Advertisement

ಸರ್ವರ ಏಳ್ಗೆಗೆ ಪುಷ್ಟಿ ಕೊಟ್ಟ ಬಜೆಟ್‌; ಸರ್ವೋದಯದ ನಾಡು ಸಕಲ ಕ್ಷೇಮದ ಬೀಡು

01:04 AM Mar 05, 2022 | Team Udayavani |

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಸರ್ವೋದಯ ಮಂತ್ರ ಪಠಿಸಿದ್ದು, ಸಕಲರ ಕ್ಷೇಮಕ್ಕೆ ವಾಗ್ಧಾನ ನೀಡಿದ್ದಾರೆ. ವಿಶೇಷವಾಗಿ ಸಮಾಜದ ದುರ್ಬಲ ಹಾಗೂ ಹಿಂದುಳಿದ ವರ್ಗಗಳು ಮತ್ತು ಶ್ರಮಿಕರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಏಳಿಗೆಗೆ ಒತ್ತು ಕೊಟ್ಟಿದ್ದು, ಆರೋಗ್ಯ, ಶಿಕ್ಷಣ, ಉದ್ಯೋಗ ಕ್ಷೇತ್ರಗಳಿಗೆ ಆದ್ಯತೆ ನೀಡಿ ವಸ್ತುನಿಷ್ಠ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.

Advertisement

ಸರ್ವೋಯದ ಮತ್ತು ಕ್ಷೇಮಾಭಿವೃದ್ಧಿ ವಲಯದಡಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿ, ಅಪೌಷ್ಟಿಕತೆ ನಿವಾರಣೆ, ಗುಣಮಟ್ಟದ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಕೌಶಲ್ಯಾಭಿವೃದ್ಧಿ, ಗುಣಮಟ್ಟದ ಆರೋಗ್ಯ ಸೇವೆಗಳು, ಮಕ್ಕಳು ಮತ್ತು ಮಹಿಳಾ ಉದ್ದೇಶಿತ ಯೋಜನೆಗಳಿಗೆ ಪ್ರತ್ಯೇಕ ಬಜೆಟ್‌ ಅನುದಾನ, ಎಸ್‌ಸಿಪಿ-ಟಿಎಸ್‌ಪಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಅಸ್ಪೃಶ್ಯತೆ ನಿವಾರಣೆಗೆ ವಿಶೇಷ ಯೋಜನೆ, ಅಲೆಮಾರಿ ಜನಾಂಗಗಳಿಗೆ ವಸತಿ ಯೋಜನೆ, ವಿವಿಧ ಹಿಂದುಳಿದ ಸಮುದಾಯಗಳಿಗೆ ಅನುದಾನ, ಎಸ್ಸಿ, ಎಸ್ಟಿ ಸಮುದಾಯಗಳ ಮಠಗಳ ಜೀರ್ಣೋದ್ಧಾರ ಇದು ಮುಖ್ಯಮಂತ್ರಿಯವರ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಯ ಮುನ್ನೋಟ.

6 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ: ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 2022-23ನೇ ಸಾಲಿನಲ್ಲಿ ಒಟ್ಟಾರೆಯಾಗಿ 68,479 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಕಳೆದ ಸಾಲಿನ ಬಜೆಟ್‌ಗಿಂತ ಪ್ರಸ್ತುತ ಸಾಲಿನಲ್ಲಿ ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ ಮತ್ತು ವಿವಿಧ ಕಲ್ಯಾಣ ಇಲಾಖೆಗಳಿಗೆ 6,329 ಕೋಟಿ ರೂ.ಗಳನ್ನು ಮುಖ್ಯಮಂತ್ರಿಯವರು ಹೆಚ್ಚುವರಿಯಾಗಿ ಕೊಟ್ಟಿದ್ದಾರೆ.

ಪೌಷ್ಟಿಕ ಕರ್ನಾಟಕ ಯೋಜನೆ: “ಪೌಷ್ಟಿಕ ಕರ್ನಾಟಕ’ ಎಂಬ ಹೊಸ ಯೋಜನೆಯಡಿ ಅಪೌಷ್ಟಿಕತೆ ನಿವಾರಿಸಲು ಪ್ರಾಯೋಗಿಕ ವಾಗಿ ರಾಜ್ಯದ 14 ಜಿಲ್ಲೆಗಳಲ್ಲಿ ಅಕ್ಕಿಯೊಂದಿಗೆ ಪೋಷಕಾಂಶಗಳಾದ ಕಬ್ಬಿಣ, ಫೋಲಿಕ್‌ ಆಮ್ಲ, ವಿಟಮಿನ್‌ ಬಿ-12 ಸೇರ್ಪಡೆಗೊಳಿಸಿದ ಸಾರವರ್ಧಿತ ಅಕ್ಕಿಯನ್ನು 93 ಕೋಟಿ ರೂ. ವೆಚ್ಚದಲ್ಲಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಅಲ್ಲದೇ ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ಮಾದರಿಯಲ್ಲಿ ರಾಜ್ಯಮಟ್ಟದ ಪೌಷ್ಟಿಕತಾ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯಲ್ಲಿ ಅಪೌಷ್ಟಿಕತೆ ಸೂಚಕಗಳು ಕಡಿಮೆಯಾಗುವುದರೊಂದಿಗೆ ಅಪೌಷ್ಟಿಕತೆ ನಿವಾರಣೆಯಲ್ಲಿ ಕರ್ನಾಟಕ ಸ್ಥಿರವಾದ ಪ್ರಗತಿ ಸಾಧಿಸಿದೆ. ಸರ್ಕಾರದ ಮಾತೃಪೂರ್ಣ, ಕ್ಷೀರಭಾಗ್ಯ ಮುಂತಾದ ಯೋಜನೆಗಳ ಅನುಷ್ಠಾನ ಉತ್ತಮ ಫ‌ಲಿತಾಂಶ ನೀಡಿದೆ. 6 ತಿಂಗಳಿಂದ 3 ವರ್ಷದ ತೀವ್ರ ಅಪೌಷ್ಟಿಕ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ಚುಚ್ಚುಮದ್ದು, ಆರೋಗ್ಯ ತಪಾಸಣೆ ಜೊತೆಗೆ ಕ್ಷೀರ ಭಾಗ್ಯದಡಿ ಕೆನೆಭರಿತ ಹಾಲಿನ ಪುಡಿಯನ್ನು 52 ಲಕ್ಷ ಫ‌ಲಾನುಭವಿಗಳಿಗೆ ವಿತರಿಸಲಾಗುತ್ತಿದೆ.

3ರಿಂದ 6 ವರ್ಷದ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು 300 ದಿನಗಳ ಬಿಸಿಯೂಟ ನೀಡುವ ಜೊತೆಗೆ ಅಂಗನವಾಡಿ ಮಕ್ಕಳಿಗೆ ಹಾಲು ಮತ್ತು ಪೌಷ್ಟಿಕ ಆಹಾರ ನೀಡಲಾಗುತ್ತಿದೆ. 6 ತಿಂಗಳಿಂದ 6 ವರ್ಷದ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಸೇರಿ 51.24 ಲಕ್ಷ ಫ‌ಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ.

Advertisement

ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳು
ಮೊಟ್ಟ ಮೊದಲ ಬಾರಿಗೆ ಸರಕಾರವು ವಿವಿಧ ಅಭಿವೃದ್ಧಿ ಸೂಚ್ಯಂಕಗಳಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಸಾಧನೆ ಮಾಡುತ್ತಿ ರುವ ತಾಲೂಕುಗಳನ್ನು “ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳು’ ಎಂದು ಗುರುತಿಸಿ ಈ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿದೆ. ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಹೆಚ್ಚಿನ ಆದ್ಯತೆಯನ್ನು ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ನೀಡಲಾಗಿದೆ. ಅದರಂತೆ, 93 ತಾಲೂಕುಗಳಲ್ಲಿ ಶಿಕ್ಷಣದ ಗುಣಮಟ್ಟ ವೃದ್ಧಿಸಲು, 100 ತಾಲೂಕುಗಳಲ್ಲಿ ಆರೋಗ್ಯ ಸೇವೆ ಬಲುಪಡಿಸಲು ಮತ್ತು 102 ತಾಲೂಕುಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸಲು 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

– ಹೆಚ್ಚು ಕಾರ್ಯದೊತ್ತಡವಿರುವ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 25 ಹಾಸಿಗೆಯ ಮಾದರಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ 2 ವರ್ಷ ಗಳಲ್ಲಿ ಸಾವಿರ ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣ.
ಎಸ್‌ಸಿಪಿ-ಟಿಎಸ್‌ಪಿ ಅನುದಾನದಿಂದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 100 ಡಾ| ಬಿ.ಆರ್‌. ಅಂಬೇಡ್ಕರ್‌ ವಿದ್ಯಾರ್ಥಿ ನಿಲಯಗಳು, 10 ಕ್ರೈಸ್‌ ವಸತಿ ಶಾಲೆಗಳ ಕಟ್ಟಡಗಳನ್ನು 750 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 165 ಕೋಟಿ ರೂ. ವೆಚ್ಚದಲ್ಲಿ 50 ಕನಕದಾಸ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ.

-ಸೃಷ್ಟಿ ಮತ್ತು ಕ್ಷೀರಭಾಗ್ಯ ಯೋಜನೆಯಡಿ ತೀವ್ರ ಅಪೌಷ್ಟಿಕ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಸಾಧಾರಣ ಅಪೌಷ್ಟಿಕ ಮಕ್ಕಳಿಗೂ ಪ್ರಸಕ್ತ ಸಾಲಿನಿಂದ ವಿಸ್ತರಣೆ. ಹೆಚ್ಚುವರಿ 37 ಪೌಷ್ಟಿಕ ಪುನರ್ವಸತಿ ಕೇಂದ್ರಗಳ ಸ್ಥಾಪನೆ.
ಸ್ವಂತ ಕಟ್ಟಡವಿಲ್ಲದ 1000 ಅಂಗನವಾಡಿಗಳಿಗೆ ನರೇಗಾ ಯೋಜನೆಯಡಿ 50 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ.

-ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ. ಆಯ್ದ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ಆದ್ಯತೆ.

ಮುಖ್ಯಾಂಶಗಳು

1. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮಾರ್ಗಸೂಚಿಯಂತೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯಕ್ರಮ ರಚನೆ.

2.ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳಾಗಿ ಮೂಲ ಸೌಕರ್ಯ ವಿರುವ ಶಾಲೆಗಳ ಉನ್ನತೀಕರಣ.

3.ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ. ಆಯ್ದ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ಆದ್ಯತೆ.

4.ಸರಕಾರಿ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪೀಠೊಪಕರಣ ಒದಗಿಸಲು 100 ಕೋಟಿ ರೂ.

5.”ನೋಡಿ ಕಲಿ ಮಾಡಿ ತಿಳಿ’ ಪರಿಕಲ್ಪನೆ ಯಡಿ ರಾಜ್ಯದ 169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಲ್ಯಾಬ್ -ಇನ್‌-ಎ-ಕಿಟ್‌ ವಿತರಣೆ.

6.ರಾಜ್ಯದ ಏಳು ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಉನ್ನತೀಕರಣ; ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ.

7.ಕೆಪಿಎಸ್‌ಸಿ, ಯುಪಿಎಸ್‌ಸಿ, ಎಸ್‌ಎಸ್‌ಪಿ, ಬ್ಯಾಂಕಿಂಗ್‌, ರೈಲ್ವೆ , ಸಿಡಿಎಸ್‌, ನೀಟ್‌ ಜೆಇಇ ಮುಂತಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್‌ ಮೂಲಕ ಉಚಿತ ಕೋಚಿಂಗ್‌ ನೀಡಲು “ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ’ ಯೋಜನೆ ಜಾರಿ.

Advertisement

Udayavani is now on Telegram. Click here to join our channel and stay updated with the latest news.

Next