ಮೈಸೂರು: ಮಣಿಪುರ ಹಿಂಸಾಚಾರ ಮತ್ತು ಜನಾಂಗೀಯ ದಳ್ಳುರಿ ಶಮ ನಕ್ಕೆ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸ ಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೈಸೂರಿನಲ್ಲಿ ಪ್ರತಿಭಟಿಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೋಮವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದ ರೈತ ಹೋರಾಟಗಾರರು, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೇಷದ ಹಿಂಸಾಚಾರ ಹಾಗೂ ಕುಕಿ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಬೆತ್ತಲೆಗೊಳಿಸಿ ಅತ್ಯಾಚಾರ ನಡೆಸಿರುವ ಘಟನೆಗಳು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು ಎಂದು ದೂರಿದರು.
ಕಳೆದ 83 ದಿನಗಳಂದಲೂ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಘಟಕಗಳನ್ನು ಅವಲೋಕಿಸಿದರೆ ನಮ್ಮ ದೇಶದಲ್ಲಿ ನಾಗರಿಕ ಆಡಳಿತ ಇದೆಯೋ, ಇಲ್ಲವೋ ಎಂಬ ಆತಂಕ ಮತ್ತು ಅನುಮಾನಗಳು ಮೂಡಿದೆ. ಮಣಿಪುರದ ಜನಾಂಗೀಯ ದಳ್ಳುರಿಯನ್ನು ಶಮನ ಮಾಡುವ ಬದಲು ನಮ್ಮ ಒಕ್ಕೂಟ ಸರ್ಕಾರ ಮತ್ತು ಅಲ್ಲಿನ ರಾಜ್ಯ ಸರ್ಕಾರ ಪೋಷಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳ ಉಲ್ಲಂಘನೆ: ಈ ಹಿಂಸಾಚಾರಗಳ ಬಗ್ಗೆ ನಮ್ಮ ದೇಶದ ಸುಪ್ರಿಂಕೋರ್ಟ್ ಮಧ್ಯೆ ಪ್ರವೇಶಿಸಿದ ನಂತರ ನಮ್ಮ ಪ್ರಧಾನಿಗಳು ಘಟನೆ ಬಗ್ಗೆ ಮಾತನಾಡಿದ್ದಾರೆ. ಮಣಿಪುರ ದಲ್ಲಿ ಸಂಪೂರ್ಣ ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಹಿಂಸಾಚಾರವನ್ನು ತಡೆಗಟ್ಟದೆ ಮತ್ತಷ್ಟು ಪೋಷಿಸು ತ್ತಿದೆ ಎಂದು ಆರೋಪಿಸಿದರು.
ಈ ಸಂಬಂಧ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅಲ್ಲಿನ ಸರ್ಕಾರವನ್ನು ವಜಾ ಮಾಡಿ, ತಮ್ಮ ಆಡಳಿತ ಜಾರಿಗೊಳಿಸಿ ಶಾಂತಿ, ಸುವ್ಯವಸ್ಥೆ ಮರುಸ್ಥಾ ಪಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಬೊಕ್ಕಳ್ಳಿ ನಂಜುಂಡಸ್ವಾಮಿ, ನಾಗನಹಳ್ಳಿ ವಿಜಯೇಂದ್ರ, ನೇತ್ರಾವತಿ, ಹೆಜ್ಜಿಗೆ ಪ್ರಕಾಶ್, ಎನ್. ಪುನೀತ್ ಸೇರಿದಂತೆ ಹಲವರು ಇದ್ದರು.