಿಕೊಂಡ ಮುಖ್ಯಮಂತ್ರಿ ಎಂಬ ವಾಕ್ಯಗಳನ್ನು ಸಂಸದ ಅನಂತ ಕುಮಾರ್ ಹೆಗಡೆ ಬಳಸಿದ್ದರು. ಅಲ್ಲದೆ ಶಿರಸಿ ಸಿಪಿ ಬಝಾರ್ ಮಸೀದಿ ವಿಜಯ ವಿಠ್ಠಲ ದೇವಸ್ಥಾನ ಆಗಿದೆ. ಶ್ರೀರಂಗಪಟ್ಟಣದ ದೊಡ್ಡ ಮಸೀದಿ ಹನುಮಂತನ ದೇವಸ್ಥಾನವಾಗಿದೆ ಎಂದಿದ್ದರು. ನಮ್ಮ ವಿರೋಧಿ ಕಾಂಗ್ರೆಸ್ ಅಲ್ಲ. ಕಾಂಗ್ರೆಸ್ ಗೆ ಬಿಜೆಪಿ ಎದುರಿಸುವ ಮಾನಸಿಕತೆ ಇಲ್ಲ, ನಮ್ಮ ವಿರೋಧ ಸಿದ್ಧಾರಾಮಯ್ಯ. ನಮ್ಮ ವಿರೋಧಿಗಳು ಸನಾತನವನ್ನು ವಿರೋಧಿಸುವವರು. ಅವರ ವಿರುದ್ಧ ನಾವು ಸೇಡು ತೀರಿಸಿಕೊಳ್ಳಬೇಕು ಎಂದಿದ್ದರು.

ಈ ಹೇಳಿಕೆ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಕಾಂಗ್ರೆಸ್ಸಿಗರು, ಸಂಸದ ಸಮಾಜದ ಕೋಮು ಸೌಹಾರ್ದತೆ ಹಾಳುಗೆಡವುತ್ತಿದ್ದಾರೆ ಎಂದು ಟೀಕಿಸಿದ್ದರು. ಗೃಹ ಸಚಿವರು ಹಾಗೂ ಆರೋಗ್ಯ ಸಚಿವರ ಪ್ರತಿಕ್ರಿಯೆಗಳು ಸಹ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಇದನ್ನೆಲ್ಲಾ ಗಮನಿಸದ ಕುಮಟಾ ಪೋಲೀಸರು, ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next