Advertisement

ವಿದೇಶದಿಂದ ಆಗಮಿಸುವವರಿಗೆ ವಿಮಾನ ನಿಲ್ದಾಣದಲ್ಲಿಯೇ ತಪಾಸಣೆ

10:53 PM Apr 30, 2022 | Team Udayavani |

ಬೆಂಗಳೂರು: ಜಪಾನ್‌ ಮತ್ತು ಥಾಯ್ಲಂಡ್‌ನಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ರಾಜ್ಯದ ವಿಮಾನ ನಿಲ್ದಾಣದಲ್ಲಿಯೇ ತಪಾಸಣೆ, ಟೆಲಿ ಮಾನಿಟರಿಂಗ್‌ ಮತ್ತು ಸರ್ವೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Advertisement

ರಾಜ್ಯದಲ್ಲಿ ಪ್ರತೀದಿನ ಸರಾಸರಿ 110 ಪ್ರಕರಣಗಳು, ಶೇ. 0.9ರಿಂದ ಶೇ. 1.1ರಷ್ಟು ಪಾಸಿಟಿವಿಟಿ ಪ್ರಮಾಣ ವರದಿಯಾಗುತ್ತಿದೆ. ಆದರೂ ಕೇಂದ್ರ ಸರಕಾರವು ನಿಗದಿತ ದೇಶಗಳಿಂದ ಬರುವ ಶೇ. 2ರಷ್ಟು ಪ್ರಮಾಣಿಕರನ್ನು ರ್‍ಯಾಂಡಮ್‌ ಮಾದರಿಯಲ್ಲಿ ವಿಮಾನ ನಿಲ್ದಾಣದಲ್ಲಿಯೇ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಿದೆ.

ಮುನ್ನೆಚ್ಚರಿಕೆ ಕ್ರಮ
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಜಪಾನ್‌, ಥಾಯ್ಲಂಡ್‌, ವಿಯೆಟ್ನಾಂ, ನ್ಯೂಜಿಲ್ಯಾಂಡ್‌, ರಷ್ಯಾ ಹಾಗೂ ಚೀನಾ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಪಾನ್‌ ಮತ್ತು ಥಾಯ್ಲಂಡ್‌ ದೇಶಗಳಿಂದ ಬೆಂಗಳೂರಿಗೆ ನೇರವಾಗಿ ವಿಮಾನ ಸಂಪರ್ಕವಿರುವ ಕಾರಣ ವಿಮಾನ ನಿಲ್ದಾಣದಲ್ಲಿಯೇ ತಪಾಸಣೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಕೈಗೊಳ್ಳಬೇಕಾದ
ಕ್ರಮಗಳು:
ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ಎರಡು ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರಿಗೆ ಕಡ್ಡಾಯವಾಗಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡುವುದು. ಸೋಂಕಿನ ಲಕ್ಷಣಗಳಿರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಪ್ರಯೋಗಾಲಯದಲ್ಲಿಯೇ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸುವುದು ಮತ್ತು ಪಾಸಿಟಿವ್‌ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಕಳುಹಿಸಬೇಕು. ಕೊರೊನಾ ದೃಢಪಟ್ಟ ಪ್ರಕರಣಗಳಿಗೆ ಈಗಾಗಲೇ ಚಾಲ್ತಿಯಲ್ಲಿರುವ ಶಿಷ್ಟಾಚಾರದಂತೆ ಚಿಕಿತ್ಸೆ ಮತ್ತು ನಿರ್ವಹಣೆ ಮಾಡುವುದು.

ಜಿಲ್ಲಾಮಟ್ಟದಲ್ಲೇ ಮಾನಿಟರಿಂಗ್‌
ಈ ಎರಡು ದೇಶಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಸಂಬಂಧಪಟ್ಟ ಜಿಲ್ಲೆಗಳು ಸಹಾಯವಾಣಿ ಮೂಲಕ 14 ದಿನಗಳ ಕಾಲ ಟೆಲಿ ಮಾನಿಟರಿಂಗ್‌ ಮಾಡಬೇಕು. ಈ ವೇಳೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಆರ್‌ಟಿಪಿಸಿಆರ್‌ ಟೆಸ್ಟಿಂಗ್‌, ಚಿಕಿತ್ಸೆ ಹಾಗೂ ನಿರ್ವಹಣೆಯನ್ನು ಜಿಲ್ಲಾ ತಂಡಗಳು ಕೈಗೊಳ್ಳಬೇಕು. ಪಾಸಿಟಿವ್‌ ಮಾದರಿಯನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಕಳುಹಿಸುವುದು ಕಡ್ಡಾಯ. ಸಾರ್ವಜನಿಕ ಹಿತದೃಷ್ಟಿಯಿಂದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next