Advertisement

ಕರ್ನಾಟಕ ಈಗ ಸೂಪರ್‌ ಪವರ್‌

11:10 AM Mar 10, 2018 | |

ಮಾಯಾಂಕ್‌ ಅಗರ್ವಾಲ್‌, ಆರ್‌.ಸಮರ್ಥ್, ಕರುಣ್‌ ನಾಯರ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಪವನ್‌ ದೇಶಪಾಂಡೆ, ಸ್ಟುವರ್ಟ್‌ ಬಿನ್ನಿ, ಪ್ರಸಿದ್ಧ್ ಕೃಷ್ಣ… ಕರ್ನಾಟಕದ ಈ ಕ್ರಿಕೆಟ್‌ ಪ್ರತಿಭೆಗಳು ಪ್ರಸಕ್ತ ಋತುವಿನಲ್ಲಿ ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ. ಇದರ ಫ‌ಲವಾಗಿ ಕರ್ನಾಟಕ ತಂಡ ಇಂದು ಸೂಪರ್‌ ಪವರ್‌ ಆಗಿ ನಿರ್ಮಾಣವಾಗಿದೆ.

Advertisement

2017 ರಿಂದ ರಾಜ್ಯ ತಂಡ ಹಂತ ಹಂತವಾಗಿ ಪ್ರಬಲವಾಗುತ್ತಿದೆ. ತಂಡದಲ್ಲಿ ಎಲ್ಲಾ ಆಟಗಾರರು ಮಿಂಚುತ್ತಿಲ್ಲ. ಆದರೆ, ಒಂದು ತಂಡವಾಗಿ ಹೋರಾಟ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರಾಜ್ಯ ತಂಡ ರಾಷ್ಟ್ರದ ಇತರೆ ತಂಡಗಳಿಗೆ ಪ್ರಬಲ ಸವಾಲು ನೀಡುತ್ತಿದೆ. ಅನೇಕ ಆಟಗಾರರು ರಾಷ್ಟ್ರೀಯ ತಂಡಗಳ ಆಯ್ಕೆ ಮಂಡಳಿಯ ಗಮನ ಸೆಳೆಯುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ ತಂಡ ನೀಡಿದ ಪ್ರದರ್ಶನದ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ.

ಸ್ವಲ್ಪದರಲ್ಲಿ ಕೈ ತಪ್ಪಿದ ರಣಜಿ ಟ್ರೋಫಿ
ಒಟ್ಟು 8 ಬಾರಿ ರಣಜಿ ಟ್ರೋಫಿ ಗೆದ್ದಿರುವ ಕರ್ನಾಟಕ, ಮುಂಬೈ ನಂತರ ಅತೀ ಹೆಚ್ಚು ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ವೇಗಿ ವಿನಯ್‌ ಕುಮಾರ್‌ ನೇತೃತ್ವದಲ್ಲಿ 2017-18ನೇ ಸಾಲಿನ ರಣಜಿ ಟ್ರೋಫಿಯಲ್ಲಿ ರಾಜ್ಯ ತಂಡ ಕಣಕ್ಕೆ ಇಳಿದಿತ್ತು. ಗುಂಪು ಹಂತದಲ್ಲಿ 6 ಪಂದ್ಯಗಳಲ್ಲಿ 4ರಲ್ಲಿ ಜಯ, 2ರಲ್ಲಿ ಡ್ರಾ  ಸಾಧಿಸಿ  ಒಟ್ಟು 32 ಅಂಕದೊಂದಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು.
ಕ್ವಾರ್ಟರ್‌ನಲ್ಲಿ ಮುಂಬೈ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶಿಸಿತ್ತು. ಆದರೆ, ಈ ಹಂತದಲ್ಲಿ ದುರದೃಷ್ಟವಶಾತ್‌ ವಿದರ್ಭ ವಿರುದ್ಧ ಕೇವಲ 5 ರನ್‌ ಅಂತರದಲ್ಲಿ ಸೋಲುಂಡಿತು.

ಮಾಯಾಂಕ್‌ ಅಗರ್ವಾಲ್‌ 13 ಪಂದ್ಯಗಳಿಂದ 1160 ರನ್‌ ಬಾರಿಸಿದ್ದಾರೆ. ಇದು ಈ ರಣಜಿ ಟ್ರೋಫಿಯಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಮಧ್ಯಮ ಕ್ರಮಾಂಕದ ಆಟಗಾರ ಆರ್‌.ಸಮರ್ಥ್ 13 ಪಂದ್ಯಗಳಿಂದ 673 ರನ್‌ ದಾಖಲಿಸಿ ಗರಿಷ್ಠ ರನ್‌ ದಾಖಲಿಸಿದವರಲ್ಲಿ 7ನೇಯವರಾಗಿದ್ದಾರೆ. ಕರುಣ್‌ ನಾಯರ್‌, ಸ್ಟುವರ್ಟ್‌ ಬಿನ್ನಿ, ಕೆಲವೇ ಪಂದ್ಯವನ್ನು ಆಡಿರುವ ಮನೀಷ್‌ ಪಾಂಡೆ ಕೂಡ ಅಮೋಘ ಆಟ ಪ್ರದರ್ಶಿಸಿದ್ದಾರೆ. ಬೌಲಿಂಗ್‌ನಲ್ಲಿ ಕೆ.ಗೌತಮ್‌ 8 ಪಂದ್ಯಗಳಿಂದ 34 ವಿಕೆಟ್‌ ಕಬಳಿಸಿದ್ದಾರೆ. ಗರಿಷ್ಠ ವಿಕೆಟ್‌ ಪಡೆದವರಲ್ಲಿ ಅವರಿಗೆ 5ನೇ ಸ್ಥಾನ. ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಶ್ರೇಯಸ್‌ ಗೋಪಾಲ್‌ ಎದುರಾಳಿಗಳ ಬೆವರಿಳಿಸಿದ್ದಾರೆ.

ರಾಜ್ಯಕ್ಕೆ “ವಿಜಯ’
ದೇಶಿಯ ಪ್ರತಿಷ್ಠಿತ ಟೂರ್ನಿಗಳಲ್ಲಿ ವಿಜಯ್‌ ಹಜಾರೆ ಟ್ರೋಫಿಯೂ ಒಂದು. ಏಕದಿನ ಮಾದರಿಯಲ್ಲಿ ನಡೆದ ಈ ಟೂರ್ನಿಯಲ್ಲಿ ಕರ್ನಾಟಕ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಗುಂಪು ಹಂತದಲ್ಲಿ 6 ಪಂದ್ಯಗಳಲ್ಲಿ 4 ರಲ್ಲಿ ಜಯ, 1 ಸೋಲು, 1 ಪಂದ್ಯ ರದ್ದಾಗಿದ್ದರಿಂದ ಒಟ್ಟು 18 ಅಂಕ ಸಂಪಾದಿಸಿ “ಎ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿತ್ತು. ಅಲ್ಲಿ ಹೈದರಾಬಾದ್‌, ಸೆಮೀಸ್‌ನಲ್ಲಿ ಮಹಾರಾಷ್ಟ್ರವನ್ನು ಸೋಲಿಸಿ ಫೈನಲ್‌ ಪ್ರವೇಶಿಸಿತ್ತು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸೌರಾಷ್ಟ್ರ ವಿರುದ್ಧ 41 ರನ್‌ ಜಯ ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು. ಇದು ರಾಜ್ಯಕ್ಕೆ ಸಿಕ್ಕ ಮೂರನೇ ವಿಜಯ್‌ ಹಜಾರೆ ಟ್ರೋಫಿಯಾಗಿದೆ.

Advertisement

ಈ ಕೂಟದಲ್ಲಿಯೂ ಭರ್ಜರಿ ಆಟ ಪ್ರದರ್ಶಿಸಿದವರು ಕನ್ನಡಿಗರು. ಅದರಲ್ಲಿಯೂ ಮಾಯಾಂಕ್‌ ಅಗರ್ವಾಲ್‌ 8 ಪಂದ್ಯಗಳಿಂದ 723 ರನ್‌ ಬಾರಿಸಿ, ಕೂಟದಲ್ಲಿಯೇ ಗರಿಷ್ಠ ರನ್‌ ಬಾರಿಸಿದ ಖ್ಯಾತಿ ಪಡೆದಿದ್ದಾರೆ. ಉಳಿದಂತೆ ಆರ್‌.ಸಮರ್ಥ್, ಪವನ್‌ ದೇಶಪಾಂಡೆ, ಕರುಣ್‌ ನಾಯರ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದರೆ, ಪ್ರಸಿದ್ಧ್ ಕೃಷ್ಣ, ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌ ಬಿಗುದಾಳಿ ನಡೆಸಿ ರಾಜ್ಯಕ್ಕೆ ಪ್ರಶಸ್ತಿ ತರುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.

ಟಿ20ಯಲ್ಲಿ ಎಡವಿದರು
ಕರ್ನಾಟಕ ತಂಡ ಎಡವಿದ್ದು, ಸೈಯದ್‌ ಮುಷ¤ಕ್‌ ಅಲಿ ಟಿ20 ಟೂರ್ನಿಯಲ್ಲಿ. ಗುಂಪು ಹಂತದಲ್ಲಿ 4 ಪಂದ್ಯಗಳಲ್ಲಿ 2 ಜಯ, 2 ಸೋಲಿನಿಂದ ತಂಡವು ಕೇವಲ 8 ಅಂಕ ಸಂಪಾದಿಸಿತ್ತು. ಹೀಗಾಗಿ ಮುಂದಿನ ಹಂತಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಆದರೆ, ಕರುಣ್‌ ನಾಯರ್‌ ಎರಡು ಶತಕ, 1 ಅರ್ಧ ಶತಕ ಸೇರಿದಂತೆ ಒಟ್ಟು 379 ರನ್‌ ಬಾರಿಸಿ, ಗರಿಷ್ಠ ರನ್‌ ಬಾರಿಸಿದವರಲ್ಲಿ 3ನೇಯವ ಅನಿಸಿಕೊಂಡರು. ಬೌಲಿಂಗ್‌ನಲ್ಲಿ ಎಸ್‌.ಅರವಿಂದ್‌ 15 ವಿಕೆಟ್‌ ಪಡೆದು, ಮಿಂಚಿದರು.
ಗಮನ ಸೆಳೆಯುತ್ತಿದ್ದಾರೆ

ಬ್ಯಾಟ್ಸ್‌ಮನ್‌ಗಳಾದ ಮಾಯಾಂಕ್‌ ಅಗರ್ವಾಲ್‌, ಆರ್‌.ಸಮರ್ಥ್, ಕರುಣ್‌ ನಾಯರ್‌, ಪವನ್‌ ದೇಶಪಾಂಡೆ ರಾಷ್ಟ್ರೀಯ ತಂಡದಲ್ಲಿ ಆಡಲು ಆಯ್ಕೆ ಮಂಡಳಿಯ ಗಮನ ಸೆಳೆಯುತ್ತಿದ್ದಾರೆ. ಅದೇ ರೀತಿ ಬೌಲಿಂಗ್‌ನಲ್ಲಿ ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಪ್ರಸಿದ್ಧ್ ಕೃಷ್ಣ ಗಮನ ಸೆಳೆಯುತ್ತಿದ್ದಾರೆ.

ಆಯ್ಕೆ ಮಂಡಳಿ ಗಮನ ಸೆಳೆಯುತ್ತಿರುವ ಕನ್ನಡಿಗರು

ಗುಂಡಪ್ಪ ವಿಶ್ವನಾಥ್‌, ರೋಜರ್‌ ಬಿನ್ನಿ, ಕಿರ್ಮಾನಿ, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಜಾವಗಲ್‌ ಶ್ರೀನಾಥ್‌, ವೆಂಕಟೇಶ್‌ ಪ್ರಸಾದ್‌… ಅವರಂಥ ಖ್ಯಾತ ಆಟಗಾರರನ್ನು ಕರ್ನಾಟಕವು ರಾಷ್ಟ್ರೀಯ ತಂಡಕ್ಕೆ ಕೊಡುಗೆ ನೀಡಿದೆ. ಇದೀಗ ಯುವ ಪ್ರತಿಭೆಗಳಾದ ಮಾಯಾಂಕ್‌ ಅಗರ್ವಾಲ್‌, ಆರ್‌.ಸಮರ್ಥ್, ಕೆ.ಗೌತಮ್‌, ಪವನ್‌ ದೇಶಪಾಂಡೆ ದೇಶಿ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ತಂಡದ ಕದ ಬಡಿಯುತ್ತಿದ್ದಾರೆ.

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next