Advertisement

Tourism: ಕರ್ನಾಟಕದ ಕಾಶ್ಮೀರ ಕೊಡಗು

02:58 PM Dec 06, 2023 | Team Udayavani |

ಕರ್ನಾಟಕದ ಕಾಶ್ಮೀರ ಅಂದ ಕೂಡಲೇ ನೆನಪಿಗೆ ಬರುವುದು ಕೊಡಗು ಜಿಲ್ಲೆ. ಕಾಶ್ಮೀರ ಅಂದರೆ ಚಳಿ ಎಂದು ತಟ್ಟನೆ ನೆನಪಾದರೆ ಕೊಡಗಿನಲ್ಲೂ ಅದೇ ವಾತಾವರಣ. ಚಳಿಗಾಲದ ಮೈ ಕೊರೆಯುವ ಚಳಿಯೊಂದಿಗೆ ಮುಸುಕಿದ ಮಂಜು ಮುಂಜಾನೆಯ ಸೂರ್ಯನ ಹೊಂಗಿರಣ ಭರಿತ ವೈಭವದ ಸೊಗಸನ್ನೇ ಮರೆಮಾಚಿಸಿಬಿಡುತ್ತದೆ.

Advertisement

ಅಂದು ಶಾಲಾ ದಿನಗಳಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಒಂದು ವಾರ ಮೊದಲೇ ತಯಾರಿಗಳನ್ನು ಶಿಕ್ಷಕರು ನಡೆಸಿದ್ದರು. ನಾವು ಕೂಡ ದಿನಗಳ ಏಣಿಕೆ ಆರಂಭ ಮಾಡಿದ್ದೆವು. ನಮ್ಮ ಅಂತಿಮ ಪರೀಕ್ಷೆಗಳು, ವಾರ್ಷಿಕೋತ್ಸವದ ಸಂಭ್ರಮವನ್ನೆಲ್ಲಾ ಮುಗಿಸಿ ಡಿಸೆಂಬರ್‌ ತಿಂಗಳ ಹೊತ್ತಿಗೆ ಶೈಕ್ಷಣಿಕ ಪ್ರವಾಸ ಹೋಗಲು ತಯಾರಿ ನಡೆಸಲಾಗಿತ್ತು. ಸ್ಥಳಗಳ ಪಟ್ಟಿ ತಯಾರಿ ಆಗಿದ್ದರೂ ಪೋಷಕರ ಒಪ್ಪಿಗೆ ಪಡೆಯುವುದು ಸಾಹಸವೇ ಆಗಿತ್ತು. ಅಂತೂ ಇಂತೂ ಹೇಗಾದರೂ ಒಪ್ಪಿಗೆ ಪಡೆದು ಪ್ರಯಾಣಿಸಲು ಕಾಯುವ ದಿನಗಳು ನಮ್ಮದಾಗಿತ್ತು.

ಒಂದೆಡೆ ಮನೆ ಮಾಡಿದ ಕುತೂಹಲ ಮತ್ತೂಂದೆಡೆ ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಹವಣಿಸುತ್ತಿದ್ದ ಕಣ್ಣುಗಳು, ಅದು ನನ್ನ ಮೊದಲ ತುಂಬಾ ದೂರದ ಪ್ರಯಾಣ ಎಂಬ ಸಂತೋಷ ಒಂದು ಕಡೆಯಾದರೆ ಮೊದಲನೇ ಬಾರಿ ಎಂಬ ಭಯವೂ ಜತೆಗಿತ್ತು. ಹಾಗೂ ಹೀಗೂ ಹೊರಡುವ ದಿನ ಬಂದೆ ಬಿಟ್ಟಿತು. ಮುಂಜಾನೆ ಬೇಗನೆ ಶಾಲೆಗೆ ತಲುಪಬೇಕಾಗಿದ್ದರಿಂದ ಗೆಳತಿಯ ಮನೆಯಲ್ಲಿದ್ದು ಮರುದಿನ ಮುಂಜಾನೆ ಬೆಳಗ್ಗೆ 4ಕ್ಕೆ ಶಾಲಾ ಮೈದಾನದಿಂದ ಬಸ್‌ ಏರಿ ಹೊರಟೆವು. ಅಬ್ಟಾ ಅದೇನೋ ಸಂಭ್ರಮ ಸಂತೋಷ ಒಂದು ಅದ್ಭುತ ಮರೆಯಾಲಾಗದ ದಿನ.

ಪ್ರಯಾಣ ಕೆರಳಿಸಿದ ಕುತೂಹಲ ಮುಂದೆ ಯಾವ ಪ್ರೇಕ್ಷಣಿಯ ಸ್ಥಳಗಳನ್ನು ಕಾಣುವೆವೋ ಎಂಬ ತವಕದೊಂದಿಗೆ ನಮ್ಮ ಪ್ರವಾಸ ಪಟ್ಟಿಯಲ್ಲಿದ್ದ ಮೊದಲನೇ ಸ್ಥಳ ಸುಳ್ಯದಲ್ಲಿರುವ ಅರಂಬೂರು ಸೇತುವೆಯ ಬಳಿ ಬಂದು ಇಳಿದೆವು. ಪಯಸ್ವಿನಿ ನದಿಯ ಮೇಲೆ ತುದಿಕಾಣದಷ್ಟು ಉದ್ದವಾಗಿ ಚಾಚಿದ ಕಬ್ಬಿಣದ ಸೇತುವೆಯು ನಮ್ಮ ಪಾದಗಳನ್ನು ಇಟ್ಟ ತಕ್ಷಣ ಮಡಿಲಿನಲ್ಲಿ ನಮ್ಮನ್ನು ಹಿಡಿದು ತೂಗತೊಡಗಿತು. ಗಟ್ಟಿಯಾಗಿ ತಬ್ಬಿ ಹಿಡಿದು ಭಯದೊಂದಿಗೆ ಅರ್ಧತನಕ ಸಾಗಿ ವಾಪಾಸ್‌ ಮರಳಿ ಮೆಟ್ಟಿಲ ಬಳಿ ಬಂದು ನಿಂತೆವು. ಅಲ್ಲಿಂದ ಆರಂಭವಾದ ಬಹಳ ದೂರ ಪ್ರಯಾಣ ಮುಂಜಾನೆ ಬೇಗ ಹೊರಡಿದ್ದರಿಂದ ಬಸ್ಸಿನಲ್ಲಿ ನಿದ್ದೆ ಆವರಿಸಿ ಹೋಯಿತು ಆದರೆ ಎಚ್ಚರವಾಗಿ ಕಿಟಕಿಯ ಬಳಿ ಇಣುಕಿದಾಗ ಅಬ್ಬಿ ಜಲಪಾತವು ಕೈ ಬೀಸಿ ಕರೆಯುತಿತ್ತು. ಅಬ್ಟಾ ವೈಯಾರದಿಂದ ಬಳಕುತ್ತಾ ಹರಿಯುವ ನೀರಿನ ವೈಭವವು ಕಣ್ಣಿಗೆ ಹಬ್ಬ ಮತ್ತು ಮೈ ಮನಸು ತಂಪನೆಸಿತು.

ಇನ್ನು ಉಳಿದ ಸ್ಥಳಗಳಿಗೆ ನಮ್ಮ ಪ್ರಯಾಣ ಸಾಗಲಿದ್ದ ಕಾರಣ ಅಲ್ಲಿಂದ ಸ್ವಲ್ಪ ಬೇಗನೆ ಹೊರಟೆವು. ಪ್ರತಿಬಾರಿಯೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೊರಟಾಗ ಮುಂದೆಲ್ಲಿ ಎಂಬ ಕುತೂಹಲದ ಪ್ರಶ್ನೆ ಮನದೊಳಗೆ ಪಿಸುಗುಡುತ್ತಿತ್ತು. ಹಾಗೆಯೇ ಅದರ ಬಗ್ಗೆ ಯೋಚಿಸುತ್ತ ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಗೆ ತಲುಪಿದೆವು. ದೇವರ ದರ್ಶನ ಪಡೆದು ಮುಂದೆ ನಾವು ಹತ್ತಿದ್ದು ಬ್ರಹ್ಮಗಿರಿ ಬೆಟ್ಟ. ಇಲ್ಲಿ ಕಾವೇರಿ ನದಿಯ ಉಗಮ. ಬೆಟ್ಟದ ತುದಿಯಲ್ಲಿ ಮೆಟ್ಟಿಲನ್ನು ನೋಡುವಾಗಲೇ ಬಹಳ ಸುಸ್ತು ಅನ್ನಿಸಿತ್ತು. ಆದರೆ ಅದೇನೋ ಗೊತ್ತಿಲ್ಲ ಮೆಟ್ಟಿಲು ಲೆಕ್ಕ ಮಾಡುವ ನೆಪದಲ್ಲಾದರೂ ಹತ್ತುತ್ತೇವೆ ಎಂಬ ಛಲದೊಂದಿಗೆ ಹತ್ತಿ ಅಲ್ಲಲ್ಲಿ ಕುಳಿತುಕೊಂಡು ಮೇಲೆ ಏನೋ ವಿಶೇಷವಿರಬಹುದು ಎಂದು ಹತ್ತಿದೆವು. ಆದರೆ ಬೆಟ್ಟ ಆಚೆ ಕಡೆ ಹಚ್ಚ ಹಸಿರಾಗಿ ಮನೆಗಳೆಲ್ಲ ಸಣ್ಣ ಸಣ್ಣ ದಾಗಿ ಕಾಣುತಿತ್ತು. ಆದರೆ ಅಲ್ಲಿ ತನಕ ಹತ್ತಿದಾಗ ಅದೇ ವಿಶೇಷವಿರಬಹುದು ಅನಿಸಿ ಮತ್ತೆ ಇಳಿದು ಬಸ್‌ ನಲ್ಲಿ ಕುಳಿತು ಎಲ್ಲರೂ ಬಂದು ಹತ್ತಿ ಕುಳಿತುಕೊಳ್ಳುವವರೆಗೂ ಅದೇ ಮಾತುಗಳು ನಮ್ಮೊಳಗೇ ಮತ್ತೆ ಮತ್ತೆ ಧ್ವನಿಯಾಗುತಿತ್ತು.

Advertisement

ನಾವು ಅನಂತರ ತಲುಪಿದ ಸ್ಥಳವು ನನ್ನ ಮನಸಿಗೆ ಸಂತೋಷ, ಕಣ್ಣುಗಳಿಗೆ ಅದ್ಬುತವೆನಿಸಿತ್ತು. ಅದು ನಾವು ಕೊಡವರ ನಾಡಲ್ಲಿ ಕಂಡಂತ ಪ್ರಕೃತಿ ವೈಭವ ತೋರುವ ಹಚ್ಚ ಹಸುರಿನ ನಿಸರ್ಗಧಾಮ. ನಾವೆಲ್ಲರೂ ಭೇಟಿ ನೀಡಿದಾಗ ಕೊಡವರ ಸಂಸ್ಕೃತಿ ಆಚರಣೆಗಳ ಕಲೆಗಾರನ ಕೈಯಲ್ಲಿ ಅರಳಿದ ಕಲಾಮೂರ್ತಿಗಳು ನಮ್ಮನ್ನು ಸ್ವಾಗತಿಸಿದವು. ಮುಂದಿನ ಸವಾಲು ತೂಗುಸೇತುವೆ ಅರಂಬೂರಿನ ತೂಗುಸೇತುವೆಯಲ್ಲಿ ಒಮ್ಮೆ ಹೋಗಿದ್ದರಿಂದ ಭಯವೇನು ಅಷ್ಟಿರಲಿಲ್ಲ. ಆದರೂ ಅದನ್ನು ದಾಟಿ ಮುಂದೆ ಸಾಗಿದಾಗ ಅಲ್ಲಲ್ಲಿ ಬಿದಿರಿನ ಗಿಡಗಳ ಗುಂಪುಗಳು, ಕೊಡಗಿನ ಕೆಲವು ವಿಭಿನ್ನ ಸಂಸ್ಕೃತಿಯ ಮಣ್ಣಿನ ಮೂರ್ತಿಗಳು ಅಲ್ಲಲ್ಲಿ ಪ್ರತಿಬಿಂಬಿಸುತ್ತಿತ್ತು. ಬಣ್ಣ ಬಣ್ಣದ ಹಕ್ಕಿ, ಚಿನ್ನ ವರ್ಣದ ಜಿಂಕೆಗಳ ಹಿಂಡು ಅಬ್ಟಾ ಅರಣ್ಯ ಸುತ್ತಿದ ಅನುಭವವೇ ಸರಿ. ಅಲ್ಲಿ ಪ್ರಕೃತಿಯ ನೋಟವನ್ನು ಸವಿದು ದುಬಾರೆ ಕಡೆ ಹೊರಟೆವು. ಕಾವೇರಿ ನದಿಯ ಆಚೆ ಕಡೆ ಆನೆಗಳ ಕ್ಯಾಂಪ್‌ ಇತ್ತು. ನಾವು ಕುದುರೆ ಸವಾರಿ ಮತ್ತು ನದಿಯ ಸಣ್ಣ ಬದಿಯಲ್ಲಿ ನೀರು ತುಂಬಿದ ಜಾಗದಲ್ಲಿ ಆಟವಾಡಿ ಮುಂದೆ ಕೊನೆಯ ಸ್ಥಳವಾದ ರಾಜಸೀಟ್‌ ನತ್ತ ಪಯಣ ಬೆಳೆಸಿದೆವು.

ಬಣ್ಣದ ನೀರಿನ ಕಾರಂಜಿಯ ಚಿಮ್ಮುವಿಕೆಯ ವೈಭವವನ್ನು ಕಾಣಲು ಸಮಯ ಮೀರಿದ್ದರೂ ಅಲ್ಪ ಭರವಸೆಯೊಂದಿಗೆ ತಲುಪಿದೆವು ಆದರೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದಿದ್ದಾಗ ನಿರಾಸೆಯಿಂದ ಹೊರಗಡೆಯಿಂದಲೇ ವೈಭವವನ್ನು ಕಣ್ತುಂಬಿಸಿಕೊಂಡು ರಾತ್ರಿಯ ಊಟ ಮುಗಿಸಿ ಕೊಡವರ ನಾಡಿಗೆ ವಿದಾಯ ತಿಳಿಸಿ ನಾವು ನಮ್ಮೂರಿನತ್ತ ಪಯಣಿಸಿದೆವು. ಕುತೂಹಲಗಳು ಮನೆ ಮಾಡಿದ್ದ ಮನಸು ಮೌನವಾಗಿ ಇಡೀ ದಿನದ ಪಯಣವನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತ ನೆನಪಿನ ಮಾಲೆಗಳನ್ನು ಪೋಣಿಸುತ್ತ ಮನೆಯ ಕಡೆ ಹೊರಡಿದೆವು.

-ವಿಜಯಲಕ್ಷ್ಮೀ ಬಿ. ಕೆಯ್ಯೂರು

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next