Advertisement

ಕರ್ನಾಟಕ ಕೇರಳ ಗಡಿ: ಹಲವು ಇಲ್ಲಗಳ ಕರೋಪಾಡಿ

08:30 PM Aug 23, 2021 | Team Udayavani |

ವಿಟ್ಲ: ಕರ್ನಾಟಕ ಕೇರಳ ಗಡಿಭಾಗದ ಗ್ರಾಮ ಕರೋಪಾಡಿ. ಈ ಗ್ರಾಮದ ಮೂಲಕ ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವುದು ಕಷ್ಟವೇನಲ್ಲ. ಎಲ್ಲ ಕಡೆಯೂ ಮಾರ್ಗವೂ ಕಾಲುದಾರಿಯೂ ಇದೆ. ಮುಗುಳಿ ಮತ್ತು ಆನೆಕಲ್ಲು ಎಂಬ ಎರಡು ಕಡೆ ಗಡಿಭಾಗದ ಹೆಬ್ಟಾಗಿಲು ತೆರೆದೇ ಇದೆ. ಈ ಗ್ರಾಮದ ಅರ್ಧ ಭಾಗ ಪ್ರಗತಿಯನ್ನೇ ಕಂಡಿಲ್ಲ. ಇನ್ನೂ ಅಲ್ಲಿ ರಸ್ತೆ ಮತ್ತು ಇತರ ಮೂಲಸೌಕರ್ಯಗಳ ಕೊರತೆಯಿದೆ. ಅನೇಕ ಅಭಿವೃದ್ಧಿ ಕಾರ್ಯವಾಗಬೇಕಾಗಿದೆ.

Advertisement

ಎಷ್ಟೋ ಬಾರಿ ಇಲ್ಲಿನ ಜನತೆ ಗಡಿಭಾಗದಲ್ಲಿರುವುದರಿಂದ ಕರೋಪಾಡಿ ಗ್ರಾಮಕ್ಕೆ ಸೌಲಭ್ಯಗಳು ತಲುಪುತ್ತಿಲ್ಲ ಎನ್ನುತ್ತಾರೆ. ಪದ್ಯಾಣ, ಕೋಡ್ಲ, ಬೇಡಗುಡ್ಡೆ, ಸಾಯ, ಪಡು³ ಮೊದಲಾದವು ತೀರಾ ಹಿಂದುಳಿದೇ ಇವೆ. ಈ ಜಾಗಗಳಿಗೆಲ್ಲ ಕೇರಳ ಭಾಗ ತಾಗಿ ಕೊಂಡಿರುವುದು ಮತ್ತು ತೀರಾ ನಿರ್ಲಕ್ಷéಕ್ಕೊಳಗಾಗಿರುವುದು ವಾಸ್ತವ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂದಿದ್ದರೂ ನೀರು ಸರಬರಾಜು ವ್ಯವಸ್ಥೆ ಇನ್ನೂ ಸಮರ್ಪಕವಾಗಿಲ್ಲ. ಈಗಾಗಲೇ ಹಲವಾರು ನೀರಿನ ಟ್ಯಾಂಕಿಗಳ ನಿರ್ಮಾಣವಾಗಿದೆ. ಇದೀಗ ಜಲಜೀವನ್‌ ಮಿಷನ್‌ನಡಿಯಲ್ಲಿ ಮತ್ತೆ ಅನೇಕ ನೀರಿನ ಟ್ಯಾಂಕ್‌ಗಳಾಗಲಿವೆ. ಆದರೆ ಈ ಟ್ಯಾಂಕ್‌ಗಳನ್ನು ತುಂಬಿಸಿ, ಊರಿಗೆ ನೀರು ಸರಬರಾಜು ಮಾಡುವವರು ಯಾರು ಎಂಬುದು ಗ್ರಾಮಸ್ಥರಿಗೆ ಯಕ್ಷಪ್ರಶ್ನೆಯಾಗಿದೆ.

ಕಾಡುಪ್ರಾಣಿಗಳ ಕಾಟ :

ಬಡ, ಮಧ್ಯಮ ವರ್ಗದ ನಾಗರಿಕರೇ ಹೆಚ್ಚು. ಮಧ್ಯಮ ವರ್ಗದವರು ಕೃಷಿ ವ್ಯವಸ್ಥೆಯನ್ನೇ ಅವಲಂಬಿಸಿದ್ದರೂ ಪ್ರಕೃತಿ ವಿಕೋಪ, ಕಾಡುಪ್ರಾಣಿಗಳ ಕಾಟದಿಂದ ಅವರಿಗೆ ಮುಕ್ತಿ ಇಲ್ಲ. ಕರೋಪಾಡಿ ಸ.ಸಂಘ ಮತ್ತು ಒಡಿಯೂರು ಶ್ರೀ ವಿವಿಧೋದ್ದೇಶ ಸ. ಸಂಘಗಳ ಮೂಲಕ ವ್ಯವಹಾರ ನಡೆಯುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ ವ್ಯವಹಾರಕ್ಕೆ ಪಕ್ಕದ ಕನ್ಯಾನ ಗ್ರಾಮವನ್ನು ಅವಲಂಬಿಸಬೇಕಾದ ಸ್ಥಿತಿ. ಈ ಗ್ರಾಮದಲ್ಲಿ ಇನ್ನೂ ಎ.ಟಿ.ಎಂ. ಇಲ್ಲ.

Advertisement

ಬೇಡಗುಡ್ಡೆ ಸಾಯ ರಸ್ತೆ:

ಬೇಡಗುಡ್ಡೆಯಿಂದ ಸಾಯದವರೆಗಿನ 1 ಕಿಮೀ ದೂರದ ಮಣ್ಣಿನ ಕೆಸರು ರಸ್ತೆಯಲ್ಲಿ ವಾಹನ ಸಂಚಾರವೂ ಅಸಾಧ್ಯ. ನಡೆದಾಡಲೂ ಕಷ್ಟ. ಈ ಭಾಗದ ಜನತೆಯ ಕಳೆದ ಎಷ್ಟೋ ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. 30ಕ್ಕೂ ಅಧಿಕ ಕುಟುಂಬಗಳಿಗೆ ಅವಶ್ಯವಿರುವ ಈ ರಸ್ತೆ ಸೇಂದ್ರಗಯಕ್ಕೆ ತಲುಪಿ ಅಲ್ಲಿಂದ ಕೇರಳವನ್ನು ಸ್ಪರ್ಶಿಸುತ್ತದೆ. ಈ ಪ್ರದೇಶಕ್ಕೆ ಯಾವುದೇ ಅನುದಾನ ಲಭ್ಯವಾಗಿಲ್ಲ, ನೀರು ಸರಬರಾಜು, ವಿದ್ಯುತ್‌ ಸಂಪರ್ಕ, ನೆಟ್‌ವರ್ಕ್‌ ಸಮಸ್ಯೆ ಶಾಶ್ವತವಾಗಿ ಮುಂದುವರಿದಿದೆ.

ಕುಕ್ಕಾಜೆ, ಕಮ್ಮಜೆ, ನೆಲ್ಲಿಕಟ್ಟೆ, ಮುಗುಳಿ, ಪದ್ಯಾಣ ಪ್ರಧಾನ ರಸ್ತೆಯೇ ಹೊಂಡಗುಂಡಿಗಳಿಂದಾವೃತವಾಗಿದೆ. ಮಿತ್ತನಡ್ಕ -ಆನೆಕಲ್ಲು ಸಂಪರ್ಕಿಸುವ ಬೇಡಗುಡ್ಡೆ ರಸ್ತೆಯೂ ಪ್ರಗತಿಯನ್ನು ಕಂಡಿಲ್ಲ. ಮಿತ್ತನಡ್ಕ, ತೆಂಕಬೈಲು, ದೇವಸ್ಯ, ತಾಳಿಪಡು³ ರಸ್ತೆಯೂ ದುರಸ್ತಿ ಭಾಗ್ಯ ಕಂಡಿಲ್ಲ. ವಗೆನಾಡು, ಸೇರಾಜೆ ರಸ್ತೆ, ಮಾಂಬಾಡಿ, ಕೋಡ್ಲ, ಪಂಬತ್ತಜೆ ರಸ್ತೆಗಳೂ ಅಭಿವೃದ್ಧಿಗಾಗಿ ಕಾಯುತ್ತಿವೆ. ಗ್ರಾಮದೊಳಗಿನ ಕೆಲವು ರಸ್ತೆಗಳು ಕಾಂಕ್ರೀಟ್‌ ರಸ್ತೆಯೊಂದಿಗೆ ಉತ್ತಮವಾಗಿದ್ದರೂ ಇನ್ನೂ ಅನೇಕ ರಸ್ತೆಗಳು ಪ್ರಗತಿ ಕಾಣಬೇಕಾಗಿವೆ.

ವಿದ್ಯುತ್‌ ಕಡಿತ ಸಮಸ್ಯೆ :

ರಾಷ್ಟ್ರೀಕೃತ ಬ್ಯಾಂಕ್‌, ಸಮುದಾಯ ಆರೋಗ್ಯ ಕೇಂದ್ರ, ಸರಕಾರಿ ಪ್ರೌಢಶಾಲೆ, ಪಿಯು, ಪದವಿ ಕಾಲೇಜುಗಳಿಲ್ಲ. ಆರೋಗ್ಯ ಉಪ ಕೇಂದ್ರಗಳು ಎರಡು ಕಡೆಯಿದ್ದರೂ ತೆರೆಯುವುದಿಲ್ಲ. ವಿದ್ಯುತ್‌ ಸಂಪರ್ಕವಿದೆ. ಗುಡ್ಡದಲ್ಲಿ ತೋಟದಲ್ಲಿ ಸಾಗುವ ವಿದ್ಯುತ್‌ ಮಾರ್ಗದಲ್ಲಿ ಸಮಸ್ಯೆ ಉದ್ಭವವಾದಲ್ಲಿ ಪತ್ತೆ ಹಚ್ಚಲೂ ಸಾಧ್ಯವಿಲ್ಲದಷ್ಟು ಶೋಚನೀಯ ಸ್ಥಿತಿ. ಅಂತಹ ಸನ್ನಿವೇಶದಲ್ಲಿ ವಿದ್ಯುತ್‌ ಮಾಯವಾದಲ್ಲಿ ದಿನಗಟ್ಟಲೆ ಕತ್ತಲೆ. ವಿದ್ಯುತ್‌ ಕಡಿತ ಸಮಸ್ಯೆ ಗಂಭೀರವಾಗಿದ್ದರೆ ವಿದ್ಯುತ್‌ ಮಾಯವಾದಾಗಲೆಲ್ಲ ಆನ್‌ಲೈನ್‌ ತರಗತಿಗಳಿಗೆ ಮಕ್ಕಳ ಪೇಚಾಟ ಹೇಳ ತೀರದು. ಬಿಎಸ್ಸೆನ್ನೆಲ್‌ ಇಲ್ಲಿ ಸಂಪೂರ್ಣ ವಿಫಲ.

-ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next