Advertisement

ಕರ್ನಾಟಕ ಸಂಘ ಡೊಂಬಿವಲಿ:ವಿಶ್ವ ಮಹಿಳಾ ದಿನಾಚರಣೆ

04:38 PM Mar 21, 2018 | |

ಮುಂಬಯಿ: ಇಪ್ಪತ್ತೂಂದನೇ ಶತಮಾನ ನಾರಿಯರ ಯುಗವಾಗಿದೆ ಎಂದು ಗುರುತಿಸಲ್ಪಡುತ್ತಿದೆ. ಪ್ರಸ್ತುತ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿರುವ ಮಹಿಳೆಯರು ವಿಶ್ವದ  ಗಮನ ಸೆಳೆಯುತ್ತಿದ್ದಾರೆ. ಮಹಿಳೆಯರ ಉತ್ಥಾನದಲ್ಲಿ ಪುರುಷರ ಪಾತ್ರ ಮಹತ್ತರವಾಗಿದೆ ಎಂದು ದಹಿಸರ್‌ ಗಾಯತ್ರಿ ಪರಿವಾರದ ಸಾಧಕಿ ಜಯಲಕ್ಷ್ಮೀ ಹರೀಶ್‌ ಶೆಟ್ಟಿ  ಅವರು ನುಡಿದರು.

Advertisement

ಮಾ. 18ರಂದು ಸಂಜೆ ಡೊಂಬಿವಲಿ ಪೂರ್ವದ ಮಂಜುನಾಥ ವಿದ್ಯಾಲಯದ ಮಂಜುನಾಥ ಸಭಾಗೃಹದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಮಹಿಳಾ ವಿಭಾಗದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮ್ಮ ಸನಾತನ ಭಾರತೀಯ ಸಂಸ್ಕೃತಿ ದೇವ ಸಂಸ್ಕೃತಿಯಾಗಿದ್ದು, ಅದು ಮನುಷ್ಯನನ್ನು ದೇವರನ್ನಾಗಿಸುತ್ತದೆ. ಹಿಂದಿನ ಕಾಲದಲ್ಲಿ ಸ್ತ್ರೀಯರು ಅತ್ಯಂತ ಕಠಿನ ಪರಿಸ್ಥಿತಿಯಲ್ಲಿಯೂ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದ್ದು ಇಂದಿನ ದಿನಗಳಲ್ಲಿ ಅನುಕರಣೀಯವಾಗಿದೆ. ಯಾವ ಮಹಿಳೆಯಲ್ಲಿ ಸ್ವಾರ್ಥ ತುಂಬಿರುತ್ತದೆಯೋ ಅವಳು ಶಿಕ್ಷಣವಿದ್ದರೂ, ಅಶಿಕ್ಷಿತವಾದಂತೆ. ಸಮಾಜ ಬದಲಾಗಬೇಕಾದರೆ ಆಧ್ಯಾತ್ಮಿಕ ಚಿಂತನೆ ನಡೆಯಬೇಕು. ವಿಶ್ವದ ಶ್ರೇಷ್ಠ ಮಂತ್ರವಾದ ಗಾಯತ್ರಿ ಮಂತ್ರದ ಪಠಣ ಮಾಡಬೇಕು. ಅಧ್ಯಾತ್ಮದ ಬಲದಿಂದಲೇ ಸಮಾಜ ಸೇವೆ ಸಾಧ್ಯ ಎಂದು ನುಡಿದು ಡೊಂಬಿವಲಿ ಕರ್ನಾಟಕ ಸಂಘ ಮಹಿಳಾ ವಿಭಾಗದ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭಹಾರೈಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಡಾ| ಸುಶೀಲಾ ವಿಜಯಕುಮಾರ್‌, ಕಸ್ತೂರಿ ಎಸ್‌. ಕರಿಲಿಂಗಣ್ಣವರ, ಡಾ| ಪಾರ್ವತಿ ಪಾಟೀಲ್‌ ಹಾಗೂ ಡಾ| ಅನಘಾ ಹೇರೂರು ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕಳೆದ 34 ವರ್ಷಗಳಿಂದ ಮಂಜುನಾಥ ವಿದ್ಯಾಲಯದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಮುಖ್ಯ ಶಿಕ್ಷಕಿಯಾಗಿ ಸೇವಾ ನಿವೃತ್ತಿಯ ಅಂಚಿನಲ್ಲಿರುವ ಕಸ್ತೂರಿ ಕರಿಲಿಂಗಣ್ಣವರ ಇವರನ್ನು  ಶಾಲೆಯ ಸಿಬಂದಿ ವರ್ಗದವರು ಸಮ್ಮಾನಿಸಿ ಗೌರವಿಸಿ ಶುಭಹಾರೈಸಿದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಪ್ರಸಿದ್ಧ ವೈದ್ಯೆ ಡಾ| ಅನಘಾ ಹೇರೂರ, ಸ್ತ್ರೀ ಅಬಲೆಯಲ್ಲ ಅವಳು ಸಬಲೆ. ಅವಳು ದುರ್ಗೆಯ ಶಕ್ತಿಯ ಜೊತೆ  ಹೃದಯ ವೈಶಾಲ್ಯತೆಯ ಕರುಣಾಮಯಿಯಾಗಿದ್ದಾಳೆ. ಸ್ತ್ರೀ ತನ್ನಲ್ಲಿಯ ಶಕ್ತಿಯನ್ನು ಗುರುತಿಸಿಕೊಳ್ಳಬೇಕು. ಸುಶೀಕ್ಷಿತ ಸ್ತ್ರೀ ಪರಿವಾರದ ಭೂಷಣ ಮತ್ತು ಸಮಾಜದ ಗೌರವ.  ಡೊಂಬಿವಲಿ ಕರ್ನಾಟಕ ಸಂಘ ಸಾಧನೆಗೆ ನೀಡಿದ ಸಮ್ಮಾನವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

Advertisement

ಇನ್ನೋರ್ವ ಸಮ್ಮಾನಿತೆ ಮಂಜುನಾಥ ವಿದ್ಯಾಲಯದ ಮುಖ್ಯ ಶಿಕ್ಷಕಿ ಕಸ್ತೂರಿ ಕರಿಲಿಂಗಣ್ಣವರ ಇವರು ಮಾತನಾಡಿ, ನಾನು ಮಂಜುನಾಥ ವಿದ್ಯಾಲಯದ ಪ್ರಗತಿಗಾಗಿ ಏನಾದರೂ ಅಳಿಲು ಸೇವೆ ಸಲ್ಲಿಸಿದ್ದರೆ ಅದಕ್ಕೆ ಆಡಳಿತ ಮಂಡಳಿಯ ಹಾಗೂ ಶಾಲಾ ಸಿಬಂದಿಗಳ ಅಮೂಲ್ಯ ಸಹಕಾರವೇ ಕಾರಣವಾಗಿದೆ ಎಂದು ವಿನಮ್ರವಾಗಿ ಹೇಳಿದರು.

ಡಾ| ಸುಶೀಲಾ ವಿಜಯಕುಮಾರ್‌ ಇವರು ಮಾತನಾಡಿ, ಶಿಕ್ಷಣಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಎಲ್ಲಾ ಶಿಕ್ಷಕರೂ ಹೆಚ್ಚಿನ ಶಿಕ್ಷಣವನ್ನು ಪಡೆಯಬೇಕು. ಮೊದ ಮೊದಲು ನನ್ನ ಉಚ್ಚ ಶಿಕ್ಷಣದ ಹಂಬಲವನ್ನು ಕಂಡು ಹಲವರು ನಕ್ಕಿದ್ದರು. ಆದರೆ ನಾನು ಛಲ ಬಿಡದ ತ್ರಿವಿಕ್ರಮನಂತೆ ಪ್ರಯತ್ನಪಟ್ಟು ಯಶಸ್ವಿಯಾದೆ. ನನ್ನ ಸಾಧನೆಗೆ ಡೊಂಬಿವಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯವರ ಪ್ರೋತ್ಸಾಹವೇ ಮುಖ್ಯ ಕಾರಣವಾಗಿದೆ ಎಂದು ನುಡಿದರು.
ಇನ್ನೋರ್ವ ಸಮ್ಮಾನಿತೆ ಡಾ| ಪಾರ್ವತಿ ಪಾಟೀಲ್‌ ಇವರು ಮಾತನಾಡಿ, ಡೊಂಬಿವಲಿ ಕರ್ನಾಟಕ ಸಂಘದ ನೀಡಿದ ಸಮ್ಮಾನ ಜೀವನದಲ್ಲಿ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುರುಷ ಪ್ರಧಾನ ಸಮಾಜ ಎಂದು ಹೇಳಲಾಗುತ್ತಿದ್ದರೂ ಮಹಿಳೆಯರ ಸಾಧನೆ ಅಪಾರವಾಗಿದ್ದು, ಮಹಿಳೆಯರು ತಮ್ಮ ಸ್ವಕತೃìತ್ವದಿಂದ ವಿಶ್ವದ ಗಮನ ಸೆಳೆದಿದ್ದಾರೆ. ಸ್ತಿÅàಯರು ಯಾವ ಕಠಿನ ಪರಿಸ್ಥಿತಿಯಲ್ಲೂ ಸೋಲರಿಯದ ಸರದಾರರಂತೆ ಹೋರಾಡಬೇಕು. ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಯಾವುದೇ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಜಯ ನಿಶ್ಚಿತ ಎಂದು ನುಡಿದರು.

ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಸ್ವಾಗತಿಸಿದರು. ಆಶಾ ಎಲ್‌. ಶೆಟ್ಟಿ, ವಿಮಲಾ ವಿ. ಶೆಟ್ಟಿ, ಪದ್ಮಾ ಮುಲ್ಕಿ ಇವರು ಅತಿಥಿಗಳನ್ನು ಪರಿಚಯಿಸಿದರು. ಮಾಧುರಿಕಾ ಬಂಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಚಂಚಲಾ ಸಾಲ್ಯಾನ್‌, ಪುಷ್ಪಾ ಶೆಟ್ಟಿ, ಸುಜಾತಾ ರೈ ಅವರು ಸಹಕರಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡಾ| ದಿಲೀಪ್‌ ಕೋಪರ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಯೋಗಿನಿ ಶೆಟ್ಟಿ, ಆಶಾ ಶೆಟ್ಟಿ, ಗೀತಾ ಮೆಂಡನ್‌ ಮೊದಲಾದವರು ಉಪಸ್ಥಿತರಿದ್ದರು. ಗಣ್ಯರುಗಳಾದ ವಿಠuಲ್‌ ಶೆಟ್ಟಿ, ವಸಂತ ಕಲಕೋಟಿ, ಹರೀಶ್‌ ಶೆಟ್ಟಿ, ಕರುಣಾಕರ ಶೆಟ್ಟಿ ಕಲ್ಲಡ್ಕ, ನ್ಯಾಯವಾದಿ ಆರ್‌. ಎಂ. ಭಂಡಾರಿ, ಡಾ| ವಿ. ಎಸ್‌. ಅಡಿಗಲ್‌, ಅಜೀತ್‌ ಉಮಾರಾಣಿ, ಮಿತ್ರಪಟ್ಣ ನಾರಾಯಣ ಬಂಗೇರ, ವಿಮಲಾ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಾ| ರಹೀಶ್‌ ರವೀಂದ್ರನ್‌ ಇವರು ಸಂಧಿವಾತದ ಬಗ್ಗೆ ಉಪನ್ಯಾಸ ನೀಡಿದರು. ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಸಂಘಟನೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಮಹಿಳಾ ವಿಭಾಗದ ಸದಸ್ಯೆಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನೆರವೇರಿದವು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಸಾಮಾಜಿಕ ಸಂಘಟನೆಗಳ ಕಾರ್ಯ ನಿಂತ ನೀರಾಗದೆ ಹರಿಯುವ ನದಿಯಂತಾಗಿರಬೇಕು. ನಾವು ಬೆಳೆಯುವುದರ ಜೊತೆಗೆ ಇನ್ನೊಬ್ಬರನ್ನು ಬೆಳೆಸುವ ಮನೋಭಾವ ನಮ್ಮದಾಗಿರಬೇಕು. ನಾವು ಇವತ್ತು ಜೀವನದಲ್ಲಿ ಏನನ್ನಾದರೂ ಸಾಧಿಸಿದ್ದರೆ ಅದು ಓರ್ವ ಮಹಿಳೆಯ ಕೊಡುಗೆಯಾಗಿದೆ. ಆದ್ದರಿಂದ ಮಹಿಳಾ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ವರ್ಷಪೂರ್ತಿ ಆಚರಿಸುವಂತಾಗಬೇಕು. ಕರ್ನಾಟಕ ಸಂಘವು ಮಹಿಳೆಯರಿಗೂ ಎಲ್ವಾ ವಿಧಗಳಲ್ಲಿಯೂ ಮೊದಲ ಪ್ರಾಧಾನ್ಯತೆಯನ್ನು ನೀಡುತ್ತಿದೆ. ಪರಿಸರದ ಮಹಿಳೆಯರು ಹೆಚ್ಚು ಹೆಚ್ಚು ಸಂಘದ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು. ಆಗ ಸಂಘಟನೆ ಬಲಯುತಗೊಳ್ಳುವುದರೊಂದಿಗೆ ಮಹಿಳೆಯರ ಮನೋಬಲ ವೃದ್ಧಿಯಾಗುತ್ತದೆ. ಭವಿಷ್ಯದಲ್ಲೂ ಸಂಘದ ಮುಖಾಂತರ ಮಹಿಳೆಯರಿಗೆ ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ಲಭಿಸಲಿದೆ 
-ಇಂದ್ರಾಳಿ ದಿವಾಕರ ಶೆಟ್ಟಿ  (ಅಧ್ಯಕ್ಷರು : ಕರ್ನಾಟಕ ಸಂಘ ಡೊಂಬಿವಲಿ).

ಚಿತ್ರ ವರದಿ: ಗುರುರಾಜ್‌ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next