Advertisement

ಅಮೆರಿಕಾದ ಹಲವೆಡೆ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

12:56 PM Nov 28, 2020 | Adarsha |

ನ್ಯೂಜರ್ಸಿ: ಅಮೆರಿಕಾದಲ್ಲಿ  ಹಲವಾರು ಕನ್ನಡ ಸಂಘಗಳಿವೆ. ಪ್ರತಿ ವರ್ಷವೂ ಈ ಸಂಘಗಳು ಯುಗಾದಿ, ದೀಪಾವಳಿ, ಚೌತಿ, ನವರಾತ್ರಿ ಸಹಿತ ವಿವಿಧ ಕಾರ್ಯಕ್ರಮಗಳನ್ನು ವರ್ಷವೀಡಿ ನಡೆಸುತ್ತವೆ. ಆದರೆ ಅತಿಮುಖ್ಯ ಮತ್ತು ಪ್ರಮುಖ ಕಾರ್ಯಕ್ರವಾದ ಕರ್ನಾಟಕ ರಾಜ್ಯೋತ್ಸವವನ್ನು ನವಂಬರ್‌ ತಿಂಗಳಲ್ಲಿ ಆಯೋಜಿಸಲಾಗುತ್ತದೆ.

Advertisement

ವಿದೇಶದಲ್ಲಿರುವ ಅನಿವಾಸಿ ಕನ್ನಡಿಗರು ಸಾಮಾನ್ಯವಾಗಿ ಭಾರತದ ಸ್ವಾತಂತ್ರೋತ್ಸವವನ್ನು ಆಗಸ್ಟ್‌ 15ರಂದೇ ಆಚರಿಸುತ್ತಾರೆ. ಆದರೆ ಕರ್ನಾಟಕ ರಾಜ್ಯೋತ್ಸವವನ್ನು ವೀಕೆಂಡ್‌ನ‌ಲ್ಲಿ ಅಂದರೆ ಶನಿವಾರ, ಭಾನುವಾರ ಆಯೋಜಿಸುತ್ತಾರೆ.

ಕರ್ನಾಟಕ ರಾಜ್ಯ ಉದಯವಾಗಿದ್ದು ನ. 1ರಂದು. ಹೀಗಾಗಿ ಆ ದಿನವೇ ರಾಜ್ಯೋತ್ಸವದ ಮಾಡಿದರೆ ಬಹಳಷ್ಟು ಅರ್ಥಪೂರ್ಣ ಎಂಬ ಯೋಚನೆಯಿಂದ ನ್ಯೂಜರ್ಸಿ ಬೃಂದಾವನ ಸಂಘದ ಅಧ್ಯಕ್ಷ ಸತೀಶ್‌ ಹೊಸನಗರ ಅವರು ವಿವಿಧ ಕನ್ನಡ ಸಂಘಗಳನ್ನು ಅಧ್ಯಕ್ಷ ನ್ನು ಸಂಪರ್ಕಿಸಿ ಸಭೆ ಕರೆದು, ಈ ಬಾರಿ ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಅಮೆರಿಕದಾದ್ಯಂತ ಇರುವ ಕನ್ನಡಪರ ಸಂಘಟನೆಗಳು ಸೇರಿ ಅಂತರ್ಜಾಲ ಮುಖೇನ ರಾಜ್ಯೋತ್ಸವ ಆಚರಣೆಗೆ ತೀರ್ಮಾನ ಕೈಗೊಂಡರು.  ಪ್ರತಿ ಕನ್ನಡ ಸಂಘಗಳಿಗೆ 20 ನಿಮಿಷ ಕಾಲಾವಕಾಶ ಕೊಡಲು ತೀರ್ಮಾನಿಸಲಾಯಿತು.

ನ. 1ರಂದು ಭಾನುವಾರ ಸಂಜೆ 7 ಗಂಟೆಗೆ ಸರಿಯಾಗಿ ಆರಂಭವಾದ ರಾಜ್ಯೋತ್ಸವದ ಆರಂಭದಲ್ಲಿ ಧ್ವಜಾರೋಹಣ, ಕನ್ನಡ ತಾಯಿ ಭುವನೇಶ್ವರಿಯ  ಪೂಜೆ ಮತ್ತು ಪ್ರಾರ್ಥನೆ ನಡೆಯಿತು. ಬಳಿಕ ಕನ್ನಡ ನಾಡಿನ ವಿವಿಧ ಭಾಗಗಳ ಸಂಪ್ರದಾಯ,  ಸಂಸ್ಕೃತಿಯನ್ನು ಸೂಚಿಸುವ ಗಾಯನ, ಜಾನಪದ ನೃತ್ಯ, ಸಾಂಪ್ರದಾಯಿಕ  ಫ್ಯಾಶನ್‌ ಶೋ,   ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.

Advertisement

ಅಲ್ಬನಿಯ ಕನ್ನಡ ಕಲಿ ಶಾಲೆಯ ಗುರುಗಳಾದ ಲತಾ ಕಾಲಿಯತ್‌ ನಿರ್ದೇಶನದಲ್ಲಿ ಚಿಕ್ಕ ಮಕ್ಕಳು ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಶಿವಶರಣೆ ಅಕ್ಕಮಹಾದೇವಿ, ಸರ್ವಜ್ಞ,  ಬಸವಣ್ಣ, ರಾಹುಲ್‌ ದ್ರಾವಿಡ್‌, ಅಂಬರೀಶ್‌, ನಟಸಾರ್ವಭೌಮ ರಾಜಕುಮಾರ್‌ ಹೀಗೆ ವಿವಿಧ ಪಾತ್ರಗಳಲ್ಲಿ ಬಂದು ನಮ್ಮ  ಕರ್ನಾಟಕದ ಭವ್ಯ ಚರಿತ್ರೆಯನ್ನೇ ವೀಕ್ಷಕರ ಮುಂದೆ ತೆರೆದಿಟ್ಟರು.

ಸತೀಶ್‌ ಹೊಸನಗರ ಮತ್ತು ಅಮೃತಾ  ಪ್ರತಿನಿಧಿಸಿದ ಬೃಂದಾವನ ನ್ಯೂಜರ್ಸಿ ಕನ್ನಡ ಸಂಘ, ಅಜಿತ್‌ ಶೆಟ್ಟಿ ಭಾಸ್ಕರ್‌ ಅವರ ನ್ಯೂಯಾರ್ಕ್‌ ಸಿಟಿ  ಕನ್ನಡ ಸಂಘ,  ಉಮಾ ಬೆಂಕಿ,  ಸುನೀತಾ ವಿಜಯ  ಮತ್ತು ಬೆಂಕಿ ಬಸಣ್ಣ ಪ್ರತಿನಿಧಿಸಿದ ಆಲ್ಬನಿ ಕನ್ನಡ ಸಂಘ, ಪುಷ್ಪಲತಾ ನೇತೃತ್ವದ ಕಸ್ತೂರಿ ಕನ್ನಡ ಸಂಘ ಕ್ಲೀವ್ಲ್ಯಾಂಡ್,  ಓಹಿಯೋ ವೇಣು ಕುಲಕರ್ಣಿ, ಸಂಜಯ್‌ ಕುಲಕರ್ಣಿ ಮತ್ತು ಶ್ರೀಕಾಂತ್‌ ಪ್ರತಿನಿಧಿಸಿದ ಶ್ರೀಗಂಧ ಕನ್ನಡಕೂಟ ಫ್ರೋರಿಡಾ, ಪುಟ್ಟಮ್ಮ ನೇತೃತ್ವದ ತ್ರಿವೇಣಿ ಕನ್ನಡ ಸಂಘ,  ಶಿವಮೊಗ್ಗ ಪ್ರಕಾಶ್‌ ಪ್ರತಿನಿಧಿಸಿದ ಮಲ್ಲಿಗೆ ಕನ್ನಡ ಸಂಘ, ಇಂಡಿಯಾನಾಪೊಲಿಸ್‌ ಮತ್ತು  ರಜನಿ ಮಹೇಶ್ವರ ಪ್ರತಿನಿಧಿಸಿದ ಕ್ಯಾರೋಲಿನಾ ಕನ್ನಡ ಬಳಗ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿ ಫೇಸ್‌ಬುಕ್‌ ಮೂಲಕ ನೇರ ಪ್ರಸಾರ ಮಾಡಲಾಯಿತು.

ಅಮೆರಿಕದ ವಿವಿಧ ಭಾಗಗಳ ಸಾವಿರಾರು ಕನ್ನಡಿಗರು ಮತ್ತು ಯುರೋಪ್‌, ಆಸ್ಟ್ರೇಲಿಯಾ ಗಲ್ಫ್ ದೇಶಗಳ ಜತೆಗೆ ಕರ್ನಾಟಕದ ಬಹಳಷ್ಟು ಜನರು ಈ ಕಾರ್ಯಕ್ರಮಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next