Advertisement
ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯು ರಾಜ್ಯದಲ್ಲಿ ಬರ ಘೋಷಣೆ ವಿಚಾರದಲ್ಲಿ ನಿರ್ಣಾಯಕವಾಗಿದ್ದು, ಕೇಂದ್ರ ಸರಕಾರದ ಮಾನದಂಡಗಳ ಪ್ರಕಾರ ಅರ್ಹವಾಗಿರುವ 62 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಂಬಂಧ ತೀರ್ಮಾನ ತೆಗೆದುಕೊಳ್ಳುವುದನ್ನು ಸಚಿವ ಸಂಪುಟದ ಮಡಿಲಿಗೆ ಹಾಕಲಾಗಿದೆ. ಉಳಿದ 134 ತಾಲೂಕುಗಳ ಬರ ನಿರ್ಧಾರ ವಾರಾಂತ್ಯದಲ್ಲಿ ಆಗಲಿದೆ.
ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸುವ ಕುರಿತ ಸಚಿವ ಸಂಪುಟದ ಉಪ ಸಮಿತಿಯ ನಾಲ್ಕನೇ ಸಭೆ ಸೋಮವಾರ ವಿಧಾನಸೌಧದಲ್ಲಿ ನಡೆಯಿತು. ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಮತ್ತು ಕೈಗೊಂಡ ನಿರ್ಧಾರಗಳ ಕುರಿತು ಸಂಪುಟ ಉಪಸಮಿತಿಯ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು. ಬೆಳೆ ಸಮೀಕ್ಷೆಯಂತೆ 62 ತಾಲೂಕುಗಳು ಬರ ಎಂದು ಘೋಷಿಸಲು ಅರ್ಹವಾಗಿದ್ದು, ಉಳಿದಂತೆ 134 ತಾಲೂಕುಗಳಲ್ಲಿ ಬೆಳೆ ಮರು ಸಮೀಕ್ಷೆ ಮಾಡಲು ಸಚಿವ ಸಂಪುಟ ಉಪಸಮಿತಿಯಲ್ಲಿ ತೀರ್ಮಾನಿಸಲಾಗಿದೆ. 2023ರ ಆ. 19ರಲ್ಲಿದ್ದಂತೆ 113 ತಾಲೂಕುಗಳ ಪೈಕಿ ಜಂಟಿ ಸಮೀಕ್ಷೆ ಮಾರ್ಗಸೂಚಿ ಅನ್ವಯ 62 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದೆ. ಆದರೆ ಜಂಟಿ ಸಮೀಕ್ಷೆಯ ಅನಂತರ ಬೆಳೆ ಪರಿಸ್ಥಿತಿ ಮತ್ತೆ ಕುಸಿದಿದೆ ಎಂದು ವರದಿಗಳು ಬಂದಿವೆ. ಹಾಗಾಗಿ ಉಳಿದ 51 ತಾಲೂಕುಗಳಲ್ಲಿ ಮತ್ತೂಮ್ಮೆ ಜಂಟಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
Related Articles
Advertisement
ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿರಾಜ್ಯದಲ್ಲಿ ಜೂನ್ ತಿಂಗಳಿನಲ್ಲಿ ಶೇ. 56ರಷ್ಟು ಮಳೆ ಕೊರತೆಯಾಗಿತ್ತು. ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾದರೂ, ಆಗಸ್ಟ್ ತಿಂಗಳಿನಲ್ಲಿ ಶೇ. 73ರಷ್ಟು ಮಳೆ ಕೊರತೆಯಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಜೂ. 1ರಿಂದ ಸೆ. 4ರ ವರೆಗೆ ವಾಡಿಕೆಯಂತೆ 711 ಮಿ.ಮೀ ಮಳೆಯಾಗಬೇಕಿದ್ದು, 526 ಮಿ.ಮೀ. ಮಳೆಯಾಗಿದೆ. ಶೇ. 26ರಷ್ಟು ಮಳೆ ಕೊರತೆಯಾಗಿದ್ದು, ಇದರ ಪರಿಣಾಮ ಬರ ಪರಿಸ್ಥಿತಿ ತಲೆದೋರಿದೆ. ಆ. 22ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕೇಂದ್ರ ಸರಕಾರದ ಪರಿಷ್ಕೃತ ಬರ ಕೈಪಿಡಿ- 2020ರಲ್ಲಿ ಸೂಚಿಸಲಾಗಿರುವಂತೆ ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ (ಶೇ. 60ಕ್ಕಿಂತ ಕಡಿಮೆ ಮಳೆ), ಸತತ 3 ವಾರಗಳ ಶುಷ್ಕ ವಾತಾವರಣ ಮತ್ತು ಇತರ ಮಾನದಂಡಗಳ ಅನ್ವಯ ಬರ ಪರಿಸ್ಥಿತಿ ಕಂಡುಬಂದಿರುವ 113 ತಾಲೂಕುಗಳನ್ನು ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ ಜಂಟಿ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು ಎಂದು ಸಚಿವರು ತಿಳಿಸಿದರು. ಸರಕಾರ ಭ್ರಮೆಯಲ್ಲಿ ಇಲ್ಲ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಲವು ಕಡೆ ಮಳೆ ಆಗುತ್ತಿದೆ. ಆದರೂ ದಿನೇ ದಿನೆ ಬೆಳೆ ಕ್ಷೀಣವಾಗುತ್ತಿದೆ. ಈ ಬಾರಿ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆ ಕೊರತೆ ಎದುರಾಗಿದೆ. ಉತ್ತರ ಒಳನಾಡು, ಮಲೆನಾಡಿನಲ್ಲೂ ಕೊರತೆ ಇದೆ. 13 ಸಾವಿರ ಹೆಕ್ಟೇರ್‌ನಲ್ಲಿ ಪ್ರಾಥಮಿಕ ಬೆಳೆ ಸಮೀಕ್ಷೆ ನಡೆಸಿದ್ದೇವೆ. ಮುಂದೆ ಮಳೆ ಆದ ಕೂಡಲೇ ರೈತರ ಪರಿಸ್ಥಿತಿ ಸುಧಾರಿಸುವುದಿಲ್ಲ. ಬೆಳೆದ ಬೆಳೆ ಕೈಗೆ ಸಿಗುತ್ತದೆ ಎಂಬ ಭ್ರಮೆಯಲ್ಲಿ ಸರಕಾರ ಇಲ್ಲ, ಬೆಳೆ ಕೈತಪ್ಪಿ ಹೋಯಿತು ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ನೆರವಿಗಾಗಿ ಮನವಿ
ಸಂಪುಟ ಉಪ ಸಮಿತಿಯ ತೀರ್ಮಾನಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಬರ ಘೋಷಣೆ ಅನಂತರ ಕೇಂದ್ರ ಸರಕಾರಕ್ಕೆ ನೆರವಿಗಾಗಿ ಮನವಿ ಸಲ್ಲಿಸಲಾಗುವುದು. ಘೋಷಣೆಯಾದ ದಿನದಿಂದ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯ ಟಾಸ್ಕ್ಫೋರ್ಸ್ ರಚಿಸಲು ತೀರ್ಮಾನಿಸಲಾಗಿದೆ. ಕುಡಿಯುವ ನೀರು ಕೊರತೆ ಕಂಡು ಬಂದ ವಸತಿ ಪ್ರದೇಶಗಳಲ್ಲಿ ಟ್ಯಾಂಕರ್ ಮುಖಾಂತರ ಅಥವಾ ಬಾಡಿಗೆ ಬೋರ್‌ವೆಲ್ ಮುಖಾಂತರ ತುರ್ತು ಕುಡಿಯುವ ನೀರು ಒದಗಿಸುವ ಖರ್ಚು ವೆಚ್ಚವನ್ನು ಎಸ್‌ಡಿಆರ್‌ಎಫ್ ಮೂಲಕ ಭರಿಸಲು ಅನುಮತಿಸಲಾಗಿದೆ ಎಂದು ಸಚಿವರು ಹೇಳಿದರು. ಮೇವಿನ ಕೊರತೆ ಇಲ್ಲ
ರಾಜ್ಯದಲ್ಲಿ ಸದ್ಯ 43 ವಾರಗಳವರೆಗೆ ಅಗತ್ಯ ಮೇವು ಲಭ್ಯ ಇದೆ ಎಂದು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ತಿಳಿಸಿ¨ªಾರೆ. ಮುಂದಿನ ದಿನಗಳಲ್ಲಿ ಮೇವಿನ ಕೊರತೆ ನಿಭಾಯಿಸಲು ಕ್ರಮ ಕೈಗೊಳ್ಳಲಾಗಿದೆ. ನೀರಿನ ವ್ಯವಸ್ಥೆ ಇರುವ ರೈತರಿಗೆ ಮೇವು ಬಿತ್ತನೆ ಬೀಜದ ಕಿಟ್ ವಿತರಿಸಲು ಪಶು ಸಂಗೋಪನೆ ಇಲಾಖೆಗೆ 20 ಕೋಟಿ ರೂ. ಮೊತ್ತ ನೀಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದರು. ಎಸ್‌ಡಿಆರ್‌ಎಫ್ ಡಿ 600 ಕೋ.ರೂ. ಲಭ್ಯ
ಸದ್ಯ ಬರ ನಿರ್ವಹಣೆಗಾಗಿ ಎಸ್‌ಡಿಆರ್‌ಎಫ್ ಡಿ 600 ಕೋಟಿ ರೂ. ಲಭ್ಯವಿದೆ. ಇದಲ್ಲದೆ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 529 ಕೋಟಿ ರೂ. ಇದೆ. ಜಿ.ಪಂ. ಸಿಇಒಗಳ ಖಾತೆಗಳಿಗೂ ತಲಾ 1 ಕೋಟಿ ರೂ. ಆರ್‌ಡಿಪಿಆರ್ ಇಲಾಖೆ ಬಿಡುಗಡೆ ಮಾಡಿದೆ. ಮುಂಜಾಗ್ರತೆ ಕ್ರಮವಾಗಿ 7 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಸಚಿವರು ವಿವರಿಸಿದರು. ಮಳೆ ಬಂದರೂ ಪ್ರಯೋಜನವಿಲ್ಲ
ರಾಜ್ಯದ ಸುಮಾರು 196 ತಾಲೂಕುಗಳಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಮುಂದೆ ಮಳೆಯಾದರೂ ಪ್ರಯೋಜನ ಆಗುವುದಿಲ್ಲ. ಬರ ಘೋಷಣೆಯಿಂದ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಕುಡಿಯುವ ನೀರಿನ ಸಮಸ್ಯೆ ಇಲ್ಲ
ರಾಜ್ಯದಲ್ಲಿ ಅಲ್ಲಲ್ಲಿ ಮಳೆ ಆಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದಿಲ್ಲ. 16 ಗ್ರಾಮಗಳಿಗೆ 19 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. 157 ಖಾಸಗಿ ಬೋರ್‌ವೆಲ್‌ಗಳ ಮೂಲಕ 145 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. 35 ಗ್ರಾಮಗಳಲ್ಲಿ ಮಾತ್ರ ಪರಿಸ್ಥಿತಿ ಗಂಭೀರ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇದೇ ವೇಳೆ ಮಾಹಿತಿ ನೀಡಿದರು. ಕೇಂದ್ರಕ್ಕೆ ಭೇಟಿ
ಬರ ಘೋಷಣೆಗೆ ಸಂಬಂಧಿಸಿದ ಮಾನದಂಡಗಳನ್ನು ಸಡಿಲಿಸುವಂತೆ ಮುಖ್ಯಮಂತ್ರಿಯವರು ಕೇಂದ್ರ ಸರಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದಾರೆ. ಈ ವಿಚಾರವನ್ನು ಪ್ರಧಾನಮಂತ್ರಿಯವರ ಗಮನಕ್ಕೆ ತರಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದಾರೆ. ರಾಜ್ಯ ಸರಕಾರದ ವಾದ ವೈಜ್ಞಾನಿಕವಾಗಿದ್ದು, ಅದನ್ನು ಕೇಂದ್ರ ಸರಕಾರದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಸಾಧ್ಯವಾದರೆ ಸಚಿವ ಸಂಪುಟದ ಉಪ ಸಮಿತಿಯೂ ಕೇಂದ್ರ ಸರಕಾರವನ್ನು ಭೇಟಿ ಮಾಡಿ ಮನವಿ ಮಾಡಲಿದೆ. ಬರ ಘೋಷಣೆಯಾದ ಬಳಿಕ ನಿಯಮಗಳಂತೆ ಪರಿಹಾರ ಘೋಷಣೆ ಮತ್ತು ವಿತರಣೆ ನಡೆಯಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ಬರ ಘೋಷಣೆ ಆಗುವ ತಾಲೂಕುಗಳಲ್ಲಿ ಮಾತ್ರ ಹಣದ ಬದಲು 10 ಕೆ.ಜಿ. ಅಕ್ಕಿಯನ್ನೇ ಕೊಡಲು ಸರಕಾರ ಚಿಂತನೆ ನಡೆಸಿದೆ.
– ಕೆ.ಎಚ್. ಮುನಿಯಪ್ಪ, ಆಹಾರ ಸಚಿವ