Advertisement

ಕರ್ನಾಟಕ ಸಂಘ ಮುಂಬಯಿ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ 

04:03 PM Sep 09, 2018 | |

ಮುಂಬಯಿ: ಯಕ್ಷಗಾನ, ದೊಡ್ಡಾಟ, ಸಣ್ಣಾಟ, ಮೂಡಲಪಾಯ, ನಾಟಕ ಇತ್ಯಾದಿ ರಂಗಕಲೆಗಳಿಂದ  ಕರ್ಣಾಟಕದಲ್ಲಿ ಥಿಯೇಟರ್‌ಗಳಿಗೆ ತನ್ನದೇ ಆದ ಪರಂಪರೆಯಿದೆ. ಕೈಲಾಸಂ, ಶ್ರೀರಂಗ, ಕುವೆಂಪು, ಕಾರಂತ, ಕಾರ್ನಾಡ್‌, ಕಂಬಾರ, ಲಂಕೇಶ್‌ ಇವರೆಲ್ಲಾ ಕನ್ನಡ ರಂಗಭೂಮಿಯನ್ನು ಬೆಳೆಸಿದವರು. ತಮ್ಮದೇ ಆದ ರಂಗ ಇತಿಹಾಸವನ್ನು ಸೃಷ್ಟಿಸಿದವರು. ಆಧುನಿಕ ರಂಗಭೂಮಿಯಲ್ಲಿ ಏಕಾಂಕ ನಾಟಕಗಳಿಗೆ ವಿಶೇಷ ಮಹತ್ವವಿದ್ದು, ಕನ್ನಡ ರಂಗಭೂಮಿಯು ಸಂಪದ್ಭರಿತವಾಗಿದೆ ಎಂದು ಎಚ್‌.ಡಿ.ಎಫ್‌.ಸಿ. ಬ್ಯಾಂಕಿನ ಕಾರ್ಯಾಧ್ಯಕ್ಷೆ  ಶ್ಯಾಮಲಾ ಗೋಪಿನಾಥ್‌ ನುಡಿದರು.

Advertisement

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಆಯೋಜಿಸಿದ 21ನೇ ಅಖೀಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ -2018  ಸಮಾರಂಭವು ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ನಡೆದಿದ್ದು, ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು 85 ವರ್ಷಗಳ ದೀರ್ಘ‌ ಇತಿಹಾಸ ಇರುವ ಕರ್ನಾಟಕ ಸಂಘ ಮುಂಬಯಿ ತನ್ನ ಸಮರ್ಥ ನಾಯಕತ್ವದಿಂದಾಗಿ ಇಂದಿನ ತನಕವೂ ಕನ್ನಡದ ಕೆಲಸಗಳನ್ನು ಮುಂದುವರಿಸುತ್ತಾ ಬಂದಿದೆ. ಭಾಷಾ ಸೌಹಾರ್ದತೆಗೂ ಕೆಲಸಮಾಡುತ್ತಾ ಬಂದಿದೆ. ಸಂಘದ ಚಟುವಟಿಕೆಗಳು ನನಗೆ ಖುಷಿ ನೀಡಿದೆ ಬಿಡುವಿನ ಸಮಯದಲ್ಲಿ ಇವರೆಲ್ಲ ಕನ್ನಡದ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿರುವ ನನಗೆ ಇಂದು ಕುವೆಂಪು ಸ್ಮಾರಕ 21ನೆಯ ಏಕಾಂಕ ನಾಟಕ ಸ್ಪರ್ಧೆಯನ್ನು ಉದ್ಘಾಟಿಸುವ ಅವಕಾಶ ದೊರೆತಿರುವುದಕ್ಕೆ ನಾನು ಸಂತೋಷಪಟ್ಟಿದ್ದೇನೆ. ಕರ್ನಾಟಕ ಸಂಘದ ನೂತನ ಕಟ್ಟಡ  ಆದಷ್ಟು  ಶೀಘ್ರ ನಿರ್ಮಾಣಗೊಳ್ಳಲಿ ಎಂದರು.

ಎಚ್ಚರಿಕೆ ಕೊಡುವ ಕೆಲಸ
ಮುಖ್ಯ ಅತಿಥಿಯಾಗಿ ಆಗಮಿಸಿದ ಮೈಸೂರು ಅಸೋಸಿಯೇಶನ್‌ನ ಕೆ. ಮಂಜುನಾಥಯ್ಯ ಮಾತನಾಡಿ, ಕುವೆಂಪು ಸ್ಮಾರಕ ನಾಟಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಎಲ್ಲ ತಂಡಗಳಿಗೆ ಪ್ರತಿಷ್ಠೆ ತಂದುಕೊಟ್ಟಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಸತತವಾಗಿ ಈ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿರುವ ಕರ್ನಾಟಕ  ಸಂಘವನ್ನು ಎಲ್ಲ ಕನ್ನಡಿಗರ ಪರವಾಗಿ ಅಭಿನಂದಿಸಬೇಕು.  ಭಾಷೆಯ ಹೆಚ್ಚುಗಾರಿಕೆಯು ಆ ಭಾಷೆಯಲ್ಲಿ ಸಂಸ್ಕೃತಿಯ ಪ್ರತಿಬಿಂಬ ಕಂಡಾಗ. ಅದರಲ್ಲಿ ನಾಟಕ ಪ್ರಮುಖವಾಗಿ ಗುರುತಿಸುವಂತದ್ದು.  ಸಂಗೀತ, ಪಠ್ಯ, ಕಥಾನಕ,  ಪಾತ್ರ. ಎಲ್ಲವೂ ಇರುವ ನಾಟಕ  ಜೀವನವನ್ನೇ ಪ್ರತಿಬಿಂಬಿಸುತ್ತದೆ.  ಕಲೆಯ ಮೂಲಕ ಜನರಿಗೆ ನಿಜವಾದ ಅನುಭವ ತಂದುಕೊಡುವುದು ನಾಟಕ. ಜನಾಂಗಕ್ಕೆ ಎಚ್ಚರಿಕೆ ಕೊಡುವ ಕೆಲಸ ಅದು ಮಾಡುತ್ತದೆ ಎಂದರು.

ಪ್ರೋತ್ಸಾಹವೇ ಇದಕ್ಕೆ ಕಾರಣ 
ಅಧ್ಯಕ್ಷತೆ  ವಹಿಸಿದ ಸಂಘದ ಉಪಾಧ್ಯಕ್ಷ  ಡಾ| ಈಶ್ವರ ಅಲೆವೂರು ಮಾತನಾಡಿ,  ಎಪ್ಪತ್ತು – ಎಂಬತ್ತರ ದಶಕದಲ್ಲಿ ಕಲಾ ಕೇಂದ್ರ ಮುಂಬಯಿಯವರಿಗೆ ನಾಟಕ ಸ್ಪರ್ಧೆಗಳನ್ನು ಆಯೋಜಿಸಿದ್ದರೆ ಅನಂತರ ಕುವೆಂಪು ಸ್ಮಾರಕ ನಾಟಕ ಸ್ಪರ್ಧೆಗಳು   ಕರ್ನಾಟಕದ ತಂಡಗಳಿಗೂ ಅವಕಾಶ ನೀಡಿದವು. ಸಾವಿರಾರು ಕಲಾವಿದರನ್ನು ಶ್ರೋತೃಗಳನ್ನು ಬೆಸೆಯುವ ಮಾನವೀಯಗೊಳಿಸುವ ಕೆಲಸವನ್ನು  ಕುವೆಂಪು ಸ್ಮಾರಕ ನಾಟಕ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಕರ್ನಾಟಕ ಸಂಘವು ಕಳೆದ ಎರಡು ದಶಕಗಳಿಂದ ಮಾಡುತ್ತಾ ಬಂದಿದೆ. ಸಾಹಿತ್ಯ ಭಾರತಿ, ಕಲಾಭಾರತಿ  ಇಂತಹ ಚಟುವಟಿಕೆಗಳ ಮೂಲಕವೂ ಕರ್ನಾಟಕ ಸಂಘ ಮುಂಬಯಿಯಲ್ಲಿ ಸಕ್ರಿಯವಿದೆ. ಕನ್ನಡಿಗರ  ಪ್ರೋತ್ಸಾಹವೇ ಇದಕ್ಕೆ ಕಾರಣ ಎಂದು ನುಡಿದರು.

ಪ್ರಾಸ್ತಾವಿಕ ನುಡಿಗಳನ್ನು ಆಡಿದ ಸಂಘಟಕ, ಕತೆಗಾರ ಓಂದಾಸ್‌ ಕಣ್ಣಂಗಾರ್‌  ಅವರು ಕುವೆಂಪು  ಸ್ಮಾರಕ ನಾಟಕ ಸ್ಪರ್ಧೆಯ  ಹಿನ್ನೆಲೆ, ಸಂಘಕ್ಕೆ ನೀಡಿದ ತಂಡಗಳ ಪ್ರೋತ್ಸಾಹವನ್ನು ಸ್ಮರಿಸಿದರು. ಉದ್ಘಾಟಕರ ಪರಿಚಯವನ್ನು ರಂಗ ಕಲಾವಿದ ಸುರೇಂದ್ರ ಮಾರ್ನಾಡ್‌ ಮಾಡಿದರು. ಸಂಘದ ಗೌರವ  ಪ್ರಧಾನ ಕಾರ್ಯದರ್ಶಿ ರಂಗ ನಿರ್ದೇಶಕ ಡಾ| ಭರತ್‌ ಕುಮಾರ್‌ ಪೊಲಿಪು ಮತ್ತು ಡಾ|  ಈಶ್ವರ್‌ ಅಲೆವೂರು ಅತಿಥಿಗಳನ್ನು  ಗೌರವಿಸಿದರು. ಗಣೇಶ್‌ ಎರ್ಮಾಳ್‌ ಪ್ರಾರ್ಥನೆ ಹಾಡಿದರು.  ಸಭಾ ಕಾರ್ಯಕ್ರಮನ್ನು ಕತೆಗಾರ ರಾಜೀವ ನಾರಾಯಣ ನಾಯಕ ನಿರೂಪಿಸಿ ವಂದಿಸಿದರು. ಅನಂತರ ನಾಟಕ ಸ್ಪರ್ಧೆಯ ಮೊದಲ ನಾಟಕ ಪ್ರದರ್ಶನಗೊಂಡಿತು.  

Advertisement

ಮೊದಲ ದಿನ ರಂಗಮಿಲನ  ಮುಂಬಯಿ ತಂಡದವರಿಂದ ನಾರಾಯಣ ಶೆಟ್ಟಿ ನಂದಳಿಕೆ  ರಚಿಸಿದ ಹಾಗೂ ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶಿಸಿದ ಸಂಸಾರ ನಾಟಕ,  ವಿಶ್ವ ಕಲಾ ಮಂಚ ಮುಂಬಯಿ ತಂಡದವರಿಂದ  ಕುಮಾರ್‌ ಬಡ್‌ಗುಜರ್‌ (ಮೂಲ) ರಚನೆ ಹಾಗೂ ನಿರ್ದೇಶಿಸಿದ, ವಿಜಯಾ ಎಂ. ಕೆಂಭಾವಿಯವರು  ಅನುವಾದಿತ ಅವ್ವ  ನಾಟಕ,  ಪಂಚಮುಖೀ ನಟರ ಸಮೂಹ ಬೆಂಗಳೂರು ತಂಡದವರಿಂದ ಬಿ. ಆರ್‌. ಲಕ್ಷಣ ರಾವ್‌ ರಚಿಸಿದ ಹಾಗೂ ಮಧುಸೂದನ್‌ ಕೆ. ಎಸ್‌. ಅವರು ನಿರ್ದೇಶಿಸಿದ ನನಗ್ಯಾಕೋ ಡೌಟ್‌ ನಾಟಕ, ವಿ. ವಿ. ಕಲಾವಿದರು ಬೆಂಗಳೂರು ತಂಡದವರಿಂದ ಪಿ. ಲಂಕೇಶ್‌ ರಚಿಸಿದ  ಹಾಗೂ ಕೆ. ಎಸ್‌. ಅನಿಲ್‌ ಕುಮಾರ್‌ ನಿರ್ದೇಶಿಸಿದ ಪೋಲಿಸರಿದ್ದಾರೆ ಎಚ್ಚರಿಕೆ ನಾಟಕ, ಜಿಪಿಐಇಅರ್‌  ಮೈಸೂರು ತಂಡದವರಿಂದ ರಾಮಚಂದ್ರ ದೇವ ರಚಿಸಿದ ಹಾಗೂ ಮೈಮ್‌ ರಮೇಶ್‌ ನಿರ್ದೇಶಿಸಿದ ಅಶ್ವತ್ಥಾಮ ನಾಟಕ, ಸಮನ್ವಯ ಬೆಂಗಳೂರು ತಂಡದವರಿಂದ ಮೈನ್ಯಾ ಚಂದ್ರು ರಚಿಸಿದ ಹಾಗೂ ಮಾಲತೇಶ ಬಡಿಗೇರ ನಿರ್ದೇಶಿಸಿದ ಬೂಟು ಬಂದೂಕುಗಳ ಮಧ್ಯೆ ನಾಟಕ, ವಿಸ್ಮಯ ಫೌಂಡೇಶನ್‌ ಹಾಸನ್‌ ತಂಡದವರಿಂದ ಮೋಹನ ಮಟ್ಟನವಿಲೆ ರಂಗ ರೂಪಾಂತರಗೈದ ಹಾಗೂ ನಿರ್ದೇಶಿಸಿದ  ಅದಮ್ಯ ನಾಟಕ ಪ್ರದರ್ಶನಗೊಂಡಿತು.

ಚಿತ್ರ : ಸುಭಾಷ್‌  ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next