ಡೊಂಬಿವಲಿ: ಕರ್ನಾಟಕ ಸಂಘ ಡೊಂಬಿವಲಿ ಇದರ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ-6 ಕಲಾ ಸಿಂಚನ ಮರಾಠಿ ಜಾನಪದ ನೃತ್ಯ ಸ್ಪರ್ಧೆ ಹಾಗೂ ಕೃತಿ ಬಿಡುಗಡೆ ಸಮಾರಂಭವು ಜು. 23ರಂದು ಸಂಜೆ 4 ರಿಂದ ಡೊಂಬಿವಲಿ ಪಶ್ಚಿಮದ ಠಂಟನ್‌ರೋಡ್‌ನ ಠಾಕೂರ್ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಮಾರಂಭವನ್ನು ಕರ್ನಾಟಕ ಸಂಘ ಡೊಂಬಿವಲಿ ಅಧ್ಯಕ್ಷ ವಿಟuಲ ಎ. ಶೆಟ್ಟಿ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ಸಂಘ ಡೊಂಬಿವಲಿ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಅವರು ವಹಿಸಿದ್ದರು. ಅತಿಥಿಯಾಗಿ ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ವೈ. ಶೆಟ್ಟಿ ಖಾಂದೇಶ್ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಮಾಜಿ ಕೋಶಾಧಿಕಾರಿ ಜಯರಾಮ ಕುಕ್ಯಾನ್ ಮತ್ತು ಸಂಘದ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯ ರಮೇಶ್ ಪಿ. ಪೈ ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಾಚನಾಲಯ ವಿಭಾಗದ ವತಿಯಿಂದ ಡೊಂಬಿವಲಿಯ ಸಾಹಿತಿ ವಿ. ಟಿ. ಮುಳುಗುಂದ ಅವರ ಇಂಗ್ಲಿಷ್ ಮೂಲಕೃತಿ ಜ್ಞಾನೇಶ್ವರ್ ಮಹಾನ್ ಕನ್ನಡ ಅನುವಾದ ಕೃತಿಯನ್ನು ಸಂಸ್ಕೃತ ವಿದ್ವಾಂಸ ಡಾ| ಅರವಿಂದ ರಾಮಾಚಾರ್ ಜೋಶಿ ಅವರು ಬಿಡುಗಡೆಗೊಳಿಸಿದರು.
ಸಂಘದ ಉಪಾಧ್ಯಕ್ಷ ಡಾ| ದಿಲೀಪ್ ಕೋಪರ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಎಲ್. ಕುಲಾಲ್, ಕೋಶಾಧಿಕಾರಿ ಚಿತ್ತರಂಜನ್ ಎಂ. ಆಳ್ವ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸಂಘದ ಜತೆ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ, ಕಾರ್ಯದರ್ಶಿ ಸನತ್ ಕುಮಾರ್ ಜೈನ್, ಜತೆ ಕಾರ್ಯದರ್ಶಿ ವಸಂತ ಎನ್. ಸುವರ್ಣ, ಕೋಶಾಧಿಕಾರಿ ಸತೀಶ್ ಅಲಗೂರು, ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷ ಪ್ರೊ| ರಮೇಶ್ ಕಾಖಂಡಕಿ, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರ ನೇತೃತ್ವದಲ್ಲಿ ಸಮಾರಂಭವು ಜರಗಿತು. ತುಳು-ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಗುರುರಾಜ ಪೊತನೀಸ.