Advertisement

ಕಾರ್ತಿಕದ ಸಂಗೀತ ಸಂಜೆ ಸ್ಪೆಕ್ಟ್ರಮ್‌

02:21 PM Dec 01, 2017 | |

ದೀಪಾರಾಧನೆಯ ಮಾಸ ಕಾರ್ತಿಕದಲ್ಲಿ ಹಚ್ಚಿಟ್ಟ ಹಣತೆಗಳ ನಡುವೆ ಕಾರ್ಕಳದಲ್ಲೊಂದು ವಿಶಿಷ್ಟ ಸಂಗೀತ ಕಾರ್ಯಕ್ರಮ ಜರಗಿತು. ಕಾರ್ಕಳದ ಸಂಗೀತ ಸಭಾ ಹಾಗೂ ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡಿಬಂದ “ಸ್ಪೆಕ್ಟ್ರಂ’ ಸಂಗೀತ ಕಾರ್ಯಕ್ರಮವನ್ನು ಹೆಸರಾಂತ ಯುವ ಗಾಯಕಿ ಸುರಮಣಿ ಮಹಾಲಕ್ಷ್ಮೀ ಶೆಣೈ ಸಂಯೋಜಿಸಿ, ನಿರ್ದೇಶಿಸಿದ್ದರು. 

Advertisement

ಸಂಗೀತದ ಅನೇಕ ಪ್ರಕಾರಗಳು ಮಡಿವಂತಿಕೆಯಿಲ್ಲದೇ ಒಂದು ಗುತ್ಛವಾಗಿ ಈ ವಿನೂತನ ಸಂಜೆಯಲ್ಲಿ ಪ್ರಸ್ತುತಗೊಂಡವು. ಶುದ್ಧ ಶಾಸ್ತ್ರೀಯ ಸಂಗೀತದೊಂದಿಗೆ ಆರಂಭವಾಗಿ ವಿವಿಧ ಪ್ರಕಾರಗಳನ್ನು ದಾಟಿ ದೇಶ ಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.  

ಈ ಯುವ ಗಾಯಕಿಯ ಕಲ್ಪನೆಯ ಕೂಸಿಗೆ ಕುಲಾವಿಯನ್ನು ತೊಡಿಸಿ ಮೆರುಗನ್ನಿತ್ತವರು ಹೆಸರಾಂತ ಯುವ ಪಕ್ಕವಾದ್ಯ ಕಲಾವಿದರು. ಹಾರ್ಮೋನಿಯಂನಲ್ಲಿ ಬೆಂಗಳೂರಿನ ಸತೀಶ್‌ ಕೊಳ್ಳಿ, ಹಿಂದುಸ್ತಾನಿ ಕೊಳಲಿನಲ್ಲಿ  ಮುಂಬಯಿಯ ಆಕಾಶ್‌ ಮರಿತಮ್ಮನಹಳ್ಳಿ ಸತೀಶ್‌, ವಯಲಿನ್‌ನಲ್ಲಿ ಮೈಸೂರಿನ ಕಾರ್ತಿಕ್‌, ಮೃದಂಗದಲ್ಲಿ ನಿಕ್ಷಿತ್‌ ಟಿ. ಪುತ್ತೂರು ಹಾಗೂ ತಬ್ಲಾದಲ್ಲಿ ಬರೋಡದ ಹಿಮಾಂಶು ಮಹಂತ್‌. ಕು| ಮಹಾಲಕ್ಷ್ಮೀ ಗಾಯನದೊಂದಿಗೆ ಸಹಕರಿಸಿದರು. 

ರಾಗ ಯಮನ್‌ನಲ್ಲಿ ಪ್ರಸ್ತುತಪಡಿಸಿದ ಸಖೀ ಏ ರೀ ಆಲಿ ಪಿಯ ಬಿನ್‌ ಕಾರ್ಯಕ್ರಮಕ್ಕೆ ಘನ ಆರಂಭವನ್ನು ಒದಗಿಸುವಲ್ಲಿ ಸಫ‌ಲವಾಯಿತು. ಸವಿಸ್ತಾರವಾಗಿ ಮೂಡಿಬಂದ ಈ ಕೃತಿ ಕಲಾವಿದರ ಪ್ರೌಢಿಮೆಗೆ ಸಾಕ್ಷಿಯಾಯಿತು. ಪ್ರತಿಯೊಬ್ಬ ಕಲಾವಿದನಿಗೂ ಆತನ ಸಾಮರ್ಥ್ಯವನ್ನು ಒರೆಹಚ್ಚುವ ವೇದಿಕೆಯಾಯಿತು.

ನಾಟಿ ರಾಗದ ಮಹಾಗಣಪತಿಂ ಮನಸಾಸ್ಮರಾಮಿ ಮೊದಲಿನ ರಾಗದಷ್ಟು ವಿಸ್ತೃತವಾಗಿ ಮೂಡಿಬರದಿದ್ದರೂ  ಕೊನೆಯ ತನಿ ಆವರ್ತನ ಕಲಾರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಪಾವಂಜೆ ಲಕ್ಷ್ಮೀನಾರಾಯಣಪ್ಪ ವಿರಚಿತ ತಪ್ಪುಗಳೆಲ್ಲವ ಒಪ್ಪುಗೊಳ್ಳಯ್ಯ ಚಪ್ಪರ ಶ್ರೀನಿವಾಸ, ರಾಜಸ್ಥಾನೀ ಜಾನಪದ ಗೀತೆ ಕೇಸರಿಯ ಪದಾರೊ ನೀ ಮಾರೆ ದೇಸ್ರೇ, ಕೊಂಕಣಿ ಗೀತೆ ನಾರೀ ನಯನ ಚಕೋರ ಯೋರೆ ಪೋರ ಹಾಗೂ ಚಾರುಕೇಶಿ ರಾಗದ ಮರಾಠಿ ನಾಟ್ಯಗೀತೆ ಸಭಿಕರ ಮನಸೂರೆಗೊಂಡವು. ಹಿಮಗಿರಿ ಶಿಖರವು ಮುಕುಟದಲಿ ಸಾಗರ ಸಂಗಮ ಚರಣದಲಿ… ಎಂಬ ರಾಷ್ಟ್ರ ನಮನ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. 

Advertisement

ಇಂಪಿನ ಕಂಪಿಗೆ ಲಯ ಹಿತವಾಗಿ ಬೆರೆತಾಗ ಸಹೃದಯಿ ಸಂಗೀತ ರಸಿಕ ಎಲ್ಲ ಪ್ರಕಾರಗಳನ್ನು ಮುಕ್ತವಾಗಿ ಸ್ವೀಕರಿಸಬಲ್ಲ ಎಂಬುದಕ್ಕೆ ಸ್ಪೆಕ್ಟ್ರಂ ಸಾಕ್ಷಿಯಾಯಿತು. ಈ ಯುವ ಕಲಾವಿದರು ಸಂಗೀತದ ಹಣತೆಯನ್ನು ಶ್ರೋತೃಗಳ ಮನದಲ್ಲಿ ಹಚ್ಚಿಟ್ಟರು. 

ಸಾಣೂರು ಇಂದಿರಾ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next