ಬೆಂಗಳೂರು : ಕರ್ನಾಟಕ ಮಹಿಳಾ ಯಕ್ಷಗಾನ ವತಿಯಿಂದ ಇತ್ತೀಚಿಗೆ ಗವಿಪುರದ ಉದಯಭಾನು ಕಲಾ ಸಂಘದಲ್ಲಿ ಪೌರಾಣಿಕ ಯಕ್ಷಗಾನ ಪ್ರಸಂಗಗಳ ಉತ್ಸವ ಏರ್ಪಡಿಸಲಾಗಿತ್ತು. ಗೌರಿ ಕೆ. ಸಾಸ್ತಾನ ನಿರ್ದೇಶನದಲ್ಲಿ ಮಹಿಳಾ ಕಲಾವಿದರಿಂದ ದಕ್ಷ ಯಜ್ಞ ಹಾಗೂ ಶ್ರೀನಿವಾಸ ಸಾಸ್ತಾನ ನಿರ್ದೇಶನದಲ್ಲಿ ಬಾಲ ಕಲಾವಿದರಿಂದ ಕೃಷ್ಣ ಗಾರುಡಿ ಪ್ರಸಂಗಗಳ ಪ್ರದರ್ಶನ ನಡೆಯಿತು.
ವೇದಾಂತ ಮಾಲಾ ಕಲಾ ಕುಟೀರ ಹಾಗೂ ಕಲಾ ಕುಟೀರ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಗಾರುಡಿ ಪ್ರಸಂಗದಲ್ಲಿ ಧೃತಿ ಅಮ್ಮೆಂಬಳ, ಸರಯೂ ವಿಠಲ್, ಕ್ಷಮಾ ಪೈ, ಅಭಿಶ್ರೀ ಶ್ರೀಹರ್ಷ, ವೇದಾಂತ ಭಾರದ್ವಾಜ್, ಸಹನಾ ಅನಿಲ್ ಕುಮಾರ್, ಗಗನ ಅನಿಲ್ ಕುಮಾರ್, ಸ್ಕಂದ ವಿಠಲ್, ಹನ್ವಿಕ, ನಿತ್ಯ, ಸಮೃದ್ಧ್ ಪಾತ್ರವಹಿಸಿದ್ದರು. ಭಾಗವತರಾಗಿ ವಿಶ್ವನಾಥ ಶೆಟ್ಟಿ , ಚೆಂಡೆ -ಸುಬ್ರಹ್ಮಣ್ಯ ಸಾಸ್ತಾನ ಮತ್ತು ಮದ್ದಲೆ- ರಾಘವೇಂದ್ರ ಬಿಡುವಾಳ ಹಿಮ್ಮೇಳವಿತ್ತು.
ಮಹಿಳಾ ಕಲಾವಿದರು ನಡೆಸಿಕೊಟ್ಟ ದಕ್ಷ ಯಜ್ಞ ಪ್ರಸಂಗದಲ್ಲಿ ಗೌರಿ ಸಾಸ್ತಾನ, ಸುಮಾ ಅನಿಲ್ ಕುಮಾರ್, ಅಂಬಿಕಾ, ಲತಾ ಕೃಷ್ಣಮೂರ್ತಿ, ಆಶಾ ರಾಘವೇಂದ್ರ, ಕುಮಾರಿಯರಾದ ದೀಕ್ಷಾ ಭಟ್, ಧೃತಿ ಅಮ್ಮೆಂಬಳ, ಸರಯೂ ವಿಠಲ್, ಕ್ಷಮಾ ಪೈ,ಅಭಿಶ್ರೀ ಶ್ರೀಹರ್ಷ ಭಟ್, ಸಹನಾ ಮತ್ತು ಗಗನಾ ಮುಮ್ಮೇಳದಲ್ಲಿ, ವಿಶ್ವನಾಥ ಶೆಟ್ಟಿ, ವಿನಯ ಶೆಟ್ಟಿ, ನರಸಿಂಹ ಆಚಾರ್, ಸಂಪತ್ ಹಿಮ್ಮೇಳದಲ್ಲಿ ವಿಜ್ರಂಭಿಸಿದರು.
ದಕ್ಣ ಯಜ್ಞದಲ್ಲಿ ಭಾಗವಹಿಸಲು ಶಿವನಿಂದ ಅನುಮತಿ ಪಡೆಯಲು ದಾಕ್ಷಾಯಿಣಿ ನಡೆಸುವ ಯತ್ನ ಅತ್ಯಂತ ಮನೋಜ್ಞವಾಗಿ ಮೂಡಿಬಂತು. ಬಾಲ ಕಲಾವಿದರು ನಡೆಸಿಕೊಟ್ಟ ಶ್ರೀ ಕೃಷ್ಣ ಗಾರುಡಿಯಲ್ಲಿ ಎಲ್ಲ ಮಕ್ಕಳು ಉತ್ತಮ ತರಬೇತಿಯೊಂದಿಗೆ ಅತ್ಯುತ್ತಮವಾಗಿ ನಿರ್ವಹಿಸಿದರು. ಅರ್ಜುನ, ಮೋಹಿನಿ, ಗಾರುಡಿಗರ ಅಭಿನಯ ಮನೋಜ್ಞವಾಗಿತ್ತು.
ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾದರ್ಶಿನಿ ಸಂಸ್ಥಾಪಕರಾದ ಹಾಗೂ ಯಕ್ಚಗಾನ ಅಕಾಡೆಮಿ ಸದಸ್ಯರಾದ ಶ್ರೀನಿವಾಸ ಸಾಸ್ತಾನ, ಡಾ. ವನಿತಾ ಹೆಬ್ಬಾರ್ ಮತ್ತಿತರರು ಭಾಗವಹಿಸಿದ್ದರು.