ತಿರುವನಂತಪುರಂ: 2021-22ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಕೂಟ ಇಂದು ಆರಂಭವಾಗಿದೆ. ಪುದುಚೇರಿ ವಿರುದ್ಧ ತನ್ನ ಮೊದಲ ಪಂದ್ಯವಾಡಿದ ಕರ್ನಾಟಕ ತಂಡ ಭರ್ಜರಿ ಗೆಲುವಿನೊಂದಿಗೆ ಕೂಟದಲ್ಲಿ ಶುಭಾರಂಭ ಮಾಡಿದೆ.
ಮಂಗಳಾಪುರಂನ ಕೆಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮನೀಷ್ ಪಡೆಯು ಪುದುಚೇರಿ ವಿರುದ್ಧ ಸವಾರಿ ಮಾಡಿತು. ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ 50 ಓವರ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದರೆ, ಗುರಿ ಬೆನ್ನತ್ತಿದ್ದ ಪುದುಚೇರಿ ತಂಡ 17.3 ಓವರ್ ನಲ್ಲಿ ಕೇವಲ 53 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರಿಂದ ಕರ್ನಾಟಕ ತಂಡವು 236 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತು.
ರಾಜ್ಯ ತಂಡದ ಪರ ರವಿಕುಮಾರ್ ಸಮರ್ಥ್ 95 ರನ್ ಗಳಿಸಿದರೆ, ಕೃಷ್ಣಮೂರ್ತಿ ಸಿದ್ದಾರ್ಥ್ 61 ರನ್, ನಾಯಕ ಮನೀಷ್ ಪಾಂಡೆ 64 ರನ್, ಶ್ರೀನಿವಾಸ್ ಸಮರ್ಥ್ ಅವರು 55 ರನ್ ಗಳಿಸಿದರು. ಪುದುಚೇರಿ ಪರವಾಗಿ ಆಡುತ್ತಿರುವ ಕರ್ನಾಟಕದ ಪವನ್ ದೇಶಪಾಂಡೆ 16 ರನ್ ಗಳಿಸಿದ್ದೇ ಹೆಚ್ಚಿನ ಗಳಿಕೆ.
ಇದನ್ನೂ ಓದಿ:ಬಿಬಿಎಲ್ ಗೆ ಕಿಚ್ಚು ಹಚ್ಚಿದ ಯುವ ಆಟಗಾರನ ಅದ್ಭುತ ಕ್ಯಾಚ್: ವಿಡಿಯೋ
ಬಿಗು ದಾಳಿ ಸಂಘಟಿಸಿದ ಜಗದೀಶ್ ಸುಚಿತ್ ಕೇವಲ ಮೂರು ರನ್ ನೀಡಿ ನಾಲ್ಕು ವಿಕೆಟ್ ಕಿತ್ತರೆ, ಕೌಶಿಕ್ 19 ರನ್ ನೀಡಿ ಮೂರು ವಿಕೆಟ್ ಕಿತ್ತರು.