Advertisement
ಇತ್ತೀಚೆಗೆ ಉತ್ತರಾಖಂಡ್, ಆಗ್ರಾ ಪ್ರವಾಸ ಮುಗಿಸಿ ನಮ್ಮ ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳ ಪಯಣ ದಿಲ್ಲಿಗೆ ಬಂದಿತ್ತು. ದೇಶದ ರಾಜಧಾನಿ ದಿಲ್ಲಿ ಎಂದರೆ ಕುತೂಹಲ ಜಾಸ್ತಿ ತಾನೆ. ಆ ಸಂದರ್ಭದಲ್ಲಿ ಅಮೆರಿಕ ರಾಷ್ಟಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸುವ ಚಿತ್ರಗಳೇ ತುಂಬಿದ್ದವು. ನಮ್ಮ ಪ್ರವಾಸದ ದಿನಚರಿ ಬೆಳಗ್ಗಿನ ಹೊತ್ತು ದೆಹಲಿಯ ವಿವಿಧ ತಾಣಗಳ ಭೇಟಿಯಾದರೆ, ರಾತ್ರಿ ಕರೋಲ್ ಬಾಗ್‌ನ ಬೀದಿಬದಿಯ ಅಂಗಡಿಗಳಲ್ಲಿ ಚೌಕಾಸಿ ವ್ಯಾಪಾರ. ನಾವು ಮಾತನಾಡುವ ಹಿಂದಿ ಭಾಷೆಯ ಶೈಲಿಯನ್ನೇ ಗಮನಿಸಿ, ಇವರು ದಕ್ಷಿಣದವರು ಎಂದು ಗ್ರಹಿಸುವ ವ್ಯಾಪಾರಿಗಳ ಮುಂದೆ ಮಾತಿನ ಯುದ್ಧವೇ ನಡೆಯಿತು.
ಕರೋಲ್‌ಬಾಗ್ ಎಂದರೆ ಅತ್ಯಂತ ಕಡಿಮೆ ದರದಲ್ಲಿ ಇಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಹೆಸರಾದ ಸ್ಥಳ. ಅದಾಗ್ಯೂ ಅಲ್ಲಿ ತರಹೇವಾರಿ ಖಾನಾವಳಿ, ವೈವಿಧ್ಯಮಯ ವಸ್ತ್ರಗಳು, ವಿವಿಧ ನಮೂನೆಯ ಪಾದರಕ್ಷೆಗಳು ಇದ್ದವು. ಅದೊಂದು ಮಹಾ ಸಂತೆಯಂತೆ ಕಾಣುತ್ತಿತ್ತು. ಈ ಮಹಾನಗರದಲ್ಲಿ ವಸ್ತು ಕಳೆದುಹೋದರೆ ಅದು ಚೋರ್ ಬಝಾರ್‌ನಲ್ಲಿ ಸಿಗುತ್ತದೆ ಅನ್ನೋ ಅಣಕದ ಮಾತು ದಿಲ್ಲಿಯಲ್ಲಿ ಜನಜನಿತ. ಇಲ್ಲಿ ಸೆಕೆಂಡ್‌ಹ್ಯಾಂಡ್ ವಸ್ತುಗಳು ಅಷ್ಟು ಕಡಿಮೆ ದರಕ್ಕೆ ಸಿಗುವುದನ್ನು ನೋಡಿಯೇ, ಈ ಮಾತು ಸತ್ಯ ಎಂಬುದು ನಮ್ಮ ಅರಿವಿಗೆ ಬಂತು. ದೆಹಲಿಯಲ್ಲಿ ಈ ತರಹದ ಹತ್ತಾರು ಮಾರ್ಕೆಟ್‌ಗಳಿವೆ. ಪ್ರತೀ ಮಾರುಕಟ್ಟೆ ಒಂದೊಂದು ಬಗೆಯ ವಸ್ತುಗಳಿಗೆ ಪ್ರಸಿದ್ಧಿ ಪಡೆದಿದೆ.
Related Articles
ಯಾವ ಮಾರಾಟಗಾರನ ಬಳಿ ಹೋದರೂ ಮಾತು ಮಾತ್ರ ಮಲ್ಲಿಗೆಯಷ್ಟೇ ಮೃದು. “ಅರೇ ಭೈಯ್ನಾ ! ಯೇ ತೋ ಬೊಹೊತ್ ಅಚ್ಚೇ ಕ್ವಾಲಿಟಿ ಕಾ ಮಾಲ್ ಹೇ’ ಎನ್ನುವ ಸಾಲು ಇಲ್ಲಿ ಉಚಿತವೇ ಸರಿ. ಈ ಮಾತಿಗೆ ಮರುಳಾಗಿ ಅವರು ಕೇಳಿದ ರೇಟ್ ಕೊಟ್ಟರೆ ಆ ಮಾರ್ಕೆಟ್‌ಗೆ ಹೋದ ಉದ್ದೇಶವೇ ವ್ಯರ್ಥ. ಒಂದು ಸಾವಿರ ರೂಪಾಯಿ ಮೌಲ್ಯದ ವಸ್ತುವನ್ನ ಚೌಕಾಸಿ ಮಾಡಿ, ಇನ್ನೂರು ರೂಪಾಯಿಗೆ ಖರೀದಿಸಿದರೆ, ಖರೀದಿದಾರ ಗೆದ್ದಂತೆ. ಕೆಲವು ಮಾರಾಟಗಾರರು ಜಪ್ಪಯ್ಯ ಅಂದರು ಕಡಿಮೆ ಬೆಲೆಗೆ ನೀಡಲು ಒಪ್ಪದಿದ್ದಾಗ “ನಿಮ್ಮ ಲೆಕ್ಕದ ಬೆಲೆ ಎಷ್ಟು?’ ಎಂದು ನಾಮ್ಕೆ ವಾಸ್ತೆ ಕೇಳುವುದುಂಟು. ನಾವು ಆ ಮಾತಿಗೆ ಪ್ರತಿಕ್ರಿಯಿಸದೇ ಇದ್ದರೆ, “ಬನ್ನಿ ಇನ್ನೂರಕ್ಕೆ ಕೊಡುತ್ತೇನೆ’ ಅಂದುಬಿಡುತ್ತಾರೆ. ಅದರಲ್ಲೂ ಕೆಲವು ವ್ಯಾಪಾರಸ್ಥರು ಬೆಲೆತಗ್ಗಿಸಲು ಖಡಾಖಂಡಿತವಾಗಿ ನಿರಾಕರಿಸುತ್ತಾರೆ. ಒಬ್ಬರಲ್ಲ ಒಬ್ಬರು ಗಿರಾಕಿ, ತಮ್ಮ ಮಾತಿನ ಬಲೆಗೆ ಬಿದ್ದೇ ಬೀಳುತ್ತಾರೆ ಎಂಬ ವಿಶ್ವಾಸ ಅವರದು. ಇನ್ನು ಕೆಲವೊಮ್ಮೆ ಎರಡು ವಸ್ತುಗಳನ್ನು ಖರೀದಿಸಿದರೆ ಬೆಲೆ ಕಡಿಮೆ ಮಾಡುತ್ತೇವೆ ಎನ್ನುವವರಿದ್ದಾರೆ. ಬೇಕಿರಲಿ, ಬೇಡದಿರಲಿ, ಬೆಲೆ ಕಡಿಮೆಯಾಗುತ್ತದಲ್ಲಾ ಅಂತ ಎರಡೆರಡು ವಸ್ತು ಖರೀದಿಸಿ ಬಿಡುತ್ತೇವೆ. ಮನೆಗೆ ಬಂದಮೇಲೆ, “ಅನಗತ್ಯ ದುಡ್ಡು ಖರ್ಚು ಮಾಡಿದೆನಲ್ಲಾ !’ ಎಂದು ಅರಿವಾಗುವುದು.
Advertisement
ಐವತ್ತಕ್ಕೆ ಪೆನ್ಡ್ರೈವ್ನಮಗಂತೂ ಆಶ್ಚರ್ಯಕರವಾಗಿ ಕಂಡಿದ್ದು ಸ್ಯಾನ್‌ಡಿಸ್ಕ್ನ ಪೆನ್‌ಡ್ರೈವ್‌ಗಳು ನೂರಕ್ಕೆ ನಾಲ್ಕು ಅನ್ನುವಂತೆ ಬಿಕರಿಯಾಗುತ್ತಿದ್ದುದು.ಇದೆಲ್ಲಾ ಹೇಗೆ ಅಂತಾ ಒಬ್ಬ ಹುಡುಗನ ಬಳಿ ಕೇಳಾªಗ, “ಕದ್ದು ತಂದ ಮಾಲ್ ಸಾರ್’ ಅಂದ. ಹಾಗೇನೇ ಅಡಿಡಾಸ್‌ನ ಶೂಸ್ 250ಕ್ಕೆ, ಫಾಸ್ಟ್‌ಟ್ರಾಕ್‌ನ ಕೈಗಡಿಯಾರ 100ಕ್ಕೆ. ಹೀಗೆ ಬಹುತೇಕ ಬ್ರಾಂಡೆಡ್ ಮಾಲ್‌ಗಳು ಬಹಳ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದವು. ಅದರಲ್ಲೂ ಚೌಕಾಸಿಯ ಚಾಕಚಾಕ್ಯತೆ ಇರುವ ಚತುರರು ಈ ಬೆಲೆಯನ್ನು ಇನ್ನಷ್ಟು ತಗ್ಗಿಸಬಹುದು. ಖರೀದಿಯ ಮಾತು ಪಕ್ಕಕ್ಕಿರಲಿ. ಈ ಹೊಸದೊಂದು ಲೋಕವನ್ನು ಮೊದಲ ಬಾರಿಗೆ ನೋಡಿದ ನಾವು ನಿಜಕ್ಕೂ ವಿಸ್ಮಯಪಟ್ಟೆವು. ನಮ್ಮ ಪಾಲಿಗೆ ಕರೋಲ್‌ಬಾಗ್ ಶಾಪಿಂಗ್‌ಒಳ್ಳೆಯ ಅನುಭವ ನೀಡಿತ್ತು. ಚೌಕಾಸಿ ಎನ್ನುವುದು ಎಷ್ಟರಮಟ್ಟಿಗೆ ಮಹತ್ವ ಪಡೆದಿದೆ ಎಂಬುದನ್ನ ಮನದಟ್ಟು ಮಾಡಿತು. ಒಬ್ಬನು 300 ರೂಪಾಯಿ ನೀಡಿ ಅತ್ಯುತ್ತಮ ಬ್ರಾಂಡ್‌ನ ಶೂಗಳನ್ನು ಖರೀದಿಸಿದ ಖುಷಿಯಲ್ಲಿದ್ದಾಗ, ಮತ್ತೂಬ್ಬ ಬಂದು ಹೇಳುತ್ತಾನೆ, “ಹೇಯ್, ನೋಡು, ನಾನೂ ಅಂತಹುದೇ ಶೂ ತಕೊಂಡೆ. ಓನ್ಲಿ 200 ರುಪೀಸ್’. ಆಗ ಶೂಗಳ ಮಾರುಕಟ್ಟೆ ಬೆಲೆಗೆ ಹೋಲಿಕೆ ಮಾಡಿಕೊಂಡು ಮನಸ್ಸು ಸಮಾಧಾನ ಮಾಡಿಕೊಳ್ಳದೇ ಬೇರೆ ವಿಧಿಯಿಲ್ಲ. ಸುಭಾಷ್ ಮಂಚಿ
ಪ್ರಥಮ ಎಂಎ , ಮಂಗಳೂರು ವಿಶ್ವವಿದ್ಯಾಲಯ, ಕೋಣಾಜೆ