Advertisement

ಚಂದನವನದಲ್ಲಿ ಕಾರುಣ್ಯಾ ವಿಹಾರ

11:54 AM Jan 05, 2019 | Team Udayavani |

ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯವಾಗಿದ್ದು, ಜನಪ್ರಿಯತೆ ಗಳಿಸಿಕೊಂಡಿರುವ ಅಚ್ಚ ಕನ್ನಡದ ಹುಡುಗಿ ಕಾರುಣ್ಯಾ ರಾಮ್‌. 2015ರಲ್ಲಿ ತೆರೆಕಂಡ ವಜ್ರಕಾಯ ಚಿತ್ರದ ಮೂಲಕ ಬಿಗ್‌ ಸ್ಕ್ರೀನ್‌ಗೆ ಪದಾರ್ಪಣೆ ಮಾಡಿದ ಕಾರುಣ್ಯಾ, ಕೊನೆಗೆ ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋ ಸೀಜನ್‌-4ರಲ್ಲಿ ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸುವ ಅವಕಾಶವನ್ನು ಪಡೆದುಕೊಂಡರು. ಬಿಗ್‌ಬಾಸ್‌ ಮನೆಯೊಳಗೆ ಹತ್ತಿರದ ಪ್ರತಿಸ್ಪರ್ಧೆಗಳಿಗೆ ಉತ್ತಮ ಸ್ಪರ್ಧೆ ನೀಡಿ ಹೊರಬಂದ ಕಾರುಣ್ಯಾಗೆ ಸಹಜವಾಗಿಯೇ ಚಿತ್ರರಂಗದಲ್ಲಿ ಒಂದಷ್ಟು ಅವಕಾಶಗಳು ಅರಸಿ ಬಂದವು. ಬಿಗ್‌ಬಾಸ್‌ ರಿಯಾಲಿಟಿ ಶೋ ನಿಂದ ಹೊರಬರುತ್ತಿದ್ದಂತೆ, ಕಾರುಣ್ಯಾ ಅಭಿನಯಿಸಿದ ಎರಡು ಕನಸು, ಕಿರಗೂರಿನ ಗಯ್ನಾಳಿಗಳು ಚಿತ್ರಗಳು ತೆರೆಗೆ ಬಂದವು. ಈ ಎರಡೂ ಚಿತ್ರಗಳು ಕಾರುಣ್ಯಾಗೆ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ತಂದುಕೊಟ್ಟವು. ಕಾರುಣ್ಯಾ ಕನ್ನಡದ ಭರವಸೆಯ ನಟಿ ಯರ ಸಾಲಿನಲ್ಲಿ ಹೆಸರು ಗಿಟ್ಟಿಸಿಕೊಳ್ಳಲು ಯಶಸ್ವಿಯಾದರು. ಇದಾದ ಬಳಿಕ ಇನ್ನೇನು ಕಾರುಣ್ಯಾ ರಾಮ್‌ ಕನ್ನಡದಲ್ಲಿ ಬ್ಯುಸಿ ಯಾಗಲಿದ್ದಾರೆ ಎಂದು ಸಿನಿಪ್ರಿಯರು ಅಂದುಕೊಳ್ಳುವ ಹೊತ್ತಿಗೆ ಕಾರುಣ್ಯಾ ಚಿತ್ರರಂಗದಲ್ಲಿ ಕೊಂಚ ಗ್ಯಾಪ್‌ ತೆಗೆದುಕೊಂಡರು. 

Advertisement

ಈ ಬಗ್ಗೆ ಮಾತನಾಡುವ ಕಾರುಣ್ಯಾ ರಾಮ್‌, ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆ ಒಂದಷ್ಟು ಸಿನಿಮಾಗಳ ಆಫ‌ರ್ ಬಂದಿದ್ದೇನೋ ನಿಜ. ಆದರೆ, ಕೆಲವು ಚಿತ್ರಗಳ ಕಥೆ ಇಷ್ಟವಾದ್ರೆ, ಪಾತ್ರಗಳು ನನಗೆ ಇಷ್ಟವಾಗುತ್ತಿರಲಿಲ್ಲ. ಎರಡೂ ಇಷ್ಟವಾದ್ರೆ ಬೇರೆ ಕಾರಣಗಳಿಂದ ಆ ಸಿನಿಮಾಗಳು ಮುಂದುವರೆಯಲಿಲ್ಲ. ಇವೆಲ್ಲದರ ನಡುವೆ ನಾನು ಕೂಡ ಒಂದಷ್ಟು ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿಯಾದ ಕಾರಣ ಹೆಚ್ಚಾಗಿ ಚಿತ್ರರಂಗದಿಂದ ಬರುವ ಅವಕಾಶಗಳತ್ತ ಗಮನಹರಿಸಲಾಗಲಿಲ್ಲ. ಹಾಗಾಗಿ, ಬಂದ ಅವಕಾಶಗಳಲ್ಲಿ ನನಗೆ ಇಷ್ಟವಾದ ಸಿನಿಮಾಗಳನ್ನು ಮಾತ್ರ ಒಪ್ಪಿಕೊಂಡು ಅಭಿನಯಿಸಿದೆ ಎನ್ನುತ್ತಾರೆ. 

ಸದ್ಯ ಕಾರುಣ್ಯಾ ರಾಮ್‌ ನಿರಂಜನ್‌ ಒಡೆಯರ್‌ ನಾಯಕನಾಗಿರುವ ರಣಭೂಮಿ, ಮಂಜು ಸ್ವರಾಜ್‌ ನಿರ್ದೇಶನದ ಎಸ್‌. ವಿ. ಬಾಬು ನಿರ್ಮಾಣದ ಇನ್ನೂ ಹೆಸರಿಡದ ಹಾರರ್‌-ಕಾಮಿಡಿ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಹೊಸ ಪ್ರತಿಭೆಗಳಾದ ಪುನೀತ್‌ ನಂದನ್‌, ಅಶ್ವಿ‌ನ್‌ ರಾವ್‌ ಪಲ್ಲಕ್ಕಿ, ಶೋಭಿನ್‌ ನಾಯಕ ನಟರಾಗಿ ಅಭಿನಯಿಸುತ್ತಿರುವ ಕೆಫೆ ಗ್ಯಾರೇಜ್‌ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಮೂರು ಚಿತ್ರಗಳ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಈ ವರ್ಷಾಂತ್ಯದೊಳಗೆ ಕೆಲವೇ ತಿಂಗಳುಗಳ ಅಂತರದಲ್ಲಿ ಒಂದರ ಹಿಂದೊಂದು ಚಿತ್ರಗಳು ತೆರೆಗೆ ಬರಲಿವೆ. 

ಇನ್ನು ಚಿತ್ರರಂಗದಲ್ಲಿ ತಮಗೆ ಬರುತ್ತಿರುವ ಅವಕಾಶಗಳ ಬಗ್ಗೆ ಮಾತನಾಡುವ ಕಾರುಣ್ಯಾ, ಕನ್ನಡದ ಜತೆಗೆ ತಮಿಳು, ತೆಲುಗು ಮತ್ತು ಮಲೆಯಾಳಂನಿಂದಲೂ ಒಂದಷ್ಟು ಸಿನಿಮಾಗಳ ಆಫ‌ರ್ ಬರುತ್ತಿವೆ. ಆದರೆ, ನನ್ನ ಮೊದಲ ಆದ್ಯತೆ ಕನ್ನಡಕ್ಕೆ. ಈಗಾಗಲೇ ಕನ್ನಡದಲ್ಲಿ ಒಂದೆರಡು ಚಿತ್ರಗಳು ಮಾತುಕತೆಯ ಹಂತದಲ್ಲಿದೆ. ಶೀಘ್ರದಲ್ಲೇ ಆ ಚಿತ್ರಗಳೂ ಅನೌನ್ಸ್‌ ಆಗಲಿವೆ. ಕಳೆದ ವರ್ಷ ಸಿನಿಮಾದಿಂದ ಹೊರಗಿದ್ದೆ. ಈ ವರ್ಷ ಕಂಪ್ಲೀಟ್‌ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೆ. ಹೊಸವರ್ಷದ ಮೊದಲ ದಿನದಿಂದಲೇ ಕೆಲಸ ಶುರು ಮಾಡಿದ್ದೇನೆ ಎನ್ನುತ್ತಾರೆ.

ಒಳ್ಳೆಯ ನಟಿಯಾಗಬೇಕು ಎಂಬುದು ನನ್ನ ಕನಸು. ಹಾಗಾಗಿ ನನ್ನ ಮೊದಲ ಆದ್ಯತೆ ನನಗೆ ಸಿಗುವ ಪಾತ್ರಗಳ ಕಡೆಗೆ ಇರುತ್ತದೆ. ನನ್ನ ಮಟ್ಟಿಗೆ ಪ್ರತಿ ಸಿನಿಮಾ ಪ್ರತಿ ಪಾತ್ರ ಕೂಡ ಹೊಸದಾಗಿರುತ್ತದೆ. ಕೇವಲ ಹೀರೋಯಿನ್‌ ಪಾತ್ರಗಳು ಮಾತ್ರ ನನಗೆ ಸಿಗಬೇಕು ಎಂಬ ನಿರೀಕ್ಷೆ ಇಲ್ಲ. ಎಲ್ಲ ತರದ ಪಾತ್ರಗಳನ್ನು ಮಾಡಬೇಕು ಎಂಬ ಆಸೆಯಿದೆ. ನಾನು ಇಲ್ಲಿಯವರೆಗೆ ಮಾಡಿದ ಎಲ್ಲ ಚಿತ್ರಗಳಲ್ಲೂ ನನ್ನ ಜೊತೆಗೆ ಸಹ ಪಾತ್ರಗಳಿದ್ದರೂ, ನನ್ನ ಪಾತ್ರಗಳಿಗೆ ಅದರದ್ದೇ ಆದ ಮಹತ್ವವಿತ್ತು. ಸಿಗುವ ಪಾತ್ರಗಳಿಗಿಂತ ಅದಕ್ಕಿರುವ ಮಹತ್ವವಷ್ಟೇ ನನಗೆ ಮುಖ್ಯ ಎನ್ನುತ್ತಾರೆ ಕಾರುಣ್ಯಾ. 

Advertisement
Advertisement

Udayavani is now on Telegram. Click here to join our channel and stay updated with the latest news.

Next