Advertisement

ತೇರುಮಲ್ಲೇಶ್ವರಗೆ ಕರ್ಪೂರದಾರತಿ

03:45 PM Mar 01, 2021 | Team Udayavani |

ಹಿರಿಯೂರು: “ದಕ್ಷಿಣ ಕಾಶಿ’ ಎಂದೇ ಖ್ಯಾತಿ ಪಡೆದಿರುವ ಇಲ್ಲಿನ ಶ್ರೀ ತೇರುಮಲ್ಲೇಶ್ವರಸ್ವಾಮಿ  ದೇವಾಲಯದಲ್ಲಿ ಕರ್ಪೂರದಾರತಿ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

Advertisement

ವಿಶೇಷವಾಗಿ ಮಹಿಳೆಯರು, ನವ ದಂಪತಿಗಳು ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಶುಕ್ರವಾರ ರಥೋತ್ಸವದ ವೇಳೆ ಸಿದ್ಧನಾಯಕ ವೃತ್ತದ ಬಳಿ ತೆರಳಿದ್ದ ಮೂರು ರಥಗಳು ಸ್ವಸ್ಥಾನಕ್ಕೆ ಮರಳಿದವು. ಭಕ್ತರು ದೇವರ ಮೂರ್ತಿಗಳ ಜೊತೆಗೆ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿ ಕರ್ಪೂರ ಹಚ್ಚಿ ಭಕ್ತಿ ಸಮರ್ಪಿಸಿದರು.

ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದ ಶ್ರೀ ತೇರುಮಲ್ಲೇಶ್ವರ, ಶ್ರೀ ಉಮಾಮಹೇಶ್ವರ, ಶ್ರೀ ಚಂದ್ರಮೌಳೇಶ್ವರ ದೇವರ ಮೂರ್ತಿಗಳು ಗರ್ಭಗುಡಿಯ ಮುಂಭಾಗದಲ್ಲಿ ಬಂದು ನಿಂತಾಗ ಮೂರು ಕರ್ಪೂರದಾರತಿಗಳನ್ನು ಹರಾಜು ಮಾಡಲಾಯಿತು. ಹರಾಜಿನಲ್ಲಿ ಕರ್ಪೂರ ಪಡೆದವರು ಹಾಗೂ ಅವರ ಕುಟುಂಬದವರು ಮೊದಲು ಕರ್ಪೂರದಾರತಿ ಮಾಡಿದರು. ನಂತರ ಮಹಿಳೆಯರು ಆರತಿ ಬೆಳಗಿ ಭಕ್ತಿ ಸಮರ್ಪಣೆ ಮಾಡಿದರು.

ಇದಾದ ಬಳಿಕ ದೇವರ ಮೂರ್ತಿಗಳನ್ನು ಗರ್ಭಗುಡಿಯೊಳಕ್ಕೆ ಕೊಂಡೊಯ್ಯಲಾಯಿತು.  ಮಹಾಮಂಗಳಾರತಿಯೊಂದಿಗೆ ಕರ್ಪೂರದಾರತಿ ಕಾರ್ಯಕ್ರಮ ಸಂಪನ್ನಗೊಂಡಿತು. ಬಬ್ಬೂರು, ಮೇಟಿಕುರ್ಕೆ, ಮ್ಯಾಕ್ಲೂರಹಳ್ಳಿ ಹಾಗೂ ನಗರ ಪ್ರದೇಶದ ಮಹಿಳೆಯರು ಕರ್ಪೂರದಾರತಿ ಕಾರ್ಯಕ್ರಮ  ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕರ್ಪೂರದಾರತಿ ಸಮಯದಲ್ಲಿ ದೇವಸ್ಥಾನದ ಮುಂಭಾಗದಲ್ಲಿರುವ 48 ಅಡಿ ಎತ್ತರದ ಏಕ ಶಿಲಾ ಕಂಬದ ಮೇಲೆ ದೀಪೋತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next