Advertisement

ಫಿಕ್ಸಿಂಗ್‌: ಶಿಂಧೆಯೇ ಕಿಂಗ್‌ಪಿನ್‌!

11:29 PM Dec 04, 2019 | Team Udayavani |

ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ ಮೂಲಕ ಶುರುವಾದ ಫಿಕ್ಸಿಂಗ್‌ ಹಗರಣಕ್ಕೆ ಸಂಬಂಧಿಸಿ ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯ ಸುಧೀಂದ್ರ ಶಿಂಧೆ ಬಂಧನದ ಬೆನ್ನಲ್ಲೇ, ಹಣ ಪಡೆದು ಕೆಲ ಆಟಗಾರರನ್ನು ಕೆಪಿಎಲ್‌ ಟೂರ್ನಿಗೆ ಆಯ್ಕೆ ಮಾಡಲಾಗಿತ್ತು ಎಂಬ ಆಘಾತಕಾರಿ ಅಂಶ ಬಯಲಾಗಿದೆ.

Advertisement

ಕೆಎಸ್‌ಸಿಎ ಅಧಿಕಾರ ಬಳಸಿಕೊಂಡೇ ಶಿಂಧೆ, ಹಣ ಕೊಟ್ಟ ಕೆಲವು ಆಟಗಾರರನ್ನು ಕೆಪಿಎಲ್‌ಗೆ ಆಯ್ಕೆ ಮಾಡಿದ್ದರು. ಕ್ರಿಕೆಟ್‌ ಕ್ಲಬ್‌ಗಳ ಜತೆ ನಿಕಟ ಸಂಪರ್ಕ ಹೊಂದಿದ್ದ ಶಿಂಧೆ ತನ್ನ ಪ್ರಭಾವ, ಹಣಕಾಸು ವ್ಯವಹಾರದ ಅಡಿಯಲ್ಲಿ ಕೆಲವರನ್ನು ಕೂಟಕ್ಕೆ ಆಯ್ಕೆಯಾಗುವಂತೆ ನೋಡಿಕೊಂಡಿದ್ದರು, ಹಾಗೆಯೇ ಕೆಲವು ಆಟಗಾರರನ್ನು ತಿರಸ್ಕರಿಸಿದ್ದರು ಎಂದು ಹೇಳಲಾಗಿದೆ.

ಶಿಂಧೆ ಶಿಫಾರಸು ಮಾಡಿದ ಮೇರೆಗೆ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕೆಲವು ಆಟಗಾರರು ಫಿಕ್ಸಿಂಗ್‌, ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಶಂಕೆಯಿದೆ ಎಂದು ತನಿಖಾ ಮೂಲಗಳು ತಿಳಿಸಿವೆ. ಸದ್ಯದ ತನಿಖೆಯಲ್ಲಿ ಸುಧೀಂದ್ರ ಶಿಂಧೆಯೇ ಕಿಂಗ್‌ಪಿನ್‌ ಎಂಬುದು ಗೊತ್ತಾಗಿದೆ.

ನಾಲ್ಕು ದಿನ ಕಸ್ಟಡಿಗೆ: ಸುಧೀಂದ್ರ ಶಿಂಧೆ ಅವರನ್ನು ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ ನ್ಯಾಯಾಲಯ ಡಿ. 7ರ ವರೆಗೆ ಸಿಸಿಬಿ ವಶಕ್ಕೆ ನೀಡಿದೆ.

ನಟಿಯರನ್ನು ಬಳಸಿ ಫಿಕ್ಸಿಂಗ್‌?
ಕೆಪಿಎಲ್‌ ಫಿಕ್ಸಿಂಗ್‌ ಪ್ರಕರಣದ ಉರುಳು ಚಿತ್ರರಂಗದ ಕೆಲವು ನಟ, ನಟಿಯರಿಗೂ ಸುತ್ತಿಕೊಳ್ಳುವ ಸಾಧ್ಯತೆಯಿದೆ. ಫಿಕ್ಸಿಂಗ್‌ನಲ್ಲಿ ಕೆಲವು ನಟಿಯರ ಪಾತ್ರ ಕೂಡ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆರೋಪಿಗಳಾದ ಬೆಳಗಾವಿ ಪ್ಯಾಂಥರ್ಸ್‌ ಮಾಲಕ ಅಶ್ಫಾಕ್‌ ಅಲಿ, ಕೋಚ್‌ ಸುಧೀಂದ್ರ ಶಿಂಧೆ ಆಟಗಾರರಿಗೆ ಆಯೋಜಿಸಿದ್ದ ಔತಣಕೂಟ ವೇಳೆ ಕೆಲವು ನಟಿಯರಿಗೆ ಆಹ್ವಾನ ನೀಡುತ್ತಿದ್ದರೆನ್ನಲಾಗಿದೆ. ಈ ನಟಿಯರನ್ನು ಬಳಸಿಕೊಂಡು ಕೂಡ ಫಿಕ್ಸಿಂಗ್‌ ನಡೆಸಿರುವ ಶಂಕೆಯಿದೆ. ಈ ನಡುವೆ, ಹಗರಣದಲ್ಲಿ ಇನ್ನಷ್ಟು ಮಂದಿ ಭಾಗಿಗಳಾಗಿದ್ದಾರೆ. ಅವರಾಗಿ ಪೊಲೀಸರಿಗೆ ಶರಣಾದರೆ ಒಳ್ಳೆಯದು ಎಂದು ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next