ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವ್ಯಾಪ್ತಿಯಲ್ಲಿ ಬರುವ ಎಲ್ಲ 13 ಉಷ್ಣ ವಿದ್ಯುತ್ ಘಟಕಗಳು ಈಗ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 5020 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ನಡೆಸಿದೆ.
2017ರಲ್ಲಿ ವೈಟಿಪಿಎಸ್ ತನ್ನ ಎರಡು ಘಟಕಗಳಲ್ಲಿ ಹೊಸದಾಗಿ ಕಾರ್ಯ ನಿರ್ವಹಣೆ ಆರಂಭಿಸಿದಾಗ ಮಾತ್ರ ಎಲ್ಲ ಘಟಕಗಳು ಪೂರ್ಣ ಪ್ರಮಾಣದಲ್ಲಿ ತನ್ನ ಕಾರ್ಯ ನಿರ್ವಹಣೆ ನಡೆಸಿ ಉತ್ಪಾದನ ಸಾಮರ್ಥ್ಯದ ಪೂರ್ಣ ವಿದ್ಯುತ್ ಸೃಜಿಸಿದ್ದವು. ದೇಶದ ಉಳಿದ ರಾಜ್ಯಗಳಲ್ಲಿ ಕಲ್ಲಿದ್ದಲು ನಿರ್ವಹಣೆಯ ಸಮಸ್ಯೆ ಉಂಟಾಗುತ್ತಿರುವಾಗ ಕರ್ನಾಟಕದಲ್ಲಿ ಮಾತ್ರ ಸುಲಲಿತವಾಗಿ ವ್ಯವಸ್ಥೆಯನ್ನು ನಿಭಾಯಿಸುತ್ತಿರುವುದು ದಾಖಲೆಯಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಸಾಮಾನ್ಯವಾಗಿ ವಿದ್ಯುತ್ ಬೇಡಿಕೆಯನ್ನು ಆಧರಿಸಿ ಉತ್ಪಾದನಾ ಘಟಕಗಳ ಕಾರ್ಯನಿರ್ವಹಣೆ ಹಾಗೂ ಉತ್ಪಾದನೆ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ. ಸಾಮಾನ್ಯ ಬೇಡಿಕೆಯ ದಿನಗಳಲ್ಲಿ ಕೆಪಿಸಿಎಲ್ 3096 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ನಡೆಸುತ್ತದೆ.
ಕೊರತೆ ಇಲ್ಲ: ರಾಜ್ಯದ ಎಲ್ಲ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಐದು ದಿನಗಳ ಬೇಡಿಕೆ ಪೂರೈಸುವುದಕ್ಕೆ ಸಾಕಾದಷ್ಟು ಕಲ್ಲಿದ್ದಲು ದಾಸ್ತಾನು ಇದ್ದು, ಮುಂದಿನ ಅಗತ್ಯತೆಗೆ ಬೇಕಾದ ಕಲ್ಲಿದ್ದಲು ಪೂರೈಕೆಯೂ ನಿರಂತರವಾಗಿದೆ.
ಆರ್ ಟಿಪಿಎಸ್ ನಲ್ಲಿ 1,16,268 ಮೆಟ್ರಿಕ್ ಟನ್, ಬಿಟಿಪಿಎಸ್ 26,783 ಮೆಟ್ರಿಕ್ ಟನ್, ವೈಟಿಪಿಎಸ್ 1,02, 287 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 2,45,338 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ. ಐದು ದಿನಗಳ ಕಾಲ ರಾಜ್ಯದ ಒಟ್ಟು ಇಂಧನ ಬೇಡಿಕೆಯನ್ನು ಪೂರೈಸುವಷ್ಟು ಕಲ್ಲಿದ್ದಲು ದಾಸ್ತಾನು ರಾಜ್ಯದಲ್ಲಿ ಲಭ್ಯವಿದೆ.
ರಾಜ್ಯದಲ್ಲಿ ಕಲ್ಲಿದ್ದಲು ದಾಸ್ತಾನು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರಿಂದ ವಿದ್ಯುತ್ ಬೇಡಿಕೆ ಹಾಗೂ ಪೂರೈಕೆಯಲ್ಲಿ ನಾವು ಸಮತೋಲನ ಸಾಧಿಸಿದ್ದೇವೆ. ಐದು ವರ್ಷಗಳ ಬಳಿಕ ಎಲ್ಲ ಸ್ಥಾವರಗಳೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದು ಮಹತ್ವದ ಸಾಧನೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.