Advertisement

ಕನ್ನಡ ಕಟ್ಟಿದ ಕವಿಸಂ

12:30 AM Nov 08, 2018 | |

ಅದು ಮುಂಬೈ ಪ್ರಸಿಡೆನ್ಸಿಯ ಆಡಳಿತದ ಕಾಲ. ಅಲ್ಲೇನಿದ್ದರೂ ಮರಾಠಿ ಭಾಷಿಕರದ್ದೇ ಮೇಲುಗೈ. ಅವರು ಹೇಳಿದಂತೆ ಅಡಳಿತ ನಡೆಯಬೇಕು. ಕನ್ನಡ ಬರೀ ಮನೆಯ ಭಾಷೆ, ಸ್ವಾಭಿಮಾನ ಇದ್ದವರಿಗೆ ಮನದ ಭಾಷೆಯಾಗಿತ್ತು. ಒಬ್ಬ ಕವಿ ಕನ್ನಡದಲ್ಲಿ ಬರೆದು ಹಾಡುವುದಕ್ಕೆ ಹೊರಟರೆ ಆತನಿಗೆ ಕಲ್ಲು ಎಸೆಯುವ ಪುಢಾರಿಗಳಿದ್ದರು.

Advertisement

ಇಂತಿಪ್ಪ ಸಮಯದಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಧಾರವಾಡದಲ್ಲಿ ರಾ.ಹ.ದೇಶ ಪಾಂಡೆ ಅವರು 1890, ಜುಲೈ,20 ರಂದು ಕರ್ನಾಟಕ ವಿದ್ಯಾವರ್ಧಕ ಸಂಘ(ಕವಿಸಂ)ವನ್ನು ಆರಂಭಿಸಿದರು.

ವಿದ್ಯೆಯನ್ನು ವರ್ಧಿಸುವುದಕ್ಕೆ ಒಂದು ಸಂಘದ ಅಗತ್ಯ ಅಂದಿನ ದಿನಗಳಲ್ಲಿ ಈ ಭಾಗದ ಕನ್ನಡಿಗರಿಗೆ ಅನಿವಾರ್ಯವಾಗಿತ್ತು. ಹೀಗಾಗಿ ಮರಾಠಿ ಭಾಷೆಯ ದರ್ಪಕ್ಕೆ ಪ್ರತ್ಯುತ್ತರ ಕೊಡುವುದಕ್ಕೆ ಕನ್ನಡಿಗರೇ ಹಿಂದೇಟು ಹಾಕುವ ಸಂದರ್ಭದಲ್ಲಿ ಜನ್ಮ ತಳೆದ ಕವಿಸಂ ಬರೀ ಸಾಹಿತ್ಯ, ಸಂವಾದಕ್ಕೆ ಮಾತ್ರ ತನ್ನನ್ನು ಸೀಮಿತ ಮಾಡಿಕೊಳ್ಳಲೇ ಇಲ್ಲ.

ಕನ್ನಡ ಪುಸ್ತಕ ಓದುವ, ಬರೆಯುವ, ಬರೆದು ಹಾಡುವ, ಚರ್ಚೆ ಮಾಡುವ, ಸಂವಾದಕ್ಕೆ ಪ್ರತಿಯಾಗಿ ಪತ್ರಿಕೆಗಳಲ್ಲಿ ಕನ್ನಡದ ಸ್ವಾಭಿಮಾನ ಕೆರಳಿಸುವ ವಿಚಾರಗಳಿಗೆ ವಿದ್ಯಾವರ್ಧಕ ಸಂಘ ವೇದಿಕೆಯಾಗಿ ಮಾರ್ಪಾಟಾಯಿತು. ಕನ್ನಡವನ್ನು ಇಲ್ಲಿ ಧೈರ್ಯವಾಗಿ ಮಾತನಾಡುವ, ಹಾಡುವ ಮತ್ತು ಬರೆಯಲು ಬನ್ನಿ, ನಾವು ಬಳಪ ಕೊಡುತ್ತೇವೆ. ಪೆನ್ನು ಪುಸ್ತಕ ಸಿದ್ಧವಿದೆ ಎಂದು ಕೈ ಬೀಸಿ ಕರೆದು ಕನ್ನಡ ಭಾಷಾಭಿಮಾನವನ್ನು ಈ ನೆಲದಲ್ಲಿ ಗಟ್ಟಿಯಾಗಿ ಕಟ್ಟಿಕೊಡಲು ಕವಿಸಂ ಶ್ರಮಿಸುತ್ತ ಬಂದಿತು.

ಚಳವಳಿಗಳ ಗಂಗೋತ್ರಿ: ಕರ್ನಾಟಕ ವಿದ್ಯಾವರ್ಧಕ ಸಂಘ ಬರೀ ಸಾಹಿತ್ಯಕ್ಕೆ ಸೀಮಿತವಾಗಿದ್ದರೆ ಇಷ್ಟೊಂದು ಮಹತ್ವ ಪಡೆದುಕೊಳ್ಳುತ್ತಿರಲಿಲ್ಲವೇನೋ. ಬರುತ್ತ ಬರುತ್ತ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಂಡು ಮುನ್ನಡೆದ ಕವಿಸಂ ಕನ್ನಡ ನಾಡು-ನುಡಿ ನೆಲ ಜಲದ ಸಮಸ್ಯೆಗಳ ಚರ್ಚೆ ಮತ್ತು ಹೋರಾಟಕ್ಕೆ ವೇದಿಕೆಯಾಯಿತು.

Advertisement

ಎಂಭತ್ತರ ದಶಕದಲ್ಲಿ ನಡೆದ ಗೋಕಾಕ ಚಳವಳಿ ಹುಟ್ಟುಕೊಂಡಿದ್ದೇ ಧಾರವಾಡದ ವಿದ್ಯಾವರ್ಧಕ ಸಂಘದ ವೇದಿಕೆಯ ಮೇಲೆ. ಆ ನಂತರ ನಡೆದ ಸಾಹಿತ್ಯ ಬಂಡಾಯ, ರೈತ ಚಳವಳಿ, ಕಳಸಾ-ಬಂಡೂರಿ ಹೋರಾಟದವರೆಗೂ ಎಲ್ಲದಕ್ಕೂ ಕರ್ನಾಟಕ ವಿದ್ಯಾವರ್ಧಕ ಸಂಘ ವೇದಿಕೆ ಒದಗಿಸಿತು. ಇಂದಿಗೂ ಸಹ ಇಲ್ಲಿ ಮೂರು ಸಭಾಭವನಗಳಿದ್ದೂ ಮೂರರಲ್ಲೂ ಪ್ರತಿದಿನ ಮುಂಜಾನೆ, ಸಂಜೆ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ. ಸಾಹಿತ್ಯ, ಸಂಗೀತ, ಸಂಸ್ಕೃತಿ, ಕಲೆ, ಚಳವಳಿ, ಗಡಿ ಸಮಸ್ಯೆ, ನೀರು, ರೈತರ ಸಮಸ್ಯೆ ಒಂದೇ ಎರಡೇ ಎಲ್ಲದಕ್ಕೂ  ವೇದಿಕೆ ಸಜ್ಜಾಗಿರುತ್ತದೆ.

ಪಡೆ ಹುಟ್ಟು ಹಾಕಿದ ನೆಲ :ಒಂದೆಡೆ ಪ್ರಬಲ ಮರಾಠಿ ಸಾಹಿತ್ಯ, ಇನ್ನೊಂದೆಡೆ ಕನ್ನಡವಿದ್ದರೂ ಅದೂ ಪ್ರತ್ಯೇಕ ಹಳೆ ಮೈಸೂರು ರಾಜ್ಯ. ಇದರ ಮಧ್ಯೆ ಕನ್ನಡವನ್ನು ಕಟ್ಟುವ ಕೆಲಸಕ್ಕೆ ಕಟ್ಟಾಳುಗಳ ಅಗತ್ಯವಿತ್ತು. ಈ ಎರಡು ಭಾಗದ ಹಿರಿಯ ಸಾಹಿತಿಗಳು, ಸಂಶೋಧಕರು ಮತ್ತು ಸಾಹಿತ್ಯಿಕ ಪ್ರಬುದ್ಧರಿಗೆ ಸೆಡ್ಡು ಹೊಡೆದು ನಿಲ್ಲುವ ಸಾಹಿತಿಗಳು, ನಾಟಕಕಾರರು, ಕವಿಗಳು ಕವಿಸಂನಲ್ಲಿ ಸಂವಾದಕ್ಕೆ ಕುಳಿತರು. ಡಾ|ಗಿರೀಶ್‌ ಕಾರ್ನಾಡ, ಪ್ರೊ|ಚಂಪಾ, ಡಾ|ಚಂದ್ರಶೇಖರ ಕಂಬಾರ, ಡಾ|ಎಂ.ಎಂ.ಕಲಬುರ್ಗಿ, ಡಾ|ಗಿರಡ್ಡಿ ಗೋವಿಂದರಾಜ್‌ ಸೇರಿದಂತೆ ನೂರಾರು ಯುವ ಸಾಹಿತಿಗಳು ವಿಭಿನ್ನ ಮಗ್ಗಲಲ್ಲಿ ಕೆಲಸ ನಿರ್ವಹಿಸಲು ಕವಿಸಂ ಚೈತನ್ಯ ತುಂಬಿದ್ದು ಅಷ್ಟೇ ಸತ್ಯ.

ಪಾಪು ಸುವರ್ಣಾಧಿಕಾರಿ: ಇನ್ನು ಕವಿಸಂನ ಮೊದಲ ಅಧ್ಯಕ್ಷರು ರಾ.ಹ.ದೇಶಪಾಂಡೆ ಅವರು. ನಂತರ ಅನೇಕರು ಆಗಿ ಹೋದರೂ, 70ರ ದಶಕದಿಂದ ಹಿರಿಯ ಪತ್ರಕರ್ತ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅವರೇ ಅಧ್ಯಕ್ಷರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರ ಅಧ್ಯಕ್ಷ ಗಿರಿಗೆ ಇದೀಗ 50 ವರ್ಷಗಳು ತುಂಬಿವೆ. 2018ರಲ್ಲಿ ನಡೆದ ಚುನಾವಣೆಯಲ್ಲೂ ಮತ್ತೆ ಅವರೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.

ಒಟ್ಟಿನಲ್ಲಿ ಇಂದು ಧಾರವಾಡವು ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ರಾಜಧಾನಿಯಾಗುವುದಕ್ಕೆ ಕಾರಣವಾಗಿದ್ದು ಕರ್ನಾಟಕ ವಿದ್ಯಾವರ್ಧಕ ಸಂಘ. ಕನ್ನಡ ಭಾಷೆ, ನೆಲ, ಜಲ, ಸ್ವಾಭಿಮಾನ ಮತ್ತು ಕನ್ನಡತನ ಈ ನೆಲದಲ್ಲಿ ಗಟ್ಟಿಯಾಗಿ ಬೇರೂರಲು ನೀರೆರೆದಿದ್ದು ಇದೇ ಕವಿಸಂ ಎಂದರೆ ಅತಿಶಯೋಕ್ತಿಯಾಗಲಾರದು.

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next