Advertisement
ಭಾರತ್ ಜೋಡೋ ಯಾತ್ರೆಯ ಗುಂಗಿನಲ್ಲಿದ್ದ ಕಾಂಗ್ರೆಸ್, ಜನತಾಮಿತ್ರ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್ ಪಕ್ಷಗಳಿಗೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ದಿಢೀರ್ ಈ ರೀತಿಯ ತೀರ್ಮಾನ ಕೈಗೊಳ್ಳಬಹುದು ಎಂಬ ಅಂದಾಜು ಇರಲಿಲ್ಲ. ಪ್ರಮುಖವಾಗಿ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಮೀಸಲಾತಿ ಪ್ರಮಾಣದ ವಿಚಾರ ಮುಂದಿಟ್ಟೇ ಬಿಜೆಪಿಯನ್ನು ಹಣಿಯುವ ಕಾರ್ಯತಂತ್ರ ರೂಪಿಸಿತ್ತು.
Related Articles
Advertisement
ಭಾರತ್ ಜೋಡೋ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಎರಡು ಪ್ರತ್ಯೇಕ ತಂಡಗಳು ರಾಜ್ಯ ಪ್ರವಾಸ ಮಾಡಲಿದ್ದು, ಆ ಸಂದರ್ಭದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದ ಸಮಾವೇಶ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಅದೇ ರೀತಿ ಪಂಚರತ್ನ ಸಮಾವೇಶದ ನಡುವೆಯೇ ಹಿಂದುಳಿದ, ದಲಿತ, ಅಲ್ಪಸಂಖ್ಯಾಕ, ಮಹಿಳಾ ಸಮಾವೇಶ ನಡೆಸಲು ತೀರ್ಮಾನಿಸಿದೆ.
ಬಿಜೆಪಿಗೂ ಭಯ :
ಈ ಮಧ್ಯೆ, ಎಸ್‌ಸಿ-ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ತೀರ್ಮಾನದ ಬೆನ್ನಲ್ಲೇ ಪಂಚಮಸಾಲಿ ಸಮುದಾಯ, ಕುರುಬ ಸಮುದಾಯ, ಒಕ್ಕಲಿಗ ಸಮುದಾಯವು ಪ್ರವರ್ಗ ಬದಲಾವಣೆ, ಮೀಸಲಾತಿ ಹೆಚ್ಚಳದ ಬೇಡಿಕೆ ಇಟ್ಟಿರುವುದರಿಂದ ಮೀಸಲಾತಿ ಕಿಚ್ಚು ಬೇರೆ ರೀತಿಯ ಪರಿಣಾಮ ಬೀರಬಹುದಾ ಎಂಬ ಭಯ ಬಿಜೆಪಿಯಲ್ಲೂ ಇದೆ.
ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವುದರಿಂದ ಹಾಗೂ ಪ್ರವರ್ಗ ಬದಲಾವಣೆಯಿಂದ ಸಹಜವಾಗಿ ಈಗಿರುವ ಮೀಸಲಾತಿ ವ್ಯವಸ್ಥೆಯಲ್ಲಿ ಮಾರ್ಪಾಡು ಆಗಲಿದೆ. ಆಗ ಬೇರೆ ಸಮುದಾಯಗಳು ರಾಜಕೀಯವಾಗಿ ತಿರುಗಿ ಬೀಳಬಹುದು ಎಂಬ ಬಗ್ಗೆಯೂ ಚರ್ಚೆಯಾಗುತ್ತಿದ್ದು ಸೂಕ್ಷ್ಮವಾಗಿ ಹೆಜ್ಜೆ ಇಡುವಂತೆ ಬಿಜೆಪಿ ವರಿಷ್ಠರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ವರಿಷ್ಠರ ನಿರ್ದೇಶನ:
ಬಿಜೆಪಿ ಸರಕಾರ ಎಸ್‌ಸಿ-ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಿಸಲು ತೀರ್ಮಾನ ಕೈಗೊಂಡಿರುವುದು, ಒಳ ಮೀಸಲಾತಿ ವಿಚಾರದಲ್ಲಿ ಸಂಪುಟ ಉಪ ಸಮಿತಿ ರಚಿಸಿರುವುದು ಪ್ರಮುಖವಾಗಿ ಪ್ರತಿ ಸಂದರ್ಭದಲ್ಲೂ ಪ್ರಸ್ತಾಪಿಸಬೇಕು. ರಾಜಕೀಯವಾಗಿಯೂ ಬಿಜೆಪಿಗೆ ಇದು ಶಕ್ತಿ ತುಂಬಲಿದ್ದು ಸರಕಾರದ ಕ್ರಮದ ಬಗ್ಗೆ ಹೆಚ್ಚು ಮಾತನಾಡಬೇಕು ಎಂದು ಸಂಪುಟ ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳಿಗೆ ಬಿಜೆಪಿ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.
– ಎಸ್.ಲಕ್ಷ್ಮಿನಾರಾಯಣ