ಡೊಂಬಿವಲಿ: ಜನ್ಮಭೂಮಿಯಾದ ಕರ್ನಾಟಕದಿಂದ ಮಹಾರಾಷ್ಟÅಕ್ಕೆ ಬಂದ ನಾವು ನಮ್ಮ ಸಮಾಜ, ಸಂಸ್ಕೃತಿ, ಕಲೆ, ಭಾಷೆಗಳ ಅಭಿವೃದ್ದಿಗಾಗಿ ಸಂಘ-ಸಂಸ್ಥೆಗಳನ್ನು ಕಟ್ಟಿಕೊಳ್ಳುವ ಮೂಲಕ ಮಹಾರಾಷ್ಟ್ರದಲ್ಲಿಯೂ ಮಿನಿ ಕರ್ನಾಟಕವನ್ನು ನಿರ್ಮಿಸಿದ ಹೆಗ್ಗಳಿಕೆ ಹೊರನಾಡ ಕನ್ನಡಿಗರದ್ದಾಗಿದೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ನುಡಿದರು.
ಸೆ. 3ರಂದು ಡೊಂಬಿವಲಿ ಪೂರ್ವದ ಟಂಡನ್‌ರೋಡ್‌ನ ಠಾಕೂರ್ ಸಭಾಗೃಹದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ-10 ಕಲಾಸಂಗಮ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾರೋ ಒಬ್ಬರು ಮಹಾರಾಷ್ಟ್ರಕ್ಕೆ ಜೈ ಎಂದ ಮಾತ್ರಕ್ಕೆ ಗುಲ್ಲೆಬ್ಬಿಸುವುದು ಸರಿಯಲ್ಲ. ನಾವು ಕನ್ನಡಿಗರು ನಿಜವಾದರೆ ಅದಕ್ಕಿಂತಲೂ ಮೊದಲು ನಾವು ಭಾರತೀಯರು ಎಂಬುದನ್ನು ಮರೆಯಬಾರದು. ಕರ್ನಾಟಕ ಸರಕಾರ ಹಾಗೂ ಅಲ್ಲಿಯ ಕನ್ನಡಿಗರು ಮಹಾರಾಷ್ಟ್ರದ ಕನ್ನಡಿಗರ ಕಾರ್ಯವನ್ನು ಗಮನಿಸಬೇಕಾದ ಅನಿವಾರ್ಯತೆ ಇದೆ. ನಾವು ನಮ್ಮ ಭಾಷೆ, ಸಂಸ್ಕೃತಿಯ ಅಭಿವ್ಯಕ್ತಿ ಜೊತೆಗೆ ಭಾರತೀಯತೆಯನ್ನು ಉಳಿಸಿ-ಬೆಳೆಸಲು ಕಂಕಣ ಬದ್ಧರಾಗಬೇಕು ಎಂದು ಕರೆ ನೀಡಿದರು. ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯ ವಿಶೇಷವಾಗಿ ಜ್ಞಾನದಾಸೋಹ ಕಾರ್ಯಕ್ರಮವೂ ಇತರರಿಗೆ ಮಾದರಿಯಾಗಿದೆ. ಭವಿಷ್ಯದಲ್ಲಿ ಸಂಸ್ಥೆಯು ಅಭಿವೃದ್ದಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘ ಡೊಂಬಿವಲಿ ಅಧ್ಯಕ್ಷ ವಿಠuಲ್ ಶೆಟ್ಟಿ ಅವರು ಮಾತನಾಡಿ, 50 ವರ್ಷಗಳ ಹಿಂದೆ ನಮ್ಮ ಹಿರಿಯರು ನೆಟ್ಟ ಈ ಸಸಿ ಇಂದು ವಿಶಾಲ ವೃಕ್ಷವಾಗಿ ಬೆಳೆದಿದ್ದು, ಈ ವಿಶಾಲ ವಟವೃಕ್ಷದ ನೆರಳಲ್ಲಿ ಇವತ್ತು ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆಯನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ನಾಲ್ಕು ಉಪ ಸಮಿತಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ನಡೆದು ಬಂದ ದಾರಿ ಹಾಗೂ ಮುಂದಿನ ಯೋಜನೆ ಮತ್ತು ಯೋಚನೆಗಳನ್ನು ವಿವರಿಸಿ, ನಾಡು-ನುಡಿಯ ಅಭಿವೃದ್ಧಿಗಾಗಿ ನಾವೆಲ್ಲರೂ ಒಮ್ಮತದಿಂದ ಶ್ರಮಿಸೋಣ. ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರವಿರಲಿ ಎಂದು ನುಡಿದರು.
ವೇದಿಕೆಯಲ್ಲಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ನಿವೃತ್ತ ಮುಖ್ಯಸ್ಥ, ಸಾಹಿತಿ ಡಾ| ತಾಳ್ತಜೆ ವಸಂತ್ ಕುಮಾರ್, ಡಾ| ವರದರಾಜ ಚಂದ್ರಗಿರಿ, ಸಂಘದ ಪದಾಧಿಕಾರಿಗಳಾದ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ, ಉಪಾಧ್ಯಕ್ಷ ಡಾ| ದಿಲೀಪ್ ಕೆ. ಕೋಪರ್ಡೆ, ಗೌರವ ಕಾರ್ಯದರ್ಶಿ ದೇವದಾಸ್ ಎಲ್. ಕುಲಾಲ್, ಸುವರ್ಣ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಸತೀಶ್ ಆಲಗೂರ, ಕಾರ್ಯದರ್ಶಿ ಸನತ್ ಕುಮಾರ್ ಜೈನ್, ಸಾಹಿತ್ಯ ವಿಭಾಗದ ಕಾರ್ಯಾಧ್ಯಕ್ಷ ವಿಮಲಾ ವಿ. ಶೆಟ್ಟಿ, ಜತೆ ಕೋಶಾಧಿಕಾರಿ ವಸಂತ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಣ್ಯರನ್ನು ಸಂಘದ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಜಾನಪದ ಗಾಯಕಿ ರಶ್ಮೀ ಕಾಖಂಡಕಿ ತಂಡದವರು ಪ್ರಾರ್ಥನೆಗೈದರು. ವಸಂತ ಸುವರ್ಣ ಅವರು ಕಾರ್ಯಕ್ರಮ ನಿರ್ವಹಿಸಿದರು. ಸನತ್ ಕುಮಾರ್ ಜೈನ್ ಅವರು ಅತಿಥಿಗಳನ್ನು ಪರಿಯಿಸಿದರು. ದೇವದಾಸ್ ಕುಲಾಲ್ ಅವರು ವಂದಿಸಿದರು. ಸಮಾರಂಭದಲ್ಲಿ ವಸಂತ ಕಲಕೋಟಿ, ಗುರುರಾಜ ನಾಯಕ್, ಪ್ರಭಾಕರ ಶೆಟ್ಟಿ, ಡಾ| ಗೋವಿಂದ ಕೋಪರ್ಡೆ, ಎಸ್. ಎನ್. ಸೋಮಾ, ರಮೇಶ್ ಕಾಖಂಡಕಿ, ಅಶೋಕ್ ಪಕ್ಕಳ ಮೊದಲಾದವರು ಪಾಲ್ಗೊಂಡಿದ್ದರು.