Advertisement

14,000 ಅಂಗನವಾಡಿಗಳು ಕತ್ತಲಲ್ಲಿ, 13,000 ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ: ಸರ್ಕಾರದ ಮಾಹಿತಿ

06:40 PM Jun 26, 2021 | Team Udayavani |

ಬೆಂಗಳೂರು: ರಾಜ್ಯದ 14 ಸಾವಿರ ಅಂಗನವಾಡಿಗಳು ಕತ್ತಲಲ್ಲಿ ಇವೆ. 13 ಸಾವಿರ ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ. 18 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಫ್ಯಾನ್‌ ಇಲ್ಲ. ಇದನ್ನು ಸರಿಪಡಿಸಲು ಪ್ರತ್ಯೇಕ ಹಣಕಾಸಿನ ಲಭ್ಯತೆ ಇಲ್ಲ ಎಂದು ಸ್ವತಃ ರಾಜ್ಯ ಸರ್ಕಾರ ಹೈಕೋರ್ಟ್‌ ಮುಂದೆ ಒಪ್ಪಿಕೊಂಡಿದೆ.

Advertisement

ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಸಂಬಂಧಿಸಿದಂತೆ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸಲ್ಲಿಸಲಾದ ಲಿಖೀತ ಹೇಳಿಕೆಯಲ್ಲಿ ಸರ್ಕಾರ ಈ ಮಾಹಿತಿ ನೀಡಿದೆ.

ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿದ್ದು, ಆ ಪೈಕಿ 50,963 ಅಂಗನವಾಡಿಗಳಲ್ಲಿ ವಿದ್ಯುತ್‌ ಸಂಪರ್ಕ ಇದ್ದು, 14,948 ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್‌ ಸಂಪರ್ಕ ಇಲ್ಲ. ವಿದ್ಯುತ್‌ ಸಂಪರ್ಕ ಕಲ್ಪಿಸಲು ಅಂದಾಜು 45.33 ಕೋಟಿ ರೂ. ಬೇಕು. ಅದೇ ರೀತಿ ಒಟ್ಟು ಅಂಗನವಾಡಿ ಕೇಂದ್ರಗಳ ಪೈಕಿ 52,221 ಅಂಗನವಾಡಿಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆ ಇದ್ದು, 13,690 ಅಂಗನವಾಡಿಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಶೌಚಾಲಯ ಇಲ್ಲದ ಒಟ್ಟು ಅಂಗನವಾಡಿಗಳಲ್ಲಿ 3,524 ಅಂಗನವಾಡಿ ಕೇಂದ್ರಗಳು ಸರ್ಕಾರಿ ಕಟ್ಟಡಗಳಲ್ಲಿದ್ದು, ಈ ಕೇಂದ್ರಗಳಲ್ಲಿ ಶೌಚಾಲಯ ಕಟ್ಟಲು 21.19 ಕೋಟಿ ರೂ. ಬೇಕು. 18,974 ಅಂಗನವಾಡಿಗಳಿಗೆ ಫ್ಯಾನ್‌ ಒದಗಿಸಲು 11.27 ಕೋಟಿ ರೂ. ಬೇಕು ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ :ಸಂಪುಟ ವಿಸ್ತರಣೆಯಿಂದ ರಾಜ್ಯಕ್ಕೆ 2 ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ : ಈಶ್ವರಪ್ಪ

ರಾಜ್ಯದ ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ 125 ಕೋಟಿ ರೂ.ಗಳನ್ನು 2021-22ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಇದರಲ್ಲಿ 6,700 ಕೇಂದ್ರಗಳಿಗೆ ವಿದ್ಯುತ್‌ ಸಂಪರ್ಕ ಹಾಗೂ 8,300 ಕಟ್ಟಡಗಳಿಗೆ ಫ್ಯಾನ್‌ ಸೌಲಭ್ಯ ಮತ್ತು 1,700 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಕಟ್ಟಲು ಹಾಗೂ 771 ಹೊಸ ಅಂಗನವಾಡಿ ಕೇಂದ್ರಗಳನ್ನು ಕಟ್ಟಲು ಪ್ರಸ್ತಾಪಿಸಲಾಗಿದೆ. ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ಮೇಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಉಳಿದಂತೆ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್‌ ಸಂಪರ್ಕ, ಫ್ಯಾನ್‌, ಶೌಚಾಲಯ ಒದಗಿಸಲು ಪ್ರತ್ಯೇಕ ಅನುದಾನ ಇಲ್ಲ ಎಂದು ಸರ್ಕಾರ ಹೇಳಿದೆ.

Advertisement

ಸರ್ಕಾರದ ಲಿಖೀತ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ವಿದ್ಯುತ್‌ ಸಂಪರ್ಕ, ಶೌಚಾಲಯ ಕಟ್ಟಲು ಹಣ ಇಲ್ಲ ಎಂದು ಸ್ವತಃ ಸರ್ಕಾರ ಒಪ್ಪಿಕೊಂಡಿರುವುದು ಅಶ್ಚರ್ಯದ ಸಂಗತಿ. ವಿದ್ಯುತ್‌ ಸಂಪರ್ಕ, ಶೌಚಾಲಯ ಇಲ್ಲದೇ ಅಂಗನವಾಡಿ ಕೇಂದ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಸೂಜಿಗದ ಸಂಗತಿ ಎಂದು ಹೇಳಿತು.

ಹಾಗಾಗಿ, ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ಮತ್ತು ವಿದ್ಯುತ್‌ ಸಂಪರ್ಕ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವ ಸಂಬಂಧ ನ್ಯಾಯಾಲಯಗಳು ಕಾಲ-ಕಾಲಕ್ಕೆ ಹೊರಡಿಸಿರುವ ಆದೇಶಗಳನ್ನು ಕ್ರೂಢೀಕರಿಸಿ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ಅವುಗಳನ್ನು ಪರಿಶೀಲಿಸಿದ ಬಳಿಕ ಅಗತ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಲಾಗುವುದು ಎಂದು ಹೇಳಿ ವಿಚಾರಣೆಯನ್ನು ಜು.2ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next