ಬೆಂಗಳೂರು: ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಸೆಳೆದುಕೊಳ್ಳುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ನ ಮಾಜಿ ಸಚಿವ ಎಂ.ವೈ.ಘೋರ್ಪಡೆ ಅವರ ಪುತ್ರ ಕಾರ್ತಿಕ್ ಗೋರ್ಪಡೆ ಮತ್ತು ವಿಜಯನಗರ ಕ್ಷೇತ್ರದ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಬಿಜೆಪಿಗೆ ಸೇರಿದ್ದಾರೆ.
ಸೋಮವಾರ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಕಾರ್ತಿಕ್ ಘೋರ್ಪಡೆ ಮತ್ತು ಗವಿಯಪ್ಪ ಬಿಜೆಪಿ ಸೇರಿದ್ದಾರೆ. ಕೇಂದ್ರ ಸಚಿವರಾದ ಅನಂತಕುಮಾರ್ ಮತ್ತು ಪ್ರಕಾಶ್ ಜಾವಡೇಕರ್ ಇದಕ್ಕೆ ಸಾಕ್ಷಿಯಾದರು. ಇದರೊಂದಿಗೆ ಬಳ್ಳಾರಿ ಬಿಜೆಪಿ ಶಾಸಕರನ್ನು ಸೆಳೆದುಕೊಳ್ಳುವ ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಹೆಣೆದಿದೆ.
ಸಂಡೂರಿನ ರಾಜಮನೆತನದವರಾಗಿರುವ ಘೋರ್ಪಡೆ ಕುಟುಂಬ ಈ ಹಿಂದೆ ಬಳ್ಳಾರಿ ಜಿಲ್ಲೆಯನ್ನು ಕಾಂಗ್ರೆಸ್ ಹಿಡಿತದಲ್ಲಿಟ್ಟುಕೊಂಡಿತ್ತು. ಅದರಲ್ಲೂ ಎಂ.ವೈ.ಘೋರ್ಪಡೆ ಅವರು ಪಕ್ಷವನ್ನು ಹೆಚ್ಚು ಬಲಿಷ್ಠಗೊಳಿಸಿದ್ದರು. ಆದರೆ, ಗಣಿ ದಣಿಗಳ ರಾಜಕೀಯ ಆರಂಭವಾದ ಮೇಲೆ ಬಳ್ಳಾರಿ ರಾಜಕಾರಣ ಘೋರ್ಪಡೆ ಕುಟುಂಬದ ದೂರ ಸರಿದಿತ್ತು. ಲಾಡ್ ಕುಟುಂಬ ಮಾತ್ರ ಪಕ್ಷದಲ್ಲಿ ಗಟ್ಟಿಯಾಗಿತ್ತು.
ಈ ಮಧ್ಯೆ ಜಿಲ್ಲೆಯಲ್ಲಿ ಗಟ್ಟಿಯಾಗುತ್ತಿದ್ದ ಬಿಜೆಪಿಯನ್ನು ಒಡೆದ ಕಾಂಗ್ರೆಸ್, ಬಿಜೆಪಿಯ ಒಬ್ಬ ಶಾಸಕರನ್ನು ಈಗಾಗಲೇ ಪಕ್ಷಕ್ಕೆ ಸೇರಿಸಿಕೊಂಡಿದೆ. ಇದಕ್ಕೆ ಪ್ರತ್ಯುತ್ತರ ಎಂಬಂತೆ ಎಂ.ವೈ.ಘೋರ್ಪಡೆ ಪುತ್ರ ಕಾರ್ತಿಕ್ ಗೋರ್ಪಡೆ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಮತ್ತೆ ಆ ಕುಟುಂಬವನ್ನು ರಾಜಕೀಯವಾಗಿ ಮೇಲೆತ್ತಲು ಪಕ್ಷ ಮುಂದಾಗಿದೆ.
ಮಾಜಿ ಶಾಸಕ ಗವಿಯಪ್ಪ ಬಿಜೆಪಿಗೆ:
ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಆನಂದ್‌ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಆ ಕ್ಷೇತ್ರದ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ದೆಹಲಿಯಲ್ಲಿ ಬಿಜೆಪಿ ಸೇರಿದ್ದಾರೆ. ಆ ಮೂಲಕ ಆನಂದ್‌ಸಿಂಗ್ ಮತ್ತು ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಬಿಜೆಪಿ ಮತ್ತೂಂದು ರಾಜಕೀಯ ಪೆಟ್ಟು ನೀಡಿದೆ.