ಧಾರವಾಡ : ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಡಾ|ಎಸ್.ಆರ್.ರಾಮನಗೌಡರ (ಶಿವನಗೌಡ ರುದ್ರಗೌಡ ರಾಮನಗೌಡರ) ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ರೈತಾಪಿ ಕುಟುಂಬದ ಹಿನ್ನಲೆಯಿಂದ ಬಂದ ರಾಮನಗೌಡರು, ಗ್ರಾಮೀಣ ಗ್ರಾಮದ ಜನರು ಆರೋಗ್ಯ ಸೇವೆಯಿಂದ ವಂಚಿತರಾಗಿ ಪಡುವ ಕಷ್ಟಗಳನ್ನು ಕಂಡು ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿದರು. ಅದರಲ್ಲೂ ಶಸ್ತ್ರಚಿಕಿತ್ಸೆ ಅವಶ್ಯಕತೆ ಮನಗಂಡು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವೈದ್ಯ ವೃತ್ತಿ ಮುಗಿದ ಕೂಡಲೇ ಬಡವರಿಗಾಗಿಯೇ 1980 ರಲ್ಲಿ ಶಸ್ತ್ರಚಿಕಿತ್ಸೆಯ ವಿಭಾಗದೊಂದಿಗೆ ೧೦ ಹಾಸಿಗೆಯುಳ್ಳ ನರ್ಸಿಂಗ್ ಹೋಮ್ ಧಾರವಾಡದಲ್ಲಿಯೇ ಆಂಭಿಸಿದರು. ಆಗ ಅವರು ಪಡೆಯುತ್ತಿದ್ದು ಕೇವಲ 5 ರೂ. ಸಂದರ್ಶನ ಶುಲ್ಕ. ಮುಂದೆ 1988 ರಲ್ಲಿ ಸ್ವಂತ ಕಟ್ಟಡ ನಿರ್ಮಿಸಿ, 50 ಹಾಸಿಗೆಗಳುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿದರು.
ಸತತ 40 ವರ್ಷಗಳ ಕಾಲ 1 ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿರುವ ಹೆಗ್ಗಳಿಕೆ ಇವರಿಗಿದೆ. ಈಗಲೂ ಪ್ರತಿ ರವಿವಾರ ಹಳ್ಳಿಗಳಲ್ಲಿ ಉಚಿತವಾಗಿ ಆರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಅವರ ನಾಲ್ಕು ಜನ ಪುತ್ರರು ಹಾಗೂ ನಾಲ್ಕು ಜನ ಸೊಸೆಯಂದಿರುವ ಈ ಪರಂಪರೆ ಮುಂದುವರೆಸಿಕೊಂಡು ಸಾಗಿದ್ದಾರೆ.
ವಾರಕ್ಕೊಮ್ಮೆ ಹಳ್ಳಿಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ, ಜನರಿಗೆ ಚಿಕಿತ್ಸೆ ನೀಡುವದಲ್ಲದೇ ಅವರಲ್ಲಿ ಆರೋಗ್ಯದ ಅರಿವು, ಸ್ವಚ್ಚತೆ ಮತ್ತು ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಾರ್ಯ ಸಾಗಿದೆ. ಇದಲ್ಲದೇ ಆಸ್ಪತ್ರೆಯಲ್ಲಿ ಜನಿಸಿದ ಮಗುವಿನ ಪೋಷಕರಿಗೆ ಒಂದು ಸಸಿಯನ್ನು ನೀಡಿ, ನಿಮ್ಮ ಮಗುವಿನ ಜತೆ ಈ ಸಸಿಯನ್ನು ಬೆಳೆಸಬೇಕೆಂಬ ಧ್ಯೇಯದೊಂದಿಗೆ ಜೊತೆ ಜೊತೆಯಲಿ ಎಂಬ ವಿನೂತನ ಕಾರ್ಯಕ್ರಮ ಸಾಗಿದೆ. ಕಡಿಮೆ ವೆಚ್ಚದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸೆ ಮಾಡಿರುವ ರಾಮನಗೌಡರ, ಅಂಗವಿಕಲ ಮಕ್ಕಳಿಗೆ ಆಸ್ಪತ್ರೆಯ್ಲಲಿ ಉಚಿತ ತಪಾಸಣೆ ವ್ಯವಸ್ಥೆ ಮಾಡಿದ್ದಾರೆ. ಮೂರು ತಿಂಗಳಿಗೊಮ್ಮೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಮಾಡುವುದರ ಜತೆಗೆ ಆಸ್ಪತ್ರೆಯಲ್ಲಿಯೇ ರಕ್ತನಿಽ ಕೇಂದ್ರ ಸ್ಥಾಪಿಸಿದ್ದಾರೆ. ಮೂರ್ಛೆ ರೋಗ ಪೀಡಿತ ಬಡ ರೋಗಿಗಳಲ್ಲಿ ಉಚಿತ ಔಷಧಿ ವಿತರಣೆ ಮಾಡುವುದರ ಜತೆಗೆ ಆಯ್ದ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳ ಶುಲ್ಕ ಭರಿಸುವ ಸಾಮಾಜಿಕ ಕಾರ್ಯ ಮಾಡಿದ್ದಾರೆ.
2004 ರಿಂದ ಶ್ರೀ ಉಳವಿ ಚೆನ್ನಬಸವೇಶ್ವರ ಧರ್ಮ ಫಂಡ್ ಸಂಸ್ಥೆಯ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿದ್ದು, ಇದೀಗ ಹಾಲಿ ಅಧ್ಯಕ್ಷರಾಗಿದ್ದಾರೆ. ಇದಲ್ಲದೇ ಸಾಮಾಜಿಕ, ಧಾರ್ಮಿಕ ಸೇರಿದಂತೆ ವಿವಿಧ ಸೇವೆ ಸಲ್ಲಿಸಿರುವ ರಾಮನಗೌಡರಿಗೆ ಈಗಾಗಲೇ 1992-93 ರಲ್ಲಿ ಶ್ರೇಷ ವೈದ್ಯ, 1996 ರಲ್ಲಿ ಧರ್ಮ ಭೂಷಣ, ಸಮಾಜ ಸೇವಾ ಧುರೀಣ, 2004 ರಲ್ಲಿ ವೈದ್ಯರತ್ನ, 2005 ರಲ್ಲಿ ವೈದ್ಯಭಾಸ್ಕರ ಸೇರಿದಂತೆ ವಿವಿಧ ಪ್ರಶಸ್ತಿಗಳು ಸಂದಿದೆ.