ಹರಪನಹಳ್ಳಿ: ರಾಜ್ಯ ರಾಜಕಾರಣದಲ್ಲಿ ಮತ್ತೆ ಧೂಳೆಬ್ಬಿಸಲು ರೆಡ್ಡಿ ಸೋದರರು ಕೌಟುಂಬಿಕ ವೈಮನಸ್ಸು ಮರೆತು ಒಂದಾಗಿ ದ್ದಾರೆ. ಆಪ್ತ ಗೆಳೆಯ ಶ್ರೀರಾಮುಲು ಜತೆ ಗೂಡಿ ಈ ಬಾರಿ ಚುನಾವಣೆಯಲ್ಲಿ ವಿರೋಧಿ ಗಳಿಗೆ ಮಣ್ಣು ಮುಕ್ಕಿಸಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.
ಅಕ್ರಮ ಗಣಿ ಆರೋಪದಡಿ ಜೈಲು ಪಾಲಾಗಿದ್ದ ಜನಾರ್ದನ ರೆಡ್ಡಿ ಚುನಾವಣಾ ಕಣದ ಹಿಂದೆ ನಿಂತು ಒಂದೊಂದೇ ದಾಳ ಉರುಳಿಸುತ್ತಿದ್ದಾರೆ. ಇದರ ಒಂದು ಭಾಗವಾಗಿ ಹರಪನಹಳ್ಳಿ ಕ್ಷೇತ್ರದಿಂದ ತಮ್ಮ ಸಹೋದರ ಕರುಣಾಕರ ರೆಡ್ಡಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎ.23ರಂದು ಕರುಣಾಕರ ರೆಡ್ಡಿ ಸಹೋದರರ ಜತೆಗೂಡಿಯೇ ನಾಮಪತ್ರ ಸಲ್ಲಿಸಲಿದ್ದಾರೆ!
ರೆಡ್ಡಿ ಸಹೋದರರಲ್ಲಿನ ವೈಮನಸ್ಸು, ಮಿತ್ರರಾಗಿದ್ದ ಹೊಸಪೇಟೆ ಆನಂದ್ ಸಿಂಗ್, ಕೂಡ್ಲಿಗಿ ನಾಗೇಂದ್ರ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರಿಂದ ರೆಡ್ಡಿ ಪಾಳಯದ ಶಕ್ತಿ ಕುಗ್ಗಿತ್ತು. ಅಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಂತೆಯೇ ಎಚ್ಚೆತ್ತು ಕೊಂಡ ಸಹೋದರರು ತಮ್ಮ ವೈಮನಸ್ಸನ್ನೆಲ್ಲ ಬದಿಗಿಟ್ಟು ರಾಜಕೀಯವಾಗಿ ಹಿಡಿತ ಸಾಧಿ ಸಲು ಮುಂದಾಗಿದ್ದಾರೆ.
ದಾವಣಗೆರೆಯಲ್ಲಿದ್ದ ಹರಪನಹಳ್ಳಿ ತಾಲೂಕು ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಗೊಂಡಿರುವುದು ವರವಾಗಿದೆ. ರೆಡ್ಡಿ ತೆರೆಮರೆ ಯಲ್ಲೇ ನಿಂತು ರಾಜಕೀಯದ ಬಲೆ ಹೆಣೆದು ಕಾಂಗ್ರೆಸ್‌ಗೆ ಒಂದರ ಮೇಲೆ ಒಂದು ಶಾಕ್ ಕೊಡಲಾರಂಭಿಸಿದ್ದಾರೆ. ಆರಂಭದಲ್ಲಿ ಬಳ್ಳಾರಿಯ ಪ್ರಭಾವಿಗಳಾದ ಮಾಜಿ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ, ಎನ್.ವೈ. ಗೋಪಾಲಕೃಷ್ಣ ಕುಟುಂಬವನ್ನು ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾದರು. ಕೂಡ್ಲಿಗಿ ಕ್ಷೇತ್ರದ ಶಾಸಕ ನಾಗೇಂದ್ರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ ಶಾಸಕ ಎಂ.ಪಿ. ರವೀಂದ್ರ ಬಲಗೈ ಬಂಟ, ವಾಲ್ಮೀಕಿ ಸಮಾಜದ ಮುಖಂಡ, ಕೆಪಿಸಿಸಿ ಸದಸ್ಯ ಕೋಡಿಹಳ್ಳಿ ಭೀಮಪ್ಪ ಮುನಿಸಿ ಕೊಂಡಿದ್ದರು. ಅವರನ್ನೂ ಬಿಜೆಪಿಗೆ ಕರೆ ತಂದರು. ಈ ಮೂಲಕ ಎಂ.ಪಿ. ರವೀಂದ್ರ ಶಕ್ತಿ ಕುಂದಿಸಿ ಕರುಣಾಕರ ರೆಡ್ಡಿ ಗೆಲುವಿಗೆ ವೇದಿಕೆ ಸಿದ್ಧಪಡಿಸಿದ್ದಾರೆ.
ಹರಪನಹಳ್ಳಿ ಕ್ಷೇತ್ರದಲ್ಲಿ ವಲಸಿಗರು ಮತ್ತು ಸ್ಥಳೀಯರು ಎನ್ನುವ ಭಿನ್ನಮತಕ್ಕೆ ನೀರೆರೆದ ಶ್ರೀರಾಮುಲು ಸ್ಥಳೀಯ ನಾಯಕರಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಆದರೆ ಜನಾರ್ದನ ರೆಡ್ಡಿ ಆಣತಿಯಂತೆ ಅಂತಿಮ ಹಂತದಲ್ಲಿ ಕರುಣಾಕರ ರೆಡ್ಡಿಗೆ ಟಿಕೆಟ್ ಕೊಡಿಸುವ ಮೂಲಕ ಸ್ಥಳೀಯ ಮುಖಂಡ ಎನ್. ಕೊಟ್ರೇಶ್ ಬೆಂಬಲಿಗರಿಗೆ ಶಾಕ್ ನೀಡಿದ್ದಾರೆ. ಬಿಎಸ್‌ವೈ ಆಪ್ತ ಎನ್. ಕೊಟ್ರೇಶ್‌ಗೆ ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಬಹುತೇಕ ಖಚಿತ ಎಂಬ ಸುದ್ದಿ ಹರಿದಾಡಿತ್ತು. ಕರುಣಾ ಕರ ರೆಡ್ಡಿ ಜೆಡಿಎಸ್ ಸೇರಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಕೊನೆ ಕ್ಷಣದಲ್ಲಿ ರೆಡ್ಡಿ ಮತ್ತು ರಾಮುಲು ತಮ್ಮ ತಂತ್ರಗಾರಿಕೆ ಪ್ರದರ್ಶಿಸಿದ್ದಾರೆ. ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಹಾಗೂ ಶ್ರೀರಾಮುಲು ಒಂದಾಗಿ ಹರಪನಹಳ್ಳಿಯಲ್ಲಿ ಕರುಣಾಕರ ರೆಡ್ಡಿ ಗೆಲುವಿಗೆ ಶ್ರಮಿಸಲು ಪಣ ತೊಟ್ಟಿದ್ದಾರೆ. ಇಡೀ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸಲು ರೆಡ್ಡಿ ಆ್ಯಂಡ್ ಟೀಂ ತಂತ್ರಗಾರಿಕೆ ರೂಪಿಸಿದೆ.
ಮರೆಯಾದ ಮುನಿಸು
ಶ್ರೀರಾಮುಲು ಬಿಎಸ್ಸಾರ್ ಪಕ್ಷ ಕಟ್ಟಿದ್ದರೂ ಕರುಣಾಕರ ರೆಡ್ಡಿ ಬಿಜೆಪಿ ಬಿಟ್ಟಿರಲಿಲ್ಲ. ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲು ಸೇರಿದಾಗ ಕುಟುಂಬ ದವ ರೊಂದಿಗೆ ಗುರುತಿಸಿಕೊಂಡಿರಲಿಲ್ಲ. ರೆಡ್ಡಿ ಮಗಳ ಮದುವೆಗೂ ಕರುಣಾಕರ ರೆಡ್ಡಿ ಹೋಗಿರ ಲಿಲ್ಲ. ಬಳ್ಳಾರಿಯ ಸುಷ್ಮಾ ಕಾಲೋನಿ ನಿವೇಶನಗಳ ಸಂಬಂಧ ರಾಮುಲು- ಕರುಣಾಕರ ರೆಡ್ಡಿ ನಡುವೆ ಮನಸ್ತಾಪ ಉಂಟಾಗಿ ರಾಮುಲು ವಿರುದ್ಧ ಕರುಣಾಕರ ರೆಡ್ಡಿ ದೂರು ದಾಖಲಿಸಿದ್ದರು. ಪ್ರತಿಯಾಗಿ ಶ್ರೀರಾಮುಲು ಬೆಂಬಲಿಗರು ಕರುಣಾಕರ ರೆಡ್ಡಿ ವಿರುದ್ಧ ಜಾತಿ ನಿಂದನೆ ಕೇಸು ದಾಖಲಿಸಿದ್ದರು. ಈಗ ಇವೆಲ್ಲವನ್ನೂ ಮರೆತು ವಿರೋಧಿಗಳನ್ನು ಹಣಿಯಲು ಒಟ್ಟಾಗಿದ್ದಾರೆ.
– ಎಸ್.ಎನ್.ಕುಮಾರ್ ಪುಣಬಗಟ್ಟಿ