Advertisement

ಶಾಲೆ ಹತ್ರ ಗಂಟೆ ಹೊಡೆದ್ರೆ ಮಕ್ಕಳಾದ್ರೂ ಬರ್ತಾವೆ 

06:10 AM Oct 06, 2017 | |

ಮೌಡ್ಯದ ವಿಚಾರದಲ್ಲಿ ಹಂತಹಂತವಾಗಿ ಹೆಜ್ಜೆ ಇಡಬೇಕಾಗುತ್ತದೆ. ಆಚರಣೆ, ಸಂಪ್ರದಾಯ, ಜನರ ನಂಬಿಕೆ ಸೂಕ್ಷ್ಮ ವಿಷಯಗಳು. ಜನರ  ದಿಕ್ಕು ತಪ್ಪಿಸುವ , ಅಮಾಯಕರು, ಮುಗ್ಧರನ್ನು ವಂಚಿಸುವ, ಅನಾಗರಿಕ ಆಚರಣೆ ಮೊದಲು ನಿಷೇಧ ಆಗಲಿ. ಬಳಿಕ ಉಳಿದದ್ದು..

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಖಾತೆ ಬದಲಾಗದ ಸಚಿವ ಎಂಬ ಖ್ಯಾತಿಗೆ ಒಳಗಾಗಿರುವ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಇತ್ತೀಚೆಗೆ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪೂಜೆ ಮಾಡುವುದಿಲ್ಲ ಎಂದು ಆಯುಧ ಪೂಜೆ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಪೂಜೆ ಮಾಡದಿರುವುದನ್ನು ಸಮರ್ಥಿಸಿಕೊಂಡಿರುವ ಅವರು “ನಾನು ಇರೋದೇ ಹೀಗೇ’ ಎಂದೂ ಹೇಳಿದ್ದಾರೆ. ಬಡ್ತಿ ಮೀಸಲಾತಿ, ಜಾತಿಗಣತಿ, ಮೌಡ್ಯ ಕಾಯ್ದೆ ಮತ್ತಿತರ ವಿಚಾರಗಳ ಬಗ್ಗೆ ಅವರೊಂದಿಗೆ  ನೇರಾ-ನೇರಾ ಮಾತುಕತೆ…

ನೀವು ಸಿಎಂ ಸಿದ್ದರಾಮಯ್ಯ ಅವ್ರ “ಬ್ಲೂ ಬಾಯ್‌’ ಅಂತೆ?
(ನಗು……..)ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ಸ್ವಲ್ಪ ಹೆಚ್ಚಾಗಿ ಪ್ರೀತಿ ಇರುವುದು ನಿಜ. ಸಚಿವ ಸಂಪುಟದ ಎಲ್ಲರ ಮೇಲೂ ಅವರಿಗೆ ಅಷ್ಟೇ ಪ್ರೀತಿ ವಿಶ್ವಾಸವಿದೆ.ದೇವರಾಜ ಅರಸು ಅವರ ನಂತರ ಸಾಮಾಜಿಕ ನ್ಯಾಯದ ಪರ ಬದ್ಧತೆ ತೋರಿ ನೈಜ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಿರುವವರು ಸಿದ್ದರಾಮಯ್ಯ. ಅವರ ಸಂಪುಟದಲ್ಲಿ ಸಚಿವನಾಗಿದ್ದೆ ಎನ್ನುವುದೇ ಹೆಮ್ಮೆ. ಸಮಾಜ ಕಲ್ಯಾಣ ಇಲಾಖೆಯಂತ ಹೊಣೆಗಾರಿಕೆ ವಹಿಸಿ ಸಮಾಜದ ಎಲ್ಲ ಬಡವರ್ಗಕ್ಕೆ ಒಳ್ಳೆಯದು ಮಾಡಲು ಅವರೇ ಪ್ರೇರಣೆ.

ಇದೇನು ಹೊಸ ವಿವಾದ ನಿಮ್ಮನ್ನು ಸುತ್ತಿಕೊಂಡಿದೆಯಲ್ಲಾ?
    ನಾನು ಕದ್ದು ಮುಚ್ಚಿ ಮಾತಾಡೋನಲ್ಲ, ಇದ್ದದ್ದು ಇದ್ದಂಗೆ ಹೇಳ್ಳೋನು. ಸುಮ್ಮನೆ ವಿವಾದ ಮಾಡಿದ್ರೆ ಏನೂ ಮಾಡ ಕ್ಕಾಗಲ್ಲ, ಯಾರು ಹೆಚ್ಚು ಕೆಲಸ ಮಾಡುತ್ತಾರೋ ಅವರಿಗೆ ಇಂತದ್ದೆಲ್ಲಾ ಸಹಜ.ನಾನು ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲ್ಲ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಿಮ್ಮ ರಾಜೀನಾಮೆ ಕೇಳಿದ್ದಾರಲ್ಲಾ?
    ಕೇಳಲಿ ಬಿಡಿ, ಅವರು ಕೇಳಿದ್ರು ಅಂತ ನಾನು ರಾಜೀನಾಮೆ ಕೊಡೋಕಾಗುತ್ತಾ? ನಾನೇನು ಮಾಡಬಾರದ ತಪ್ಪು ಮಾಡಿಲ್ಲವಲ್ಲ. ವಿಧಾನಸೌಧದ ಮುಂದೆ ಸರ್ಕಾರಿ ಕೆಲಸ ದೇವರ ಕೆಲಸ ಎಂದಿದೆ. ನನ್ನ ಕಚೇರಿಯಲ್ಲಿ ಪೂಜೆ ಮಾಡೋದಕ್ಕಿಂತ ಜನರ ಸೇವೆ ಮಾಡೋದೆ ನನಗೆ ದೊಡ್ಡ ಪೂಜೆ ಎಂದು ಹೇಳಿದೆ. ಇದು ತಪ್ಪಾ?

Advertisement

ಹಾಗಲ್ಲ, ವಿಧಾನಸೌಧ ಇರೋದು ಕಡ್ಡಿ ಕರ್ಪೂರ ಹಚ್ಚೋಕಲ್ಲ ಅಂದ್ರತೆ?
    ಹಾಗೇನೂ ಹೇಳಿಲ್ಲ. ಒಂದೊಮ್ಮೆ ಹಾಗೆ ಹೇಳಿದ್ರೂ ತಪ್ಪೇನು? ಇಲ್ಲಿ ಗಂಟೆ ಹೊಡೆಯೋದಕ್ಕಿಂತ ಶಾಲೆಗಳಲ್ಲಿ ಗಂಟೆ ಹೊಡೆದರೆ ಮಕ್ಕಳು ಶಾಲೆಗೆ ಬರ್ತವೆ, ಶಿಕ್ಷಣ ಕಲಿಯುತ್ತವೆ. ಭವಿಷ್ಯದ ಪ್ರಜೆಗಳು ರೂಪುಗೊಳ್ಳುತ್ತಾರೆ, ಪೂಜೆ-ಪುನಸ್ಕಾರಕ್ಕಿಂತ ಶಿಕ್ಷಣ ನೀಡುವ ಸಂಸ್ಕಾರವೇ ಮುಖ್ಯವಲ್ಲವೇ. ನಾವು ಮೊದಲು ಮಾಡಬೇಕಿರೋದು ಆ ಕೆಲಸ ಅಲ್ವೇ.

ಅಂದ್ರೆ ನಿಮ್ಮ ಮಾತಿನ ಅರ್ಥ? ಪೂಜೆ ಮಾಡಬಾರ್ಧು ಅಂತಾನಾ?
     ನಾನು ಆ ರೀತಿ ಹೇಳುವುದಿಲ್ಲ. ಪೂಜೆ-ಪುನಸ್ಕಾರ ವೈಯ ಕ್ತಿಕ. ನಾನು ಯಾರಿಗೂ ಪೂಜೆ ಮಾಡಬೇಡಿ ಎನ್ನುವುದೂ ಇಲ್ಲ, ಪೂಜೆ ಮಾಡಿ ಅಂತಲೂ ಹೇಳುವುದಿಲ್ಲ, ಆಯುಧ ಪೂಜೆಯಂದು ನನ್ನ ವಾಹನ ಚಾಲಕ ತಡವಾಗಿ 
ಬರ್ತೇನೆ ಅಂದ. ಯಾಕಪ್ಪಾ ಅಂತ ಕೇಳಿದೆ, ಆಯುಧ ಪೂಜೆ ಇದೆ ವಾಹನಕ್ಕೆ ಪೂಜೆ ಮಾಡಿ ಬರ್ತೇನೆ ಅಂದ, ಆಯ್ತು ಹೋಗಪ್ಪ ಎಂದೆ. ನಾನು ಯಾರನ್ನೂ ತಡೆ ಯೋನೂ ಅಲ್ಲ.

ಆದ್ರೂ, ನೀವು ಏನೇ ಹೇಳಿದರೂ ವಿವಾದವಾಗುತ್ತಲ್ಲಾ?
     ಏನು ಮಾಡೋದು ಸಾರ್‌. ಚೆನ್ನಾಗಿ ಕೆಲಸ ಮಾಡೋರ ಮೇಲೆ ಎಲ್ಲರ ಕಣ್ಣು ಬೀಳುತ್ತೆ. ನಾವು ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಾಡಿರುವ ಕೆಲಸ ಕ್ರಾಂತಿಕಾರಕ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡಿರುವ ಸಾಧನೆ ದೇಶಕ್ಕೆ ಮಾದರಿ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಮಾತೃಪೂರ್ಣ, ಇಂದಿರಾ ಕ್ಯಾಂಟೀನ್‌, ಸಾಲ ಮನ್ನಾ ದೇಶದಲ್ಲಿ ಎಲ್ಲಾದರೂ ಜಾರಿಗೆ ಬಂದಿವೆಯಾ. ಯಾರೇ ಬಹಿರಂಗ ಚರ್ಚೆಗೆ ಬಂದರೂ ನಾನು ಸಿದ್ಧ.

ಸಚಿವ ಸಂಪುಟದಲ್ಲಿ ಅಷ್ಟು ಸಚಿವರಿದ್ದರೂ ನಿಮ್ಮ ಮೇಲೆ ಯಾಕೆ ಕಣ್ಣು?
     ಅದೇ, ಮೊದಲೇ ಹೇಳಿದೆನಲ್ಲ, ಕೆಲಸ ಮಾಡೋರ ಮೇಲೆಯೇ ಎಲ್ಲರ ಕಣ್ಣು. ಸಣ್ಣ ಸಣ್ಣ  ತಪ್ಪು, ಮಾತುಗಳಿಗೂ ಅಪಾರ್ಥ ಕೊಡುವ ವ್ಯವಸ್ಥಿತ ಪಿತೂರಿ. ಸಾಧನೆಗಳ ಬಗ್ಗೆ ಚರ್ಚೆ ಮಾಡೋದಾದರೆ ಸೈ, ಅದು ಬಿಟ್ಟು ವಿಧಾನಸೌಧ
ದಲ್ಲಿ ಪೂಜೆ ಮಾಡಲ್ಲ ಅಂದಿದ್ದಕ್ಕೆ ರಾಜೀನಾಮೆ ಕೇಳ್ತಾರೆ ಎಂದರೆ ಏನು ಹೇಳ್ಳೋಣ. ವಿಧಾನಸೌಧ ನಮ್ಮಪ್ಪನ ಮನೆ ಆಸ್ತೀನಾ? ಅದು  ಈ ರಾಜ್ಯದ ಸರ್ವಧರ್ಮಿಯರಿಗೆ ಸೇರಿದ ಕಾಯಕ ಸ್ಥಳ.

ಹಾಗೆ ಹೇಳ್ತೀರಿ. ಆದರೆ, ಮೌಡ್ಯ ನಿಷೇಧ ಕಾಯ್ದೆ ವಿಚಾರದಲ್ಲಿ ಸರ್ಕಾರ “ಸಾಫ್ಟ್’ ಆಗಿದೆ ಅಲ್ವಾ?
      ಸಾಫ‌ೂr ಇಲ್ಲ, ಹಾರ್ಡೂ ಇಲ್ಲ. ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುವ ವಾಮಾಚಾರ, ಮೂಢನಂಬಿಕೆಯ ಮಡೆಸ್ನಾನದಂತಹ ಅನಿಷ್ಟ ತೊಲಗಬೇಕು ಎನ್ನುವುದು ನಮ್ಮ ಮೂಲ ಉದ್ದೇಶ. ಪ್ರಗತಿಪರರ ಒತ್ತಾಯವೂ ಅದೇ ಆಗಿತ್ತು.ಆ ನಿಟ್ಟಿನಲ್ಲಿ ನಾವು ಕರಡು ಸಿದ್ಧಪಡಿಸಿದ್ದೇವೆ.

ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೇ ಸಮಾಧಾನ ಇಲ್ಲ ಎಂದು ಹೇಳಿದ್ದಾರಲ್ಲಾ?
     ಇನ್ನೂ ಕೆಲವೊಂದು ನಿಷೇಧ ಮಾಡಬೇಕಿತ್ತು ಎಂಬುದು ಅವರ ವಾದ . ಇದು ಅಂತಿಮವಲ್ಲ. ಇನ್ನೂ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಬರಬೇಕಿದೆ, ಮತ್ತಷ್ಟು ಸುಧಾ ರಣೆ ಮಾಡಲು ಅವಕಾಶವಿದೆ. ಮೊದಲಿಗೆ ಇಂತದ್ದೊಂದು ಕಾಯ್ದೆ ಮಹಾರಾಷ್ಟ್ರ ಮಾದರಿಯಲ್ಲಿ ತರಲು ಮುಂದಾ ಗಿದ್ದೇವೆ ಎಂಬುದೇ ಸಮಾಧಾನ. ವಾಮಾಚಾರ ಹೆಸರಿನಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಣೆಗೊಳಪಡಿಸಿ ಕೊಲೆ ಎಸಗುವ ಕೃತ್ಯಕ್ಕೆ ಕಡಿವಾಣ ಬೀಳಬೇಕು.

ಮೌಡ್ಯ ನಿಷೇಧ ಕಾಯ್ದೆಗೆ ಸಂಪುಟದಲ್ಲೇ ಅಪಸ್ವರ ಇತ್ತಂತೇ?
      ಆ ರೀತಿ ಏನೂ ಇಲ್ಲ.  ಸಂಪುಟ ಉಪ ಸಮಿತಿ ಸಮಗ್ರವಾಗಿ ಪರಾಮರ್ಶೆ ಮಾಡಿ, ಸಂಪುಟ ಒಟ್ಟಾಗಿ ಚರ್ಚಿಸಿ ಕರಡು ಒಪ್ಪಿದೆ. ನೋಡಿ, ಒಂದು ವಿಚಾರದ ಬಗ್ಗೆ ಚರ್ಚೆಗಳು ಆದಾಗ ಪರ-ವಿರೋಧ ಎನ್ನುವುದಕ್ಕಿಂತ ಸಲಹೆ-ಸೂಚನೆಗಳು ಸಾಕಷ್ಟು ಬರುತ್ತವೆ. ನಾವು ಮುಕ್ತವಾಗಿ ಎಲ್ಲವನ್ನೂ ನೋಡಬೇಕು. ಅಂತಿಮವಾಗಿ ಒಮ್ಮತದ ನಿರ್ಧಾರ ಆಗಬೇಕು. 

ಮೌಡ್ಯ ನಿಷೇಧ‌ ವಿಧೇಯಕದಲ್ಲಿ ಜ್ಯೋತಿಷ್ಯ, ವಾಸ್ತು ನಿಷೇಧ ಮಾಡಬೇಕು ಎಂಬ ಬೇಡಿಕೆಯೂ ಇತ್ತಲ್ಲವೇ?
     ಎಲ್ಲವನ್ನೂ ಒಟ್ಟಿಗೆ ಮಾಡಲು ಸಾಧ್ಯವಿಲ್ಲ. ಆಚರಣೆ, ಸಂಪ್ರ ದಾಯ, ಜನರ ನಂಬಿಕೆ ಸೂಕ್ಷ್ಮ ವಿಷಯಗಳು. ಜನರನ್ನು ದಿಕ್ಕು ತಪ್ಪಿಸುವ , ಅಮಾಯಕರು, ಮುಗ್ಧರನ್ನು ವಂಚಿಸುವ, ಆನಾಗರಿಕ ಆಚರಣೆ ಮೊದಲು ನಿಷೇಧ ಆಗಲಿ. ಆ ನಂತರ ಉಳಿದ ವಿಚಾರಗಳ ಬಗ್ಗೆಯೂ ಚರ್ಚೆ ಮಾಡೋಣ.

ಬಡ್ತಿ ಮೀಸಲಾತಿ ವಿಚಾರ  ಏನು ಮಾಡ್ತೀರಿ?
     ಬಡ್ತಿ ಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರ ದಿಟ್ಟ ನಿಲುವು ತಾಳಿದೆ. ಎಸ್‌ಸಿ-ಎಸ್‌ಟಿ ವರ್ಗದ ಅಧಿಕಾರಿಗಳಿಗೆ ಈಗಾಗಲೇ ಕೊಟ್ಟಿರುವ ಬಡ್ತಿ ವಾಪಸ್‌ ಪಡೆಯುವ ಪ್ರಶ್ನೆಯಿಲ್ಲ. ಹಾಗೆಂದು ಬೇರೆಯವರಿಗೂ ಅನ್ಯಾಯ ಮಾಡುವುದೂ ಇಲ್ಲ. ಅದಕ್ಕಾಗಿಯೇ ಸುಗ್ರೀವಾಜ್ಞೆ ತಂದಿದ್ದೇವೆ, ರಾಜ್ಯಪಾಲರು ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಿರಿ ಎಂದು ಹೇಳಿದ್ದಾರೆ. ಆ ಕೆಲಸ ಮಾಡುತ್ತೇವೆ. ಅಗತ್ಯವಾದರೆ ಕಾಯ್ದೆಗೆ ತಿದ್ದುಪಡಿ ಅಥವಾ ಹೊಸ ಕಾನೂನು ರೂಪಿಸುತ್ತೇವೆ.

ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಆದೇಶ ಪಾಲನೆ ಮಾಡುತ್ತಿಲ್ಲ ಎಂಬ ದೂರಿದೆಯಲ್ಲಾ?
     ಸುಪ್ರೀಂಕೋರ್ಟ್‌ ಬಗ್ಗೆ ನಮಗೆ ಅತೀವ ಗೌರವ ಇದೆ. ನ್ಯಾಯಾಲಯಕ್ಕೆ ನಾವು ಸೆಡ್ಡು ಹೊಡೆಯುತ್ತಿಲ್ಲ. ಆದರೆ, ಬಡ್ತಿ ಪಡೆದಿರುವವರು ದೊಡ್ಡ ಅಪರಾಧ ಏನೂ ಮಾಡಿಲ್ಲ. ಅವರಿಗೆ ಅನ್ಯಾಯ ಆಗಬಾರದು ಎನ್ನುವುದಷ್ಟೇ ಕಾಳಜಿ. ಇದರಲ್ಲಿ ನ್ಯಾಯಾಂಗಕ್ಕೆ ಅಗೌರವ ತೋರುವ ಪ್ರಶ್ನೆಯೂ ಇಲ್ಲ.

ಜಾತಿವಾರು ಜನಗಣತಿ ಎಲ್ಲಿಗೆ ಬಂತು?
     ಅದು ಜಾತಿವಾರು ಜನಗಣತಿ ಅಲ್ಲ. ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ. ಅವಕಾಶ ವಂಚಿತರಿಗೆ ಮೀಸಲಾತಿ ಸೇರಿ ಸರ್ಕಾರದ ಸೌಲಭ್ಯ ಕಲ್ಪಿಸಲು ದೇಶದಲ್ಲಿ ಮೊದಲ ಬಾರಿಗೆ ಮಾಡಿರುವ ಗಣತಿ. ಆಯೋಗ ತನ್ನ ಕೆಲಸ ಮುಗಿಸಿದೆ, ಆದಷ್ಟು ಬೇಗ ಸರ್ಕಾರಕ್ಕೆ ಆ ವರದಿ ಸಲ್ಲಿಕೆಯಾಗಲಿದ್ದು ಸರ್ಕಾರ ಬಿಡುಗಡೆ ಮಾಡಲಿದೆ.

ಚುನಾವಣಾ ದೃಷ್ಟಿಯಿಂದ ಆ ವರದಿ ಬಿಡುಗಡೆ ಮಾಡುತ್ತಿಲ್ಲವಂತೆ?
     ಹಾಗೇನೂ ಇಲ್ಲ. ಚುನಾವಣೆಗಾಗಿ ಆ ಸಮೀಕ್ಷೆ ಮಾಡಿಸಿಲ್ಲ. ಚುನಾವಣೆ ದೃಷ್ಟಿಯೂ ಇಲ್ಲ. ಇದರಲ್ಲಿ ರಾಜಕೀಯ ಇಲ್ಲವೇ ಇಲ್ಲ.

ಹಾಗಾದರೆ ಮೀನಾ-ಮೇಷ ಯಾಕೆ?
     ಮೀನಾ-ಮೇಷ ಇಲ್ಲ. ಅತಿ ಶೀಘ್ರದಲ್ಲೇ ರಾಜ್ಯದ ಜನರ ಮುಂದೆ ವರದಿ ಇಡ್ತೇವೆ.

ವರದಿ ಎಲ್ಲಿದೆ? ಯಾವ ಮಹೂರ್ತಕ್ಕೆ ಕಾಯುತ್ತಿದ್ದೀರಿ?
     ಆಯೋಗದ ಬಳಿಯೇ ಇದೆ. ಅದು ಸರ್ಕಾರಕ್ಕೆ ಸಲ್ಲಿಕೆ ಯಾದ ನಂತರ ಬಿಡುಗಡೆ ಮಾಡಲಾಗುವುದು. ನಾವು ಮುಹೂರ್ತ ನೋಡಿ ಬಿಡುಗಡೆ ಮಾಡೋರಲ್ಲ.   

ಒಳ ಮೀಸಲಾತಿ ಬೇಡಿಕೆ ನಿಮ್ಮ ಸರ್ಕಾರದ ಅವಧಿಯಲ್ಲೇ ಈಡೇರುತ್ತಾ?
     ನಮ್ಮ ಸರ್ಕಾರದ ವತಿಯಿಂದ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಆದರೆ, ಸಮಗ್ರ ಚರ್ಚೆಯ ನಂತರ ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ಒಳ ಮೀಸಲಾತಿ  ಈಗಿನದಲ್ಲ ಬಹುವರ್ಷಗಳ ಬೇಡಿಕೆ. ಅನ್ಯಾಯ ಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಕರ್ತವ್ಯ. ಅದು ಏಕಪಕ್ಷೀಯವಾಗುವುದಿಲ್ಲ. ಸಮಗ್ರ ಚರ್ಚೆಯ ನಂತರವೇ ತೀರ್ಮಾನವಾಗಲಿದೆ.

ಜಾತಿ ಜನಗಣತಿ, ಬಡ್ತಿ ಮೀಸಲಾತಿ, ಒಳ ಮೀಸಲಾತಿ ಇವೆಲ್ಲವನ್ನೂ ಕಾಂಗ್ರೆಸ್‌ ಚುನಾವಣೆ ದೃಷ್ಟಿಯಿಂದಲೇ ನೋಡುತ್ತಿದೆ ಎಂಬ ಮಾತಿದೆಯಲ್ಲಾ?
     ಹಾಗೇನೂ ಇಲ್ಲ. ನೀವು ರಾಜಕೀಯವಾಗಿ ನೋಡಿದರೆ ರಾಜಕೀಯ ಕಾಣುತ್ತದೆ. ಮುಕ್ತವಾಗಿ ನೋಡಿದರೆ ಪಾರದರ್ಶಕವಾಗಿ ಕಾಣುತ್ತದೆ. ಪ್ರತಿಪಕ್ಷಗಳು ಎಲ್ಲದರಲ್ಲೂ ರಾಜಕೀಯ ಹುಡುಕುತ್ತಿವೆ ಅಷ್ಟೇ.

ಕಾಂಗ್ರೆಸ್‌ಗೆ ಲಿಂಗಾಯತ-ವೀರಶೈವ ವಿವಾದ ಬೇಕಿತ್ತಾ?
     ಅದಕ್ಕೂ ಕಾಂಗ್ರೆಸ್‌ಗೂ ಖಂಡಿತವಾಗಿಯೂ ಸಂಬಂಧವಿಲ್ಲ. ಅದನ್ನು ನಾವ್ಯಾರೂ ಹುಟ್ಟು ಹಾಕಿದ್ದೂ ಅಲ್ಲ. ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟಿದ್ದಾರೆ. ನೀವೆಲ್ಲರೂ ಒಟ್ಟಾಗಿ ಬನ್ನಿ ರಾಜ್ಯ ಸರ್ಕಾರದಿಂದ ಸಾಧ್ಯವಾಗಬಹುದಾದ ಪ್ರಯತ್ನ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿಗಳನ್ನು ಎತ್ತಿಕಟ್ಟುವ ಕೆಲಸ ನಾವು ಮಾಡುವುದಿಲ್ಲ. ನಾನು ಬಸವಣ್ಣನವರ ಅನುಯಾಯಿ. ನಾನು ಸಚಿವನಾಗಿ ಪ್ರಮಾಣ ಸ್ವೀಕರಿಸಿದ್ದು ಬಸವಣ್ಣನ ಹೆಸರಿನಲ್ಲಿ. ವಿಧಾನಸೌಧದ ಕಚೇರಿಗೆ ಪ್ರವೇಶ ಮಾಡಿದಾಗ ಮೊದಲು ಬಸವಣ್ಣನವರ ಚಿತ್ರಕ್ಕೆ ಗೌರವ ಸಲ್ಲಿಸಿಯೇ ಕೆಲಸ ಪ್ರಾರಂಭಿಸಿದ್ದು. ಹೀಗಾಗಿ, ಬಸವಣ್ಣನವರ ಬಗ್ಗೆ ಲಿಂಗಾಯಿತ-ವೀರಶೈವ ಸಮುದಾಯದ ಬಗ್ಗೆ ನಮಗೆ ಅಪಾರ ಗೌರವ.
ಎಚ್‌.ಆಂಜನೇಯ
ಸಮಾಜ ಕಲ್ಯಾಣ ಸಚಿವರು

ಸಂದರ್ಶನ: ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next