ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಿದರೆ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ಆದರೆ ಸೀಟು ಹಂಚಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಇನ್ನೊಂದು ವಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಸಮನ್ವಯ ಸಮಿತಿ ಸಭೆ ನಡೆದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ವಾರದಲ್ಲಿ ಎಚ್.ಡಿ.ರೇವಣ್ಣ, ಎಚ್.ವಿಶ್ವನಾಥ್ ಅವರು ಸೀಟು ಹಂಚಿಕೆ ಕುರಿತಂತೆ ಮಾತುಕತೆ ನಡೆಸಿದ್ದರು. ಅವರು 12 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರು. ಇಂದು ಕೂಡಾ ಸೀಟು ಹಂಚಿಕೆ ಬಗ್ಗೆ ಸಮಾಲೋಚನೆ ನಡೆಯಿತು ಎಂದು ಹೇಳಿದರು.
ಇನ್ನೊಂದು ವಾರದಲ್ಲಿ ಸ್ಥಾನ ಹಂಚಿಕೆ ಬಗ್ಗೆ ಮತ್ತೊಂದು ಬಾರಿ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಂಡು, ಕಾಂಗ್ರೆಸ್ ಹೈಕಮಾಂಡ್ ಗೆ ವರದಿ ರವಾನಿಸುತ್ತೇವೆ. ರಾಹುಲ್ ಗಾಂಧಿ ಅವರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಏತನ್ಮಧ್ಯೆ ಲೋಕಸಭಾ ಚುನಾವಣೆ ಸಂಬಂಧ ಸೀಟು ಹಂಚಿಕೆಗೆ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಮ್ಮತ ಮೂಡಿಲ್ಲ ಎಂದು ಮಾಧ್ಯಮದ ವರದಿ ತಿಳಿಸಿದೆ. ಜೆಡಿಎಸ್ 12 ಸ್ಥಾನಗಳಿಗೆ ಪಟ್ಟು ಹಿಡಿದಿದ್ದರೆ, ಕಾಂಗ್ರೆಸ್ 8 ಸ್ಥಾನ ಬಿಟ್ಟು ಕೊಡುವುದಾಗಿ ಹೇಳುತ್ತಿರುವುದರಿಂದ ಸ್ಥಾನ ಹೊಂದಾಣಿಕೆ ಬಿಕ್ಕಟ್ಟು ಮುಮದುವರಿದಿದೆ ಎಂದು ವರದಿ ಹೇಳಿದೆ.