ಡೊಂಬಿವಲಿ: ಕನ್ನಡಿಗರು ಹೊರನಾಡಿನಲ್ಲಿದ್ದರೂ ನಾಡು-ನುಡಿಗಾಗಿ ಸಲ್ಲಿಸುವ ಸೇವೆ ಸಾಧನೆಯೇ ತಾಯಿ ಭುವನೇಶ್ವರಿಗೆ ಸಲ್ಲುವ ಗೌರವವಾಗಿದೆ. ಕನ್ನಡದ ಕಾರ್ಯಕಲಾಪಗಳಿಗೆ ಸಂಘವು ಸದಾ ಬೆನ್ನೆಲುಬಾಗಿರುತ್ತದೆ. ಮಂಜುನಾಥ ಶಾಲಾ, ಕಾಲೇಜುಗಳ ಪ್ರವೇಶಾತಿಯಲ್ಲಿ ಕನ್ನಡ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಸಂಘ-ಸಂಸ್ಥೆಗಳ ಹಾಗೂ ಕನ್ನಡಿಗರ ಐಕ್ಯತೆಯ ಬೆಂಬಲವೇ ಕರ್ನಾಟಕ ಸಂಘದ ಪ್ರಗತಿಗೆ ಮೂಲವಾಗಿದೆ. ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲೂ ಮಹಿಳೆಯರ ಪಾತ್ರ ಹಿರಿದಾಗಿದೆ. ಜಾತಿ, ಮತ, ಭೇದವಿಲ್ಲದೆ ನಾವು ಕಾರ್ಯನಿರತರಾಗಬೇಕು ಎಂದು ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ನುಡಿದರು.
ನ. 17ರಂದು ಡೊಂಬಿವಲಿ ಕರ್ನಾಟಕ ಸಂಘದ ವಾಚನಾಲಯ ವಿಭಾಗದ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವನ್ನು ನಾವೆಲ್ಲರೂ ಅಭಿವೃದ್ಧಿಪಥದತ್ತ ಸಾಗಿಸೋಣ ಎಂದರು.
ಸಂಘ ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರು ಮಾತನಾಡಿ, ಶಾಲೆ-ಕಾಲೇಜುಗಳ ಶಿಕ್ಷಣ ಹಾಗೂ ಸಂಘದ ಸರ್ವಾಂಗೀಣ ಉನ್ನತಿಯೇ ನಮ್ಮ ಪ್ರಧಾನ ಉದ್ದೇಶ. ಮುಂದಿನ ತಿಂಗಳು ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭವು ಜರಗಲಿದ್ದು, ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆಯ ಬಿಡುಗಡೆಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಈ ಮೂಲಕ ಅತೀ ದೊಡ್ಡ ದೇಣಿಗೆಯನ್ನು ಸಂಗ್ರಹಿಸಿ ಇದರ ಬಡ್ಡಿದರದಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಲಿದ್ದೇವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಮರಣ ಸಂಚಿಕೆಗೆ ಜಾಹೀರಾತು ನೀಡಿ ಸಹಕರಿಸಬೇಕು ಎಂದರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಎಲ್. ಕುಲಾಲ್ ಅವರು ಮಾತನಾಡಿ, ಸಂಘದ ನಾಲ್ಕು ಉಪಸಮಿತಿಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಸದಸ್ಯರನ್ನು ನೇಮಿಸಿ ಅವರೆಲ್ಲರ ಗಮನಕ್ಕೆ ಲಿಖೀತವಾಗಿ ತಿಳಿಸಲಾಗಿದೆ. ಆಯಾ ಸಮಿತಿಗಳಲ್ಲಿ ಮಾತ್ರವಲ್ಲದೆ ಇತರ ಸಮಿತಿಗಳ ಕಾರ್ಯಚಟುವಟಿಕೆಗಳಲ್ಲೂ ಅಳಿಲ ಸೇವೆ ಮಾಡಿದಲ್ಲಿ ಕಾರ್ಯಕಾರಿ ಸಮಿತಿಯು ಉತ್ತೇಜನಗೊಂಡು ಧನಾತ್ಮಕ ಹೆಜ್ಜೆಯನ್ನಿಡಲು ಸಾಧ್ಯ ಎಂದರು.
ಕುಲಾಲ ಸಂಘದ ಅಧ್ಯಕ್ಷರಾಗಿ ನೇಮಕಗೊಂಡ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಎಲ್. ಕುಲಾಲ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಗೌರವ ಕೋಶಾಧಿಕಾರಿ ಲೋಕನಾಥ ಎ. ಶೆಟ್ಟಿ, ಜತೆ ಕೋಶಾಧಿಕಾರಿ ಚಿತ್ತರಂಜನ್ ಎಂ. ಆಳ್ವ, ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷೆ ವಿಮಲಾ ವಿ. ಶೆಟ್ಟಿ, ಕಾರ್ಯದರ್ಶಿ ಸನತ್ ಕುಮಾರ್ ಜೈನ್ ಅವರು ಉಪಸ್ಥಿತರಿದ್ದರು.
ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ರಾಜೀವ ಎಂ. ಭಂಡಾರಿ, ಎಸ್. ಎನ್. ಸೋಮಾ, ಆರ್. ಎಂ. ಭಂಡಾರಿ, ಮಾಧುರಿಕಾ ಆರ್. ಬಂಗೇರ, ಸುಷ್ಮಾ ಡಿ. ಶೆಟ್ಟಿ ಹಾಗೂ ವಾಚನಾಲಯ ವಿಭಾಗದ ಸದಸ್ಯರು, ಗ್ರಂಥ ಪಾಲಕಿಯರು ಉಪಸ್ಥಿತರಿದ್ದರು. ಸುನಂದಾ ಶೆಟ್ಟಿ ಮತ್ತು ಯೋಗಿನಿ ಎಸ್. ಶೆಟ್ಟಿ ಅವರು ಪ್ರಾರ್ಥನೆಗೈದರು. ವೇದಿಕೆಯ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಮಲಾ ವಿ. ಶೆಟ್ಟಿ ಸ್ವಾಗತಿಸಿದರು. ಸನತ್ ಕುಮಾರ್ ಜೈನ್ ಇವರು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಬಳಿಕ ವಾಚನಾಲಯ ಸಮಿತಿಯ ಸದಸ್ಯರು ಪರಸ್ಪರ ಪರಿಚಯಿಸಿಕೊಂಡು ವಿಚಾರ-ವಿನಿಮಯ ನಡೆಸಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು.