ಸದ್ಯ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ “ಭೂಮಿಗೆ ಬಂದ ಭಗವಂತ’ ಧಾರಾವಾಹಿಯನ್ನು ನೋಡಿರುವವರಿಗೆ ಭೂಮಿಗೆ ಬಂದ “ಶಿವ’ನ ಪಾತ್ರ ಖಂಡಿತವಾಗಿಯೂ ಗಮನ ಸೆಳೆದಿರುತ್ತದೆ. ಹೀಗೆ “ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಭಗವಂತ “ಶಿವ’ನಾಗಿ ಕಾಣಿಸಿಕೊಂಡಿರುವವರು ಕಾರ್ತಿಕ್ ಸಾಮಗ.
ಮೂಲತಃ ಉಡುಪಿಯ ಇಂದ್ರಾಳಿಯವರಾದ ಕಾರ್ತಿಕ್ ಸಾಮಗ ನಟನಾಗಬೇಕು ಎಂಬ ಆಶಯದಿಂದ ಕಿರುತೆರೆಯ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಪ್ರತಿಭೆ. ತುಳುವಿನಲ್ಲಿ “ಕಂಚಿಲ್ದ ಬಾಲೆ’ ಸಿನಿಮಾದಲ್ಲಿ ಸೆಟ್ ವರ್ಕ್, ಅದಾದ ನಂತರ ಕೆಲ ಧಾರಾವಾಹಿಗಳಿಗೆ ಕ್ಯಾಷಿಯರ್ ಆಗಿ, ಹೀಗೆ ತೆರೆಹಿಂದೆ ಸಾಕಷ್ಟು ಕೆಲಸ ಮಾಡಿದ್ದ ಕಾರ್ತಿಕ್ ಸಾಮಗ ಈಗ ಕಿರುತೆರೆಯಲ್ಲಿ ತೆರೆಮುಂದೆ ಜನಪ್ರಿಯ ನಟನಾಗಿ ಮಿಂಚುತ್ತಿರುವ ಅಪ್ಪಟ ಕರಾವಳಿ ಹುಡುಗ.
ಆರಂಭದಲ್ಲಿ “ರಾಘವೇಂದ್ರ ವೈಭವ’ ಧಾರಾವಾಹಿಯಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಕಾರ್ತಿಕ್ ಸಾಮಗ ಅವರನ್ನು ಆನಂತರ ದೊಡ್ಡ ಮಟ್ಟದಲ್ಲಿ ಕಿರುತೆರೆಯಲ್ಲಿ ಗುರುತಿಸುವಂತೆ ಮಾಡಿದ್ದು, “ಅರಗಿಣಿ’, “ಶನಿ’ ಮತ್ತು “ಭೂಮಿಗೆ ಬಂದ ಭಗವಂತ’ ಮೆಗಾ ಸೀರಿಯಲ್‌ಗಳು.
“ಉಡುಪಿಯಲ್ಲಿ ಒಂದಷ್ಟು ರಂಗ ಚಟುವಟಿಕೆಗಳನ್ನು ಮಾಡಿಕೊಂಡಿದ್ದ ನನ್ನನ್ನು ಮೊದಲು ಬಣ್ಣದ ಲೋಕಕ್ಕೆ ಪರಿಚಯಿಸಿದ್ದು, ಕಿರುತೆರೆಯ ಧಾರಾವಾಹಿಗಳು. ನಟ, ನಿರ್ದೇಶಕ ಶಿವಧ್ವಜ್, ರವಿ ಗರಣಿ, ಸುಧೀಂದ್ರ ಭಾರದ್ವಾಜ್, ಪರಮೇಶ್ ಗುಂಡ್ಕಲ್ ಹೀಗೆ ಹಲವರ ಮೂಲಕ ಕಿರುತೆರೆಯಲ್ಲಿ ಒಂದಷ್ಟಯ ಪರಿಚಯ, ಅವಕಾಶಗಳೂ ಸಿಕ್ಕಿತು. ಆರಂಭದಲ್ಲಿ ಸೀರಿಯಲ್‌ಗಳಲ್ಲಿ ತೆರೆಹಿಂದೆ ಕೆಲಸ ಮಾಡುತ್ತಿದ್ದವನಿಗೆ ನಿಧಾನವಾಗಿ ತೆರೆಮುಂದೆ ಕಾಣಿಸಿಕೊಳ್ಳುವ ಅವಕಾಶಗಳು ಸಿಕ್ಕಿತು’ ಎಂದು ತಮ್ಮ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ ಕಾರ್ತಿಕ್ ಸಾಮಗ.
“ನಟನಾಗಿ ಕಿರುತೆರೆಯಲ್ಲಿ “ಶನಿ’ ನನ್ನ ಜೀವನದಲ್ಲಿ ಬಹುದೊಡ್ಡ ತಿರುವು ಕೊಟ್ಟ ಸೀರಿಯಲ್. “ಶನಿ’ ಧಾರವಾಹಿಯಲ್ಲಿ ನಾನು ಮಾಡಿದ್ದ ಇಂದ್ರನ ಪಾತ್ರ. ನನಗೆ ದೊಡ್ಡ ಮೆಚ್ಚುಗೆ ಸಾಕಷ್ಟು ಅವಕಾಶಗಳನ್ನು ತಂದುಕೊಟ್ಟಿತು. ಎಲ್ಲರೂ ಗುರುತಿಸುವಂತೆ ಮಾಡಿತು. ಈಗ ಪ್ರಸಾರವಾಗುತ್ತಿರುವ “ಭೂಮಿಗೆ ಬಂದ ಭಗವಂತ’ ನನ್ನನ್ನು ಮತ್ತೂಂದು ಹಂತಕ್ಕೆ ಕರೆದುಕೊಂಡು ಹೋಗಿದೆ. ನನ್ನ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಶಿವನ ಸಿಗುತ್ತಿದೆ. ನನ್ನ ಪಾತ್ರದಲ್ಲಿ ನಾನು ಹೇಳುವ ಸಂಭಾಷಣೆ ಅದೆಷ್ಟೋ ಜನರಿಗೆ ಪ್ರೇರಣೆ ನೀಡಿದೆ ಎಂದು ಅದೆಷ್ಟೋ ಜನರು
ಹೇಳುತ್ತಿದ್ದಾರೆ. ಈಗಾಗಲೇ ಈ ಧಾರಾವಾಹಿ 200ನೇ ಸಂಚಿಕೆಯ ಹತ್ತಿರದಲ್ಲಿದೆ. ಈ ಪಾತ್ರ ಎಲ್ಲೋ ತಲುಪಿದೆ. ಎಷ್ಟೋ ಸಲ ಈ ಪಾತ್ರವನ್ನು ದೇವರೇ ಮಾಡಿಸುತ್ತಿದ್ದಾನೆ ಅನಿಸುತ್ತಿದೆ. ನನಗೇ ಗೊತ್ತಿಲ್ಲದಂತೆ ಈ ಪಾತ್ರ ನನ್ನನ್ನು, ನೋಡುಗರನ್ನು ಆವರಿಸಿದೆ’ ಎನ್ನುತ್ತಾರೆ ಸಾಮಗ.
“ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಶಿವನ ಪಾತ್ರಕ್ಕೆ ಸಿಗುತ್ತಿರುವ ಮನ್ನಣೆ ಬಗ್ಗೆ ಹೇಳುತ್ತ, ಇತ್ತೀಚೆಗೆ ಊರಿಗೆ ಹೋಗಿದ್ದಾಗ ಹಿರಿಯರೊಬ್ಬರು ಬಂದು ಪ್ರೀತಿಯಿಂದ ಮಾತನಾಡಿ “ನೀವೇ ದೇವರಂತೆ ಕಾಣುವಿರಿ’ ಎಂದು ಹೇಳುತ್ತಾ ನಮಸ್ಕರಿಸಲು ಬಂದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ಕಾರ್ತಿಕ್ ಸಾಮಗ.