ಚೆನ್ನೈ: ಸಾಕಷ್ಟು ವಾದ-ವಿವಾದಗಳ ನಡುವೆ ಕೊನೆಗೂ ಚೆನ್ನೈಯ ಮರೀನಾ ಬೀಚ್‌ನಲ್ಲಿಯೇ ಡಿಎಂಕೆ ಪರಮೋಚ್ಚ ನಾಯಕ ಎಂ. ಕರುಣಾನಿಧಿ ಅವರ ಅಂತ್ಯಕ್ರಿಯೆ ಬುಧವಾರ ನೆರವೇರಿತು. ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಸಮೀಪದಲ್ಲಿಯೇ ಕರುಣಾ ಕೊನೆಯದಾಗಿ ವಿರಮಿಸಿದರು. ಮರೀನಾ ಬೀಚ್‌ನಲ್ಲಿ ಕರುಣಾನಿಧಿ ಅಂತ್ಯಕ್ರಿಯೆ ನಡೆಸಬೇಕು ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ಬೆಳಗ್ಗೆ ತೀರ್ಪು ನೀಡಿದ ಬಳಿಕ ಸಂಜೆ ಡಿಎಂಕೆ ಪರಮೋಚ್ಚ ನಾಯಕನ ಅಂತ್ಯ ಕ್ರಿಯೆ ಸಕಲ ಸರಕಾರಿ ಗೌರವಗಳ ಜತೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಲಕ್ಷ ಗಟ್ಟಲೆ ಅಭಿಮಾನಿಗಳು, ಗಣ್ಯರು ಹಾಜರಿದ್ದರು. ಇದೇ ವೇಳೆ ರಾಜಾಜಿ ಹಾಲ್ ಸಮೀಪ ಉಂಟಾಗಿದ್ದ ಕಾಲ್ತುಳಿತದಲ್ಲಿ ಇಬ್ಬರು ಅಸುನೀಗಿ, 30 ಮಂದಿ ಗಾಯಗೊಂಡಿದ್ದಾರೆ.
ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್, ನಿರ್ಮಲಾ ಸೀತಾರಾಮನ್, ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಸಹಿತ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರಮಟ್ಟದ ಹಲವು ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ರಾಜಾಜಿ ಹಾಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಕರುಣಾನಿಧಿ ಪಾರ್ಥಿವ ಶರೀರ ಇರಿಸಲಾಗಿತ್ತು. ಅನಂತರ ಮರೀನಾ ಬೀಚ್‌ಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತಂದು ಸಕಲ ಸೇನಾ ಗೌರವಗಳೊಂದಿಗೆ ಕರುಣಾನಿಧಿ ಸಮಾಧಿ ಮಾಡಲಾಯಿತು. ಕರುಣಾನಿಧಿ ಪತ್ನಿ ರಜತಿ ಅಮ್ಮಾಳ್ ಹಾಗೂ ಪುತ್ರರು ಮತ್ತು ಪುತ್ರಿಯರು ಪುಷ್ಪಗುತ್ಛವಿಟ್ಟು ನಮಸ್ಕರಿಸಿದರು. ಅಂತ್ಯಸಂಸ್ಕಾರದ ವೇಳೆ ಯಾವುದೇ ಹಿಂದೂ ವಿಧಿ ವಿಧಾನಗಳನ್ನೂ ಅನುಸರಿಸಿಲ್ಲ.
ಹೈಕೋರ್ಟ್ ಆದೇಶ: ಅಂತ್ಯಸಂಸ್ಕಾರ ಸ್ಥಳ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ ಬೆಳಗ್ಗೆ 8 ಗಂಟೆಗೆ ಪುನರಾರಂಭಿಸಿತು. ಹಿಂದೆ ಹಲವು ಮುಖಂಡರ ಅಂತ್ಯಸಂಸ್ಕಾರವನ್ನು ಮರೀನಾ ಬೀಚ್‌ನಲ್ಲೇ ನಡೆಸಲಾಗಿದ್ದು, ಕರುಣಾನಿಧಿ ಅಂತ್ಯ ಸಂಸ್ಕಾರವನ್ನೂ ಮರೀನಾ ಬೀಚ್‌ನಲ್ಲೇ ನಡೆಸಬೇಕೆಂದು ಆದೇಶಿಸಿತು. ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಮತ್ತು ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್‌ರನ್ನು ಕೂಡ ಇಲ್ಲೇ ಸಮಾಧಿ ಮಾಡಲಾಗಿದೆ. ಅಷ್ಟೇ ಅಲ್ಲ, ಮಾಜಿ ಸಿಎಂಗಳಾದ ಸಿ.ಆರ್.ರಾಜಗೋಪಾಲ್ ಆಚಾರಿ, ಕೆ.ಕಾಮರಾಜ್ ಮತ್ತು ಎಂ.ಭಕ್ತವತ್ಸಲಂರನ್ನೂ ಇಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ. ಹೀಗಾಗಿ ಇದೇ ಕಾರಣವನ್ನು ನೀಡಿ ಕೋರ್ಟ್ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಮರೀನಾ ಬೀಚ್‌ನಲ್ಲಿ ಅವಕಾಶ ನೀಡಬೇಕು. ಹೀಗಾಗಿ ಮರೀನಾ ಬೀಚ್‌ನಲ್ಲಿ ಸಮಾಧಿ ಸ್ಥಳವನ್ನು ಒದಗಿಸಬೇಕು ಎಂದು ಕನ್ನಡಿಗ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ನೇತೃತ್ವದ ನ್ಯಾಯಪೀಠ ಆದೇಶಿಸಿತು.
33 ವರ್ಷಗಳ ಹಿಂದೆಯೇ ಬರಹ
ಜೀವನಪೂರ್ತಿ ವಿಶ್ರಾಂತಿ ಇಲ್ಲದೇ ದುಡಿದವರು ಇಲ್ಲಿ ವಿಶ್ರಾಂತಿ ಪಡೆಯುತ್ತಾರೆ ಎಂಬುದಾಗಿ ಕರುಣಾನಿಧಿ ಶವಪೆಟ್ಟಿಗೆಯ ಮೇಲೆ ಕೆತ್ತಲಾಗಿತ್ತು. ಕುತೂಹಲಕಾರಿ ಅಂಶವೆಂದರೆ 33 ವರ್ಷಗಳ ಹಿಂದೆಯೇ ಅದನ್ನು ಕೆತ್ತಲಾಗಿತ್ತು.