Advertisement
ಗುರುವಾರ ವಿಧಾನಸಭಾ ಕಲಾಪದಲ್ಲಿ ಡಿಎಚ್ ಶಂಕರಮೂರ್ತಿ ಅವರ ವಿರುದ್ಧ ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಲಾಗಿತ್ತು. ಏತನ್ಮಧ್ಯೆ ಜೆಡಿಎಸ್ ನಿಗೂಢ ನಿಲುವಿನಿಂದಾಗಿ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ತನ್ನ ನಿಲುವನ್ನು ಬದಲಾಯಿಸಿ ಜೆಡಿಎಸ್ ನ ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನ ಅಲಂಕರಿಸಲಿ ಎಂದು ದಾಳ ಉರುಳಿಸಿತ್ತು.
ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ವಿಚಾರಕ್ಕೆ ಜೆಡಿಎಸ್ ಬೆಂಬಲ ನೀಡಲು ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನಕ್ಕೇರಲಿ ಎಂಬ ಆಫರ್ ಅನ್ನು ಕಾಂಗ್ರೆಸ್ ಕೊಟ್ಟಿತ್ತು. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸುವ ಪ್ರಯತ್ನ ನಡೆಸಿದ್ದರು. ನಾಟ್ ರಿಚಬಲ್ ಆದ ದೇವೇಗೌಡರು:
ಸಭಾಪತಿ ಸ್ಥಾನದಿಂದ ಪದಚ್ಯುತಗೊಳಿಸುವ ಹೈಡ್ರಾಮಾ ನಡೆಯುತ್ತಿರುವಂತೆಯೇ ಕಾಂಗ್ರೆಸ್ ಮುಖಂಡರು ದೇವೇಗೌಡರನ್ನು ಸಂಪರ್ಕಿಸುವಷ್ಟರಲ್ಲಿ ಅವರು ನಾಟ್ ರಿಚಬಲ್ ಆಗಿದ್ದರು. ಸಭಾಪತಿ ವಿಚಾರದಲ್ಲಿ ಕುಮಾರಸ್ವಾಮಿ ಅವರದ್ದೇ ಅಂತಿಮ ತೀರ್ಮಾನ ಎಂದು ದೇವೇಗೌಡರು ಹೊಣೆಗಾರಿಕೆ ವಹಿಸಿ ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದರು.
Related Articles
ಸಭಾಪತಿಯವರಿಗೆ ಬೆಂಬಲ ನೀಡುವ ವಿಚಾರದ ಕುರಿತು ಎಚ್ ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಹೊರಟ್ಟಿ ಅವರು ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಅವರು ಜೆಡಿಎಸ್ ಮುಖಂಡರ ಮಾತುಕತೆಗೆ ಆಗಮಿಸಿದ್ದರು. 2 ತಿಂಗಳ ಕಾಲ ಶಂಕರಮೂರ್ತಿ ಅವರು ಸಭಾಪತಿಯಾಗಿ ಮುಂದುವರಿಯಲಿದ್ದು, ಬಳಿಕ ಜೆಡಿಎಸ್ ನ ಹೊರಟ್ಟಿ ಅವರು ಸಭಾಪತಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ಮಾತುಕತೆ ಬಳಿಕ ಈಶ್ವರಪ್ಪ ತಿಳಿಸಿದ್ದರು.
Advertisement
ಸಭಾಪತಿ ಸ್ಥಾನದಿಂದ ನಿರ್ಗಮಿಸಿದ್ದ ಶಂಕರಮೂರ್ತಿ:ಮೇಲ್ಮನೆ ಕಲಾಪದಲ್ಲಿ ಸಭಾಪತಿ ಸ್ಥಾನದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ವೇಳೆ ಡಿಎಚ್ ಶಂಕರಮೂರ್ತಿ ಅವರು ಸಭಾಪತಿ ಸ್ಥಾನದಿಂದ ನಿರ್ಗಮಿಸಿ ತಮ್ಮ ಕೊಠಡಿಯಲ್ಲಿ ಕುಳಿತು ಕಲಾಪವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದರು. ಉಪಸಭಾಪತಿ ಮರಿತಿಬ್ಬೇಗೌಡರು ಸಭಾಪತಿ ಸ್ಥಾನದಲ್ಲಿ ಕುಳಿತಿದ್ದರು. ತದನಂತರ ಕಾಂಗ್ರೆಸ್ ಮುಖಂಡರಿಗೆ ಅವಿಶ್ವಾಸ ನಿರ್ಣಯ ಮಂಡಿಸಲು ಉಪಸಭಾಪತಿ ಅವಕಾಶ ನೀಡಿದರು. ಅವಿಶ್ವಾಸ ನಿರ್ಣಯದಲ್ಲಿ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ. 1 ಮತದ ಅಂತರದಲ್ಲಿ ಶಂಕರಮೂರ್ತಿಗೆ ಗೆಲುವು! ಕಾಂಗ್ರೆಸ್ ಪಕ್ಷ ಸಭಾಪತಿ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದ್ದು, ಅವಿಶ್ವಾಸ ನಿರ್ಣಯದ ಪರ 36 ಮತ ಚಲಾವಣೆಯಾಗಿದ್ದರೆ, ನಿರ್ಣಯದ ವಿರುದ್ಧ 37 ಮತಗಳು ಚಲಾವಣೆಯಾಗಿತ್ತು. ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸುವ ಮೂಲಕ ಡಿಎಚ್ ಶಂಕರಮೂರ್ತಿ ಅವರ ಸಭಾಪತಿ ಸ್ಥಾನ ಅಬಾಧಿತವಾದಂತಾಗಿದೆ.