Advertisement

ಕಾರ್ತಿಕ್‌ ತ್ಯಾಗಿ ಮ್ಯಾಜಿಕ್‌ ದಾಳಿ; ಭಾರತ ಸೆಮಿಗೆ

10:03 AM Jan 29, 2020 | sudhir |

ಪೊಚೆಫ್ಸೂಮ್‌ (ದಕ್ಷಿಣ ಆಫ್ರಿಕಾ): ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರೂ ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ದಾಖಲಿಸಿದ ಹಾಲಿ ಚಾಂಪಿಯನ್‌ ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯ ತಂಡವನ್ನು 74 ರನ್ನುಗಳಿಂದ ಸೋಲಿಸಿ ಐಸಿಸಿ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಸೆಮಿಫೈನಲ್‌ ಹಂತಕ್ಕೇರಿಸಿತು.

Advertisement

ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡವು ಆಸ್ಟ್ರೇಲಿಯದ ನಿಖರ ದಾಳಿಗೆ ರನ್‌ ಗಳಿಸಲು ಒದ್ದಾಡಿತು. ಕೊನೆ ಹಂತದಲ್ಲಿ ಅಥರ್ವ ಅಂಕೋಲೆಕರ್‌ ಮತ್ತು ಆರಂಭಿಕ ಯಶಸ್ವಿ ಜೈಸ್ವಾಲ್‌ ಅವರ ಹೋರಾಟದ ಅರ್ಧಶತಕದಿಂದಾಗಿ ಭಾರತ 9 ವಿಕೆಟಿಗೆ 233 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು.

ಗುರಿ ಸಾಧಾರಣವಾಗಿದ್ದರೂ ಭಾರತ ಉತ್ಕೃಷ್ಟ ಮಟ್ಟದ ಬೌಲಿಂಗ್‌ ದಾಳಿ ಸಂಘಟಿಸಿ ಆಸ್ಟ್ರೇಲಿಯವನ್ನು ಕಟ್ಟಿಹಾಕಲು ಯಶಸ್ವಿಯಾಯಿತು. 4 ರನ್‌ ತಲುಪುವಷ್ಟರಲ್ಲಿ 3 ವಿಕೆಟ್‌ ಕಿತ್ತ ಭಾರತ ಎದುರಾಳಿಗೆ ಪ್ರಬಲ ಹೊಡೆತ ನೀಡಿತು. ಆಬಳಿಕ ಸ್ಯಾಮ್‌ ಫ‌ನ್ನಿಂಗ್‌ ಮತ್ತು ಲಿಯಮ್‌ ಸ್ಕಾಟ್‌ ಭರ್ಜರಿಯಾಗಿ ಆಡಿ ಭಯ ಹುಟ್ಟಿಸಿದರು. ಆದರೆ ಈ ಜೋಡಿ ಮುರಿಯುತ್ತಲೇ ಮತ್ತೆ ಕುಸಿದ ಆಸ್ಟ್ರೇಲಿಯ 43.3 ಓವರ್‌ಗಳಲ್ಲಿ 159 ರನ್ನಿಗೆ ಆಲೌಟಾಗಿ ಶರಣಾಯಿತು.

ನಾಟಕೀಯ ಕುಸಿತ
ಗೆಲ್ಲಲು 234 ರನ್‌ ಗಳಿಸುವ ಗುರಿ ಪಡೆದ ಆಸ್ಟ್ರೇಲಿಯ ಆರಂಭದಲ್ಲಿಯೇ ನಾಟಕೀಯ ರೀತಿಯಲ್ಲಿ ಕುಸಿತ ಕಂಡಿತು. ಇನ್ನೂ ರನ್‌ ಖಾತೆ ತೆರೆಯುವ ಮೊದಲೇ ಮೆಕ್‌ಗುರ್ಕ್‌ ರನೌಟಾ ದರು. ಆಬಳಿಕ ತ್ಯಾಗಿ ಮ್ಯಾಜಿಕ್‌ ದಾಳಿಗೆ 3 ವಿಕೆಟ್‌ ಬೇಗನೇ ಉರುಳಿತು. 17 ರನ್‌ ಗಳಿಸುವಷ್ಟರಲ್ಲಿ ತಂಡ 4 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು.

ಕುಸಿದ ತಂಡವನ್ನು ಮೇಲಕ್ಕೆತ್ತುವ ಪ್ರಯತ್ನವನ್ನು ಆರಂಭಿಕ ಫ‌ನ್ನಿಂಗ್‌ ಮತ್ತು ಸ್ಕಾಟ್‌ ಮಾಡಿದರು. ಅವರಿಬ್ಬರು ಆರನೇ ವಿಕೆಟಿಗೆ 81 ರನ್‌ ಪೇರಿಸಿದಾಗ ಭಾರತ ದಿಗಿಲುಗೊಂಡಿತ್ತು. ಆದರೆ ಈ ಜೋಡಿಯನ್ನು ಬಿಷ್ಣೋಯಿ ಮುರಿಯುತ್ತಲೇ ಭಾರತದ ಪಾಳಯದಲ್ಲಿ ನಗು ಬಂತು. 21 ಎಸೆತಗಳ ಅಂತರದಲ್ಲಿ ಕೊನೆಯ 5 ವಿಕೆಟ್‌ ಉರುಳಿದ್ದವು. ಆಸ್ಟ್ರೇಲಿಯದ ನಾಟಕೀಯ ಕುಸಿತಕ್ಕೆ ಕಾರಣರಾದ ಕಾರ್ತಿಕ್‌ ತ್ಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

ಯಶಸ್ವಿ ಅರ್ಧಶತಕ
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಮಾತ್ರ ಆಸೀಸ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅವರ ಅರ್ಧಶತಕದಿಂದ ತಂಡ ಸಾಧಾರಣ ಮೊತ್ತ ಪೇರಿಸುವಂತಾಯಿತು. 82 ಎಸೆತ ಎದುರಿಸಿದ ಅವರು 62 ರನ್‌ ಹೊಡೆದರು. ಅಗ್ರ ಕ್ರಮಾಂಕದ ಉಳಿದ ಆಟಗಾರರು ಉತ್ತಮವಾಗಿ ಆಡಲು ವಿಫ‌ಲರಾದರು.

ಕೊನೆ ಹಂತದಲ್ಲಿ ಅಥರ್ವ ಅಮೋಲೆಕರ್‌ ಮಿಂಚಿನ ಆಟ ಆಡಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು. ಅಥರ್ವ 54 ಎಸೆತಗಳಲ್ಲಿ 55 ಮತ್ತು ಬಿಷ್ಣೋಯಿ 35 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರು
ಭಾರತ 9 ವಿಕೆಟಿಗೆ 233 (ಯಶಸ್ವಿ ಜೈಸ್ವಾಲ್‌ 62, ಸಿದ್ದೇಶ್‌ ವೀರ್‌ 25, ಅಥರ್ವ ಅಂಕೋಲೆಕರ್‌ 55, ರವಿ ಬಿಷ್ಣೋಯಿ 30, ಕೋರೆ ಕೆಲ್ಲಿ 45ಕ್ಕೆ 2, ಟಾಡ್‌ ಮರ್ಫಿ 40ಕ್ಕೆ 2); ಆಸ್ಟ್ರೇಲಿಯ 43.3 ಓವರ್‌ಗಳಲ್ಲಿ 159ಕ್ಕೆ ಆಲೌಟ್‌ (ಸ್ಯಾಮ್‌ ಫ‌ನ್ನಿಂಗ್‌ 75, ಲಿಯಮ್‌ ಸ್ಕಾಟ್‌ 35, ಕಾರ್ತಿಕ್‌ ತ್ಯಾಗಿ 24ಕ್ಕೆ 4, ಆಕಾಶ್‌ ಸಿಂಗ್‌ 30ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next