ಕಾರವಾರ: ಜಿಲ್ಲಾ ಕೇಂದ್ರ ಕಾರವಾರ ಎಪಿಎಂಸಿ ಸಂಕಷ್ಟ ಎದುರಿಸುತ್ತಿದೆ. ರೈತರು ಸಹ ಭತ್ತ ಮಾರಲು ಬರುವುದು ಇಳಿಮುಖವಾಗಿದೆ.
ಅಂಕೋಲಾ ಎಪಿಎಂಸಿ ಕತೆ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಎಪಿಎಂಸಿಗಾಗಿ ಹಿಂದೆ ಕೃಷಿಕರಿಂದ ಖರೀದಿಸಿ ಭೂಮಿಗೆ ಪರಿಹಾರ ನೀಡುವ ಪ್ರಕ್ರಿಯೆ ಸಹ ಪೂರ್ಣ ಮುಗಿದಿಲ್ಲ. ಸರ್ಕಾರಗಳಿಂದ ಬರುವ ಆರ್ಥಿಕ ಅನುದಾನ ಸಹ ಕಡಿಮೆಯಾಗಿದೆ. ಎಪಿಎಂಸಿಗಳಿಗೆಬರುತ್ತಿದ್ದ ಆದಾಯವೂ ಕಡಿಮೆಯಾಗಿದೆ. ಹಾಗಾಗಿ ಇನ್ನೆರಡು ವರ್ಷದಲ್ಲಿ ಸರ್ಕಾರದ ಅಧೀನದ ಎಪಿಎಂಸಿಗಳು ಬಾಗಿಲು ಹಾಕುವ ಸನ್ನಿವೇಶ ಎದುರಿಸುತ್ತಿ ವೆ. ಎಪಿಎಂಸಿ ಭೂಮಿ ಬರುವ ದಿನಗಳಲ್ಲಿ ಖಾಸಗಿ ವ್ಯಾಪಾರಿಗಳ ಕೈಗೆ ಹೋದರೂ ಅಚ್ಚರಿಪಡಬೇಕಿಲ್ಲ.
ನೂತನ ಕೃಷಿ ಕಾಯ್ದೆ ಹಾಗೂ ನೂತನ ಎಪಿಎಂಸಿ ಕಾಯ್ದೆಗಳು ಎಪಿಎಂಸಿಗಳನ್ನು ಸಂಕಷ್ಟಕ್ಕೆ ತಳ್ಳಿವೆ ಎಂಬುದು ಅಲ್ಲಿನ ಆದಾಯವನ್ನು ಗಮನಿಸಿದರೆ ಕಣ್ಣಿಗೆ ರಾಚುತ್ತಿದೆ. ವರ್ಷದಿಂದ ವರ್ಷಕ್ಕೆ ಎಪಿಎಂಸಿಗೆ ಬರುವ ಆದಾಯ ಕುಸಿಯುತ್ತಿದೆ. ಕೋವಿಡ್ ಹಾಗೂ ನಂತರದ ದಿನಗಳಲ್ಲಿ ಎಪಿಎಂಸಿಗಳಲ್ಲಿ ಸಹ ರೈತರ ಚಟುವಟಿಕೆ ಕಡಿಮೆಯಾಗಿದೆ. ಇದಕ್ಕೆ ಕಾರಣ ಹೊಸ ಕೃಷಿ ಮತ್ತು ಹೊಸ ಎಪಿಎಂಸಿ ನೀತಿಗಳು ಎಂಬುದು ಸ್ಪಷ್ಟವಾಗುತ್ತಿದೆ. ಹೊಸ ಎಪಿಎಂಸಿ ನಿಯಮಗಳಿಂದ ಈಗ ಕೃಷಿ ಉತ್ಪನ್ನ ಖರಿದೀಸುವ ಮಧ್ಯವರ್ತಿ ಕೃಷಿಕನ ಬಳಿಗೆ ಹೋಗಿ ಕೃಷಿ ಉತ್ಪನ್ನ ಖರೀದಿಸಬಹುದು ಅಥವಾ ನಾನಿದ್ದಲ್ಲಿಗೆ ನೀ ಬಂದು ಕೃಷಿ ಉತ್ಪನ್ನ (ಮಾಲು) ಕೊಟ್ಟು ಹೋಗು ಎಂದು ಹೇಳಬಹುದು.
ಕೃಷಿ ಉತ್ಪನ್ನ ಖರೀದಿಸುವವ ಮತ್ತು ರೈತನ ಮಧ್ಯೆ ಸೇತುವೆಯಾಗಿದ್ದ ಎಪಿಎಂಸಿ ಕೃಷಿ ಉತ್ಪನ್ನದ ಮೇಲೆ ಹಾಕುತ್ತಿದ್ದ ಸುಂಕ ಹಾಗೂ ವ್ಯಾಪಾರಿಯಿಂದ ಕೃಷಿ ಉತ್ಪನ್ನ ಖರೀದಿ ಮೇಲೆ ಹಾಕುತ್ತಿದ್ದ ಸೆಸ್ ನಿಂತು ಹೋಗಿದೆ. ಆಥವಾ ಕಡಿಮೆಯಾಗಿದೆ. ಕೃಷಿ ಉತ್ಪನ್ನ ಖರೀದಿಸುವ ವ್ಯಾಪಾರಿ ಎಪಿಎಂಸಿ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ. ಅವರಷ್ಟಕ್ಕೆ ಅವರೇ ವ್ಯಾಪಾರ ಮಾಡಿಕೊಂಡು ಇರುವ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದ ರೈತರಿಗಂತೂ ಲಾಭವಿಲ್ಲ. ಖರೀದಿದಾರ ಹೇಳಿದ ದರಕ್ಕೆ ತನ್ನ ಉತ್ಪನ್ನ ಮಾರಾಟ ಮಾಡುವ ಸ್ಥಿತಿ ಬಂದಿದೆ ಎಂಬ ಅಭಿಪ್ರಾಯವು ಕೇಳಿ ಬರತೊಡಗಿದೆ.
ಕಾನೂನು ಜಾರಿ ಕೋಶಕ್ಕೆ ಕೆಲಸವೇ ಇಲ್ಲವಾಗಿದೆ: ಎಪಿಎಂಸಿಗೆ ಪೂರಕವಾಗಿ ಕೃಷಿ ಉತ್ಪನ್ನಗಳ ಸಂಚಾರದ ವೇಳೆ ಅವುಗಳನ್ನು ಪರಿಶೀಲಿಸುವ ಅಧಿಕಾರ ಕಾನೂನು ಜಾರಿ ಕೋಶಕ್ಕೆ ಇತ್ತು. ಈಗ ಈ ಕಾನೂನು ಜಾರಿ ಕೋಶಕ್ಕೆ ಕೆಲಸವೇ ಇಲ್ಲವಾಗಿದೆ. ಇಲ್ಲಿನ ಸಿಬ್ಬಂದಿ ಸರ್ಕಾರ ಅನ್ಯ ಕೆಲಸಕ್ಕೆ ನಿಯೋಜಿಸತೊಡಗಿದೆ. ಕೃಷಿ ಉತ್ಪನ್ನ ಖರೀದಿಸಿ ಅದನ್ನು ಲಾಭಕ್ಕೆ ಮಾರಿಕೊಳ್ಳುತ್ತಿದ್ದ ವ್ಯಾಪಾರಿಗಳಿಗೆ ಲೈಸೆನ್ಸ್ ನೀಡುವ ಕೆಲಸವನ್ನು ಎಪಿಎಂಸಿ ಮಾಡುತ್ತಿತ್ತು. ಈಗ ವ್ಯಾಪಾರಿ ನೇರವಾಗಿ ತನ್ನ ಪ್ಯಾನ್ ಕಾಡ್ ìನಿಂದ ತನ್ನ ವಹಿವಾಟು ತೋರಿಸಿ ಸರ್ಕಾರಕ್ಕೆ ತೆರಿಗೆ ಕಟ್ಟಬಹುದು ಎಂದು ಸರ್ಕಾರ ಕಾನೂನಿಗೆ ತಿದ್ದುಪಡಿ ಮಾಡಿದೆ. ಇದರಿಂದ ವ್ಯಾಪಾರಿಗಳು ಕೃಷಿ ಸಂಬಂಧಿ ತ ಎಪಿಎಂಸಿ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ. ಕೃಷಿ ಉತ್ಪನ್ನ ಖರೀದಿ ಮತ್ತು ಮಾರಾಟದಲ್ಲಿ ಮೇಲ್ನೋಟಕ್ಕೆ ಕೃಷಿಕನಿಗೆ ಸ್ವಾತಂತ್ರÂ ನೀಡಿದಂತೆ ಕಂಡರೂ, ಅದರ ಲಾಭ ಮಧ್ಯವರ್ತಿಗಳಿಗೆ ಹಾಗೂ ಕೃಷಿ ಉತ್ನನ್ನ ಖರೀದಿಸುವ ವ್ಯಾಪಾರಿ ಮತ್ತು ಸಗಟು ವ್ಯಾಪಾರಿ ಹಾಗೂ ಕೃಷಿ ಉತ್ಪನ್ನ ರಕ್ಷಿಸಿಡುವ ಗೋಡಾನ್ ಮಾಲೀಕರಿಗೆ ಎಂಬುದು ಎಂಪಿಎಂಸಿಗಳಲ್ಲಿ ಕೆಲಸ ಮಾಡುವವರ ವಾದ. ಹೆಸರು ಹೇಳಲು ಇಚ್ಚಿಸದ ಎಪಿಎಂಸಿ ಸಿಬ್ಬಂದಿಗಳಿಗೆ ಎಪಿಎಂಸಿಗಳು ಮುಚ್ಚುವ ಭೀತಿ ಶುರುವಾಗಿದೆ.
ಎಪಿಎಂಸಿಗಳಿಗೆ ಕೃಷಿಕರಿಂದ ಸಿಗುತ್ತಿದ್ದ ಮಾರ್ಕೇಟ್ ಸಹ ನಿಂತು ಹೋಗಿದೆ. ಭತ್ತವನ್ನು ಎಪಿಎಂಸಿಗೆ ತಂದು ಮಾರುವ ಪದ್ಧತಿ ಸಹ ಇಳಿಮುಖವಾಗಿದೆ.
2019-20 ರಲ್ಲಿ ಎಪಿಎಂಸಿಗೆ ಬಂದ ಆದಾಯ: ಕಾರವಾರ -ಅಂಕೋಲಾ ಎಪಿಎಂಸಿಗಳಿಗೆ 2018-19 ರಲ್ಲಿ 56 ಲಕ್ಷ ರೂ. ಆದಾಯ ಬಂದಿತ್ತು. 2019-20 ರಲ್ಲಿ 75 ಲಕ್ಷ 58 ಸಾವಿರ ರೂ. ಆದಾಯ ಬಂದಿತ್ತು. ಇದರಲ್ಲಿ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾದ ಪಾಲು ಶೇ.75 ರಷ್ಟು, ಎಪಿಎಂಸಿ ಸೆಸ್ ಹಾಗೂ ಮಾರುಕಟ್ಟೆ ಕರದಿಂದ ಶೇ.25 ರಷ್ಟು ಪಾಲು ಇದೆ. ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಂಡ ಎಫ್ ಸಿಐ ಬಾಡಿಗೆ ರೂಪದಲ್ಲಿ ಹಣವನ್ನು ಎಪಿಎಂಸಿಗೆ ಸಂದಾಯ ಮಾಡುವ ಪದ್ಧತಿ ಇದೆ. 2020-21 ರಲ್ಲಿ ಕಳೆದ ಎಪ್ರಿಲ್‌ದಿಂದ ಈ ಜನವರಿ ತನಕ ಎಪಿಎಂಸಿಗೆ ಬಂದ ಆದಾಯ 28.25 ಲಕ್ಷ ರೂ. ಮಾತ್ರ. ಈ ಅಂಕಿ ಅಂಶಗಳು ಎಪಿಎಂಸಿಗಳ ಆದಾಯ ಕುಸಿಯುತ್ತಿರುವುದನ್ನು ಸೂಚಿಸುತ್ತಿವೆ.
ಭೂಮಿಗೆ ಪರಿಹಾರದ ನೀಡಿಕೆಗೆ ಎಪಿಎಂಸಿ ಭೂಮಿ ಮಾರಾಟ: ಎಪಿಎಂಸಿ ಬೆಳೆಸಲು ಕಾರವಾರದಲ್ಲಿ ಹತ್ತು ಎಕರೆ ಭೂ ಸ್ವಾಧಿಧೀನ ಮಾಡಿಕೊಳ್ಳಲಾಗಿತ್ತು. ಅಂಕೋಲಾದಲ್ಲಿ ಸಹ 10.15 ಎಕರೆ ಭೂಮಿ ಕೃಷಿಕರಿಂದ ಖರೀದಿಸಲಾಗಿತ್ತು. ಅವರಿಗೆ ಪರಿಹಾರವಾಗಿ ಎಪಿಎಂಸಿ ಈಗಾಗಲೇ 2 ಕೋಟಿ ರೂ..ಪರಿಹಾರ ವಿತರಿಸಿದೆ. ಆದರೆ ಎಪಿಎಂಸಿಗೆ ಭೂಮಿ ನೀಡಿದವರು ಕೋರ್ಟ್ ಮೆಟ್ಟಿಲು ಹತ್ತಿ ಹೆಚ್ಚಿನ ಪರಿಹಾರ ಕೇಳಿದರು. ಕಾರವಾರದಲ್ಲಿ 8 ಪ್ರಕರಣ, ಅಂಕೋಲಾದಲ್ಲಿ 1 ಪ್ರಕರಣ ಹೆಚ್ಚಿನ ಪರಿಹಾರ ಕೋರಿದ ಪ್ರಕರಣಗಳು ಕೋರ್ಟ್‌ನಲ್ಲಿವೆ. ಈ ಮೊತ್ತ ಪಾವತಿಸಲು ಕಾರವಾರದಲ್ಲಿ 50 ಲಕ್ಷ, ಅಂಕೋಲಾ ಪ್ರಕರಣಕ್ಕೆ 1 ಕೋಟಿ ರೂ.ಬೇಕಿದೆ. ಕಾರವಾರದ ಪ್ರಕರಣಗಳಲ್ಲಿ ಪರಿಹಾರ ನೀಡಿಕೆಗೆ ಇದ್ದ 10 ಎಕರೆ ಜಮೀನಿನಲ್ಲಿ 4 ಎಕರೆ ಮಾರಾಟ ಮಾಡಲಾಗಿದೆ. ಕಾರವಾರ ಎಪಿಎಂಸಿಗೆ 6.1 ಎಕರೆ ಉಳಿದಿದೆ. ಒಂದೆಡೆ ಸಾಲದ ಸುಳಿ ಹಾಗೂ ಅನುದಾನದ ಕೊರತೆಯನ್ನು ಎಪಿಎಂಸಿಗಳು ಎದುರಿಸುತ್ತಿವೆ.