Advertisement

9,10 ತರಗತಿ ಆರಂಭ ಮೊದಲ ದಿನ ಶಾಂತಿಯುತ; ಪ್ರೌಢಶಾಲೆಗಳಿಗೂ ಹರಡಿದ ಹಿಜಾಬ್‌ ಬಿಸಿ

12:29 AM Feb 15, 2022 | Team Udayavani |

ಬೆಂಗಳೂರು/ಹುಬ್ಬಳ್ಳಿ: ಹಿಜಾಬ್‌ ಗದ್ದಲ ಈಗ ಪ್ರೌಢಶಾಲೆಗಳಿಗೂ ತಲುಪಿದೆ. ಸರಣಿ ರಜೆಯ ಬಳಿಕ ಸೋಮವಾರ ರಾಜ್ಯಾದ್ಯಂತ ಪ್ರೌಢಶಾಲೆಗಳು ಆರಂಭವಾಗಿದ್ದು, ಹೈಕೋರ್ಟ್‌ನ ಮಧ್ಯಾಂತರ ಆದೇಶದ ಹೊರತಾಗಿಯೂ ಕೆಲವು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿಯೇ ಬಂದಿದ್ದರು. ಕೆಲವು ಕಡೆಗಳಲ್ಲಿ ಶಿಕ್ಷಕರು  ಮನವೊಲಿಸಿ ಹಿಜಾಬ್‌ ತೆಗೆಸಿದರು. ಹಿಜಾಬ್‌ ತೆಗೆಯಲು ಒಪ್ಪದ ಕೆಲವರು ಮನೆಯ  ಮರಳಿದರು.

Advertisement

ಹೈಕೋರ್ಟ್‌ ಮಧ್ಯಾಂತರ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ಮಕ್ಕಳು ಹಿಜಾಬ್‌ ಸಹಿತ ಯಾವುದೇ ಧಾರ್ಮಿಕ ಸಂಕೇತಗಳನ್ನು ಸೂಚಿಸುವ ವಸ್ತ್ರ ಧರಿಸಿ ಬರಬಾರದು ಎಂದಿತ್ತು. ಅಲ್ಲದೆ, ಸೂಕ್ಷ್ಮ ಪ್ರದೇಶದಲ್ಲಿರುವ ಶಾಲೆಗಳಿಗೆ ಪೊಲೀಸ್‌ ಭದ್ರತೆ  ನೀಡಲಾಗಿತ್ತು. ಕೆಲವು ಕಡೆಗಳಲ್ಲಿ ಮಕ್ಕಳು ಹಿಜಾಬ್‌ ಧರಿಸಿ ಬಂದಿದ್ದರಿಂದ  ಗೊಂದಲ ಉಂಟಾಯಿತೇ ಹೊರತು, ಯಾವುದೇ ಗದ್ದಲಗಳು ಉಂಟಾಗಲಿಲ್ಲ. ಹೀಗಾಗಿ, ರಾಜ್ಯಾದ್ಯಂತ ಬಹುತೇಕ ಕಡೆ ಶಾಂತಿಯುತವಾಗಿಯೇ ಶಾಲೆಗಳು ನಡೆದವು.

ಆವರಣದೊಳಗೆ ಬಂದು ತರಗತಿಗಳನ್ನು ಪ್ರವೇಶ ಪಡೆಯು ತ್ತಿದ್ದಂತೆ ಸಮವಸ್ತ್ರದಲ್ಲಿ ಮಾತ್ರ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಕೆಲವು ಶಾಲೆಗಳಲ್ಲಿ ಹಿಜಾಬ್‌ನಲ್ಲಿಯೇ ಹಾಜರಾಗು ತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದರೂ ಅವಕಾಶ ನೀಡಲಾಗಿಲ್ಲ. ಶಾಲಾ ಆಡಳಿತ ಮಂಡಳಿಯು ನಿಗದಿ ಮಾಡಿರುವ ಸಮವಸ್ತ್ರದಲ್ಲಿ ಮಾತ್ರ ಪ್ರವೇಶ ಎಂದು  ಮನವರಿಕೆ ಮಾಡಿಕೊಡಲಾಯಿತು.

ಪರೀಕ್ಷೆ ಬರೆಯದೆ ವಾಪಸ್‌
ಶಿವಮೊಗ್ಗದ ಬಿ.ಎಚ್‌. ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ 13 ವಿದ್ಯಾರ್ಥಿನಿಯರು ಎಸೆಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಹಿಜಾಬ್‌ ಧರಿಸಿಯೇ ಬರೆ ಯುವುದಾಗಿ ಹೇಳಿದರು.  ಹೈಕೋರ್ಟ್‌ ಆದೇಶದ ಹಿನ್ನೆಲೆ ಯಲ್ಲಿ ಹಿಜಾಬ್‌ ತೆಗೆಯುವಂತೆ ಶಿಕ್ಷಕರು ಸೂಚಿಸಿದ್ದಾರೆ. ಅದ ಕ್ಕೊಪ್ಪದೆ ಅವರು ಪರೀಕ್ಷೆ ಬಹಿಷ್ಕರಿಸಿ  ಮರಳಿದರು.

ಹಿಜಾಬ್‌ನಲ್ಲೇ ಶಿಕ್ಷಕಿ ಹಾಜರ್‌
ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಬಗ್ಗೆ ಪ್ರೌಢ ಶಾಲೆಯಲ್ಲಿ ಸುಮಾರು ಹತ್ತು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದಿದ್ದರೂ ಶಿಕ್ಷಕರ ಮನವೊಲಿಕೆಗೆ ಮಣಿದು ಹಿಜಾಬ್‌ ಕಳಚಿಟ್ಟರು. ಆದರೆ ಇದೇ ಶಾಲೆಯ ಪ್ರಾಥಮಿಕ ವಿಭಾಗದ ಶಿಕ್ಷಕಿಯೊಬ್ಬರು ಹಿಜಾಬ್‌ ಧರಿಸಿಯೇ ಮಕ್ಕಳಿಗೆ ಪಾಠ ಮಾಡಿದರು. ಚಿಂಚೋಳಿ ಪಟ್ಟಣದ ಉರ್ದು ಪ್ರೌಢ ಶಾಲೆಯಲ್ಲೂ ಓರ್ವ ಶಿಕ್ಷಕಿ ಮತ್ತು ಕೆಲವು ವಿದ್ಯಾರ್ಥಿಗಳು ಹಿಜಾಬ್‌ ಧರಿಸಿದ್ದರು.

Advertisement

ಬೀದರ್‌ನಲ್ಲಿ
ಬೀದರ್‌ನ ಬಿಎಸ್‌ಇ ನರ್ಸಿಂಗ್‌ ಮೈಕ್ರೋಬಯೋಲಜಿ ಪರೀಕ್ಷೆಗೆ 12 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿಯೇ ಹಾಜರಾಗಿದ್ದರು. ದಾವಣಗೆರೆ ನಗರದ ಸರಕಾರಿ ಸಂಯುಕ್ತ ಕಾಲೇಜಿನ ಪ್ರೌಢಶಾಲಾ ವಿಭಾಗದ ಕೆಲವು ವಿದ್ಯಾರ್ಥಿನಿಯರು  ಹಿಜಾಬ್‌ ಧರಿಸಿ ಬಂದಿದ್ದರು. ಅವರ  ಮನವೊಲಿಸಿ ಹಿಜಾಜ್‌ ಕಳಚಿ ಪರೀಕ್ಷೆ ಹಾಗೂ ತರಗತಿಗಳಿಗೆ ಹಾಜರಾಗುವಂತೆ ಮಾಡುವಲ್ಲಿ ಶಿಕ್ಷಕರು ಯಶಸ್ವಿಯಾದರು. ಕೊಪ್ಪಳದ ಮೌಲಾನಾ ಆಜಾದ್‌ ಶಾಲೆಯಲ್ಲಿ ಕೆಲವರು ಹಿಜಾಬ್‌ ಧರಿಸಿ  ಕುಳಿತಿದ್ದರು. ಬಳಿಕ ಶಿಕ್ಷಕರ ಸೂಚನೆಯಂತೆ ಹಿಜಾಜ್‌ ಕಳಚಿಟ್ಟರು.

ಮಂಡ್ಯದಲ್ಲಿ ಮಾತಿನ ಚಕಮಕಿ
ಮಂಡ್ಯದ ಶಾಲೆಯೊಂದರ ಬಳಿ ಹಿಜಾಬ್‌ ಧರಿಸಿ ಬಂದಿದ್ದ ಮಕ್ಕಳನ್ನು ಗೇಟ್‌ ಬಳಿಯೇ ತಡೆಯಲಾಯಿತು. ಹಿಜಾಬ್‌ ತೆಗೆದವರನ್ನು ಮಾತ್ರ ಒಳಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ  ಪೋಷಕರು ಮತ್ತು ಶಾಲೆಗಳ ಆಡಳಿತ ಮಂಡಳಿ ನಡುವೆ ಮಾತಿನ ಚಕಮಕಿ ನಡೆಯಿತು.  ಮೈಸೂರಿನ  ಕೆಲವು ಶಾಲೆಗಳಲ್ಲೂ ಹಿಜಾಬ್‌ ತೆಗೆಯಲು ಒಪ್ಪದ ಮಕ್ಕಳು  ಮನೆಗೆ ಮರಳಿದ್ದಾರೆ.

ಶಿಕ್ಷಕರು ಹಿಜಾಬ್‌ ತೆಗೆಯಲು ಹೇಳಿದರೂ ಕೆಲವು ಮಕ್ಕಳು ನಿರಾಕರಿಸಿದರು. ಬಳಿಕ ಪೋಷಕರನ್ನು ಕರೆಸಿ ಅವರ ಜತೆಯಲ್ಲಿ  ಮಕ್ಕಳನ್ನು ಕಳಿಸ ಲಾಗಿದೆ. ಮೊದಲು ಆ ಮಕ್ಕಳು ಹಿಜಾಬ್‌ ಹಾಕುತ್ತಿರಲಿಲ್ಲ. ಸೋಮ ವಾರ ಮಾತ್ರ ಹಾಕಿಕೊಂಡು ಬಂದಿದ್ದಾರೆ.
-ಕೆ.ಸಿ. ನಾರಾಯಣ ಗೌಡ, ಶಿವಮೊಗ್ಗ ಉಸ್ತುವಾರಿ ಸಚಿವ 

13 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೇಳಿದರು. ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ  ಅವಕಾಶ ನೀಡಲಿಲ್ಲ.  ಮನಸ್ಸು ಬದಲಾಯಿಸಿ ಬಂದರೆ ಮಂಗಳವಾರ ಪರೀಕ್ಷೆ ಬರೆಯಲು ಅವಕಾಶ ನೀಡುತ್ತೇವೆ.
-ರಮೇಶ್‌,ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next