Advertisement

Bangalore: ಕರ್ನಾಟಕ ಏಕೀಕರಣ ಚಳವಳಿಯ ಸೆಲೆ-ನೆಲೆ ನಮ್ಮ ಬೆಂಗಳೂರು

03:30 PM Oct 30, 2023 | Team Udayavani |

ಕನ್ನಡ ಭಾಷಿಕರು ನೆಲೆಸಿರುವ ಕಪ್ಪು ಮಣ್ಣಿನ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದದ್ದೇ ರೋಚಕ ಸಂಗತಿ. ಏಕೀಕರಣದ ಹಿಂದೆ ದೊಡ್ಡ ಹೋರಾಟದ ಇತಿಹಾಸವೇ ಇದೆ. ಇದಕ್ಕೆ ನಾಂದಿ ಹಾಡಿದ ಬೆಂಗಳೂರಿನ ಹೋರಾಟಗಾರರ ಕೊಡುಗೆಯೂ ಅಪಾರ. ಗಡಿನಾಡಿನಲ್ಲಿ ಇದ್ದ ವಿರೋಧಗಳನ್ನು ನಿವಾರಿಸಿ, ಏಕೀಕರಣಕ್ಕೆ ಶ್ರಮಿಸಿದ ಮಹನೀಯರು ಐಟಿ ಸಿಟಿಯಲ್ಲಿದ್ದಾರೆ. ರಾಜ್ಯದ ಕೀರ್ತಿ ಪತಾಕೆ ಹಾರಿಸಿದವರನ್ನು ಸುವರ್ಣ ಕರ್ನಾಟಕ ಸಂಭ್ರಮದಲ್ಲಿ ಸ್ಮರಿಸಬೇಕಿದೆ. ಅಂತಹ ಸ್ಮರಣೆಯ ಹೂರಣ ಇಂದಿನ ಸುದ್ದಿ ಸುತ್ತಾಟದಲ್ಲಿದೆ.

Advertisement

ಇಂದು ಕನ್ನಡ ಭಾಷೆ ಇಷ್ಟರ ಮಟ್ಟಿಗೆ ಬದುಕಿ-ಉಳಿದಿದೆ ಎಂದರೆ ಅದಕ್ಕೆ ಕಾರಣ ಕನ್ನಡ ಪರ ಹೋರಾಟ ಮಾಡಿದ ಸಂಘ-ಸಂಸ್ಥೆಗಳು. ಸಾಹಿತಿಗಳು ಹಾಗೂ ಕರ್ನಾಟಕ ಏಕೀಕರಣದ ಹೋರಾಟಗಳು. ಇದರ ಪ್ರತಿಫ‌ಲವಾಗಿ ಪ್ರಸ್ತುತ ವರ್ಷಕ್ಕೆ “ಕರ್ನಾಟಕ’ ಎಂದು ನಾಮಕರಣವಾಗಿ 50 ವರ್ಷಗಳು ತುಂಬಿದ ಸಂಭ್ರಮ. ಸ್ವಾತಂತ್ರ್ಯ ನಂತರವು ಕೆಲವು ಭಾಗಗಳಲ್ಲಿ ರಾಜ್ಯದಲ್ಲಿ ವಿವಿಧ ರಾಜ-ಸಂಸ್ಥಾನಗಳ ಆಳ್ವಿಕೆ ನಡೆಯುತ್ತಿತ್ತು. ತೆಲುಗು, ತಮಿಳು, ಉರ್ದು ಸೇರಿ ನೆರೆ ರಾಜ್ಯಗಳ ಭಾಷೆಗಳು ಕನ್ನಡದ ಮೇಲೆ ತೀವ್ರ ಪ್ರಭಾವ ಬೀರಿದ್ದು, ಮಾತೃ ಭಾಷೆಯೇ ಕಳೆದು ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ಕನ್ನಡ ಉಳಿಸಿಕೊಳ್ಳುವಲ್ಲಿ ಕನ್ನಡಪರ ಸಂಘಟನೆಗಳು ಹುಟ್ಟಿಕೊಂಡವು.

ಸಾಹಿತಿಗಳು, ಹೋರಾಟಗಾರರು, ರಾಜಕಾರಣಿಗಳು, ಚಲನಚಿತ್ರ ನಟರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ರಾಜಧಾನಿ ಬೆಂಗಳೂರು ಸೇತುವೆ ಆಗಿತ್ತು. 1928ರಲ್ಲಿ ಬಿ.ಶಿವಮೂರ್ತಿಶಾಸ್ತ್ರಿ ಮತ್ತು ಬೆನಗಲ್‌ ರಾಮರಾಯರು ಸೇರಿ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ “ಕರ್ನಾಟಕ ಏಕೀಕರಣ ಸಂಘ’ ಪ್ರಾರಂಭಿಸಿದರು. ಈ ಸಂಘಕ್ಕೆ ಬೆನಗಲ್‌ ರಾಮರಾಯರು ಅಧ್ಯಕ್ಷರಾಗಿ, ಬಿ.ಶಿವಮೂರ್ತಿಶಾಸ್ತ್ರಿ ಕಾರ್ಯದರ್ಶಿ ಆಗಿದ್ದರು. ಈ ಸಂದರ್ಭದಲ್ಲೇ ಕರ್ನಾಟಕ ಏಕೀಕರಣದ ಬಗ್ಗೆ ರಾಜಧಾನಿಯಲ್ಲಿ ಮೊದಲ ಬಾರಿಗೆ ಗಟ್ಟಿಯಾದ ಧ್ವನಿ ಕೇಳಿ ಬಂದಿತ್ತು. ಆಗ ಕೆಲವರು ಏಕೀಕರಣವನ್ನು ವಿರೋಧಿಸಿದಾಗ ಸಾಹಿತಿಗಳಾದ ಬಿ.ಎಂ.ಶ್ರೀ., ಡಿ.ವಿ.ಜಿ., ಅ.ನಾ.ಕೃ., ಬಿ.ಶಿವಮೂರ್ತಿ ಶಾಸ್ತ್ರಿ, ನಿಟ್ಟೂರು ಶ್ರೀನಿವಾಸರಾಯರು, ತಿ.ತಾ.ಶರ್ಮಾ, ಕೆ.ಸಂಪತ್‌ ಗಿರಿರಾಯರು ಮುಂದಾಳತ್ವ ವಹಿಸಿ ಕರ್ನಾಟಕ ಏಕೀಕರಣದ ಪರವಾಗಿ ನಿಂತರು.

“ಮುಂದಿನ ಕರ್ನಾಟಕ’ ಎಂದು ಚರ್ಚೆ: 1949ರಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ತಿ.ತಾ.ಶರ್ಮಾ ಹಾಗೂ ಕಾರ್ಯದರ್ಶಿ ಆಗಿದ್ದ ಎಲ್‌.ಎಸ್‌. ಶೇಷಗಿರಿರಾವ್‌ ಅವರು ಅಂದಿನ ಪ್ರಧಾನಿ ನೆಹರು ಅವರಿಗೆ ಕರ್ನಾಟಕ ಏಕೀಕರಣವಾಗಬೇಕೆಂದು ಇಂಗ್ಲಿಷ್‌ನಲ್ಲಿ ಮನವಿ ಪತ್ರ ಬರೆದಿದ್ದರು. 1947 ಜೂ.9ರಂದು ಬೆಂಗಳೂರಿನ ಕಸಾಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಮೈಸೂರು’ ಎಂಬ ವಿಚಾರ ಸಂಕಿರಣ ನಡೆಯಿತು. ಆಗ ತಿ.ತಾ.ಶರ್ಮಾ ಅವರು ಮುಂದಿನ ಮೈಸೂರು ಅನ್ನುವ ಬದಲು “ಮುಂದಿನ ಕರ್ನಾಟಕ’ ಎಂದು ಚರ್ಚಿಸಿ ಎಂದು ತಿಳಿಸಿದ್ದರು. ಕರ್ನಾಟಕ ಏಕೀಕರಣದಲ್ಲಿ ಅದರಿಗುಂಚಿ ಶಂಕರಗೌಡ ಅವರ ಪಾತ್ರ ಬಹುಮುಖ್ಯವಾಗಿದ್ದು, 1955ರಲ್ಲಿ ಅದರಿಗುಂಚಿ ಶಂಕರಗೌಡ ಅವರು ಹುಬ್ಬಳ್ಳಿಯಲ್ಲಿ 50 ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇವರಿಗೆ ಬೆಂಬಲವಾಗಿ ಬೆಂಗಳೂರಿನ ಸಂಸ್ಕೃತ ಕಾಲೇಜಿನಲ್ಲಿ ಸಭೆ ನಡೆಸಲಾಗಿತ್ತು. ಆಗ ಅ.ನಾ.ಕೃ, ತಿ.ತಾ.ಶರ್ಮಾ ಅವರು ಸಭೆಯಲ್ಲಿ “ಶಂಕರಗೌಡ ಅವರು ಉಪವಾಸದಿಂದ ಸಾಯುತ್ತಿದ್ದಾರೆ. ಅದರ ಕಡೆ ಗಮನ ಕೊಟ್ಟು ಪರಿಹಾರ ಒದಗಿಸಬೇಕು ಎಂದು ಧ್ವನಿ ಎತ್ತಿದ್ದರು.

ಗದ್ದಲದ ನಡುವೆಯೇ ಅಂದು ನಡೆದ ಕೆಪಿಸಿಸಿ ಸಭೆಯಲ್ಲಿ “ಕರ್ನಾಟಕ ಏಕೀಕರಣ ಮಾಡಬೇಕು. ಆರು ತಿಂಗಳೊಳಗೆ ಏಕೀಕೃತ ಕರ್ನಾಟಕ ರಚಿಸಬೇಕು. ಇಲ್ಲದಿದ್ದಲ್ಲಿ ಆರು ತಿಂಗಳ ನಂತರ ಸಂಸತ್‌ ಸದಸ್ಯರು, ಮಂತ್ರಿಗಳು, ಮುಂಬೈ ಸರ್ಕಾರದ ವಿಧಾನಸಭೆಗೆ ಇಲ್ಲಿಂದ ಆಯ್ಕೆಯಾದ ಜನಪ್ರತಿನಿಧಿಗಳೆಲ್ಲ ರಾಜೀನಾಮೆ ನೀಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂಬ ಎಚ್ಚರಿಕೆ ನಿರ್ಣಯವನ್ನೂ ಕಾರ್ಯಕಾರಿ ಸಮಿತಿ ಕೈಗೊಂಡಿತು. ಆ ಬಳಿಕ ಅದರಗುಂಚಿಗೆ ತೆರಳಿ ಶಂಕರಗೌಡರಿಗೆ ಕಾರ್ಯ ಕಾರಿ ಸಮಿತಿ ನಿರ್ಣಯ ತಿಳಿಸಿ ಉಪವಾಸ ಕೈಬಿಡುವಂತೆ ನಿಜಲಿಂಗಪ್ಪ, ಹಳ್ಳಿಕೇರಿ ಗುದ್ಲೆಪ್ಪ ಮನವಿ ಮಾಡಿದ್ದರು. ಹೋರಾಟದ ಫಲವಾಗಿಯೇ ಹೈಪವರ್‌ ಕಮಿಟಿ ರಚನೆಯಾಯಿತು.

Advertisement

ಆದರೂ, 1955ರಲ್ಲಿ ಕರ್ನಾಟಕದಲ್ಲಿ ರಾಯಚೂರು, ಬೀದರ, ಗುಲಬುರ್ಗಾ, ವಿಜಯಪುರ, ಧಾರವಾಡ, ಕಾರವಾರ ಸೇರಿ ಮತ್ತಿತರರ ಪ್ರದೇಶಗಳನ್ನು ಸೇರಿಸಿಕೊಳ್ಳಲು ವಿರೋಧ ವ್ಯಕ್ತವಾಗಿತ್ತು. ಆಗ ಮತ್ತೆ ಹಂಪಿಯಲ್ಲಿ ಶಂಕರಗೌಡರು “ಅಖಂಡ ಕರ್ನಾಟಕ’ದ ಬೇಡಿಕೆಯನ್ನಿಟ್ಟು ಉಪವಾಸ ಕುಳಿತರು. 10 ದಿನಗಳ ಕಾಲ ಉಪವಾಸ ಕುಳಿತ ಬಳಿಕ ಅಖಂಡ ಕರ್ನಾಟಕ ರಚನೆಗೆ ನಿರ್ಧಾರದ ಪ್ರಕಟಣೆ ಹೊರಬಂತು. 1956ರಲ್ಲಿ ಕರ್ನಾಟಕ ರಾಜ್ಯ ಉದಯವಾಯಿತು.

ಬೆಂಗಳೂರಿನಲ್ಲಿ “ಮೈಸೂರು ಚಲೋ’: ಇದಕ್ಕೂ ಮೊದಲು ಕರ್ನಾಟಕ ಏಕೀಕರಣದ ಪರವಾಗಿದ್ದ ಕೆಂಗಲ್‌ ಹನುಮಂತಯ್ಯ, ಎಚ್‌.ಎಸ್‌.ದೊರೆಸ್ವಾಮಿ, ಬಿ.ಶಿವಮೂರ್ತಿ ಶಾಸ್ತ್ರಿ, ಹಾರನಳ್ಳಿ ರಾಮಸ್ವಾಮಿ ಮತ್ತಿತರರು ಮೈಸೂರು ಮಹಾರಾಜರ ಬಳಿ ಏಕೀಕರಣ ಕುರಿತು ಪ್ರಸ್ತಾಪಿಸಿದರು. ನಂತರ, ಬೆಂಗಳೂರಿನಲ್ಲಿ “ಮೈಸೂರು ಚಲೋ’ ಎಂಬ ಬಹುದೊಡ್ಡ ಹೋರಾಟ ನಡೆಯಿತು.

ಎಚ್‌.ಎಸ್‌.ದೊರೆಸ್ವಾಮಿ ಅವರು ಸರ್ದಾರ್‌ ವಲ್ಲ ಭಾಯಿ ಪಟೇಲ್‌ ಅವರಲ್ಲಿಯೂ ಏಕೀಕರಣ ಕುರಿತು ಮನವಿ ನೀಡಿದಾಗ, ಮೈಸೂರು ರಾಜರನ್ನು ಮೊದಲು ಕರ್ನಾಟಕಕ್ಕೆ ಸೇರಿಕೊಳ್ಳಲು ತಿಳಿಸಿ ಎಂದು ಪ್ರತ್ಯುತ್ತರ ಕೊಟ್ಟಿದ್ದರು. ನಂತರ ಬೆಂಗಳೂರಿನ ಬನಪ್ಪಪಾರ್ಕ್‌ನಲ್ಲಿ ಈ ಕುರಿತು ದೊಡ್ಡ ಮಟ್ಟದ ಸಭೆ ನಡೆಯಿತು ಎಂದು ಕನ್ನಡ ಹೋರಾಟಗಾರ ಮತ್ತು ಸಾಹಿತಿ ರಾ.ನಂ. ಚಂದ್ರಶೇಖರ್‌ ನೆನಪು ಹಂಚಿಕೊಂಡರು.

ಏಕೀಕರಣಕ್ಕೆ ಬೆಂಗಳೂರಲ್ಲಿ ಹೋರಾಟ ನಡೆಸಿದ ಸ್ಥಳಗಳು: ಕನ್ನಡ ಪರ, ಕರ್ನಾಟಕ ಏಕೀಕರಣಕ್ಕಾಗಿ ಕಾರ್ಪೊರೇಷನ್‌ ಬಳಿಯ ಬನಪ್ಪ ಪಾರ್ಕ್‌, ಮಲ್ಲೇಶ್ವರಂನ ಮಂತ್ರಿಮಾಲ್‌ ಬಳಿ ಇರುವ ಭಾಷ್ಯಂ ಪಾರ್ಕ್‌, ತುಳಸಿ ಪಾರ್ಕ್‌, ವಿಧಾನಸೌಧ ಸಮೀಪದ ಶಾಂತವೇರಿ ಗೋಪಾಲಗೌಡ ವೃತ್ತ, ಮೈಸೂರ್‌ ಬ್ಯಾಂಕ್‌ ವೃತ್ತ, ಇಂದಿನ ಫ್ರೀಡಂಪಾರ್ಕ್‌ ಸ್ಥಳಗಳಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಹೋರಾಟ ನಡೆಸಲಾಗಿತ್ತು ಎಂದು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶ್‌ಮೂರ್ತಿ ತಿಳಿಸುತ್ತಾರೆ.

ಏಕೀಕರಣದ ಜೊತೆ ಕನ್ನಡ ಪರ ಹೋರಾಟ: ಕರ್ನಾಟಕ ಏಕೀಕರಣದ ಜೊತೆಗೆ ಕನ್ನಡ ಪರ ಹೋರಾಟಗಳಿಗೂ ಬೆಂಗಳೂರು ಮೂಲ ನೆಲೆಯಾಗಿದೆ. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ, ಕನ್ನಡದಲ್ಲೇ ನಾಮಫ‌ಲಕ ಹಾಕುವುದು, ಗಡಿ ವಿವಾದ ಸೇರಿ ಕನ್ನಡಕ್ಕೆ ಧಕ್ಕೆ ಬಂದ ಸಂದರ್ಭದಲ್ಲಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆದಿವೆ. ಈಗಲೂ ಟೌನ್‌ಹಾಲ್‌, ಫ್ರೀಡಂ ಪಾರ್ಕ್‌ನಲ್ಲಿ ಕನ್ನಡ ಪರ ಹೋರಾಟ ನಡೆಯುತ್ತಿವೆ ಎನ್ನುತ್ತಾರೆ ಕನ್ನಡ ಹೋರಾಟಗಾರ ನೇ.ಭ.ರಾಮಲಿಂಗ ಶೆಟ್ಟಿ.

“ಕರ್ನಾಟಕ’ ಹೆಸರಿಗೆ 50ರ ಸಂಭ್ರಮ: ಮೈಸೂರು ರಾಜ್ಯಕ್ಕೆ “ಕರ್ನಾಟಕ’ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದೆ. ಇದರ ಅಂಗವಾಗಿ ರಾಜ್ಯ ಸರ್ಕಾರ, “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯಾದ್ಯಂತ ಮನೆ ಮನೆಗಳ ಮುಂದೆ ಕೆಂಪು-ಹಳದಿ ಬಣ್ಣದ ರಂಗೋಲಿ ಬಿಡಿಸುವುದು, ಗಾಳಿಪಟ ಹಾರಿಸುವುದು, ಕನ್ನಡ ರಥ ಸಂಚಾರ ಹೀಗೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ.

– ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next