ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರಾಳ ದಿನ ಆಚರಿಸುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯದ ಮೂವರು ಸಚಿವರು ಹಾಗೂ ಸಂಸದನಿಗೆ ಬೆಳಗಾವಿ ಜಿಲ್ಲೆ ಪ್ರವೇಶಿಸಲು ನಿರ್ಬಂಧ ಹೇರಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತದಾದಾ ಪಾಟೀಲ, ದೀಪಕ ಕೇಸರಕರ, ಧೈರ್ಯಶೀಲ ಮಾನೆ, ಸಂಸದ ಶಂಭುರಾಜೆ ದೇಸಾಯಿ ಅವರಿಗೆ ನಿರ್ಬಂಧ ಹೇರಲಾಗಿದೆ. ಇವರುಗಳು ಕರ್ನಾಟಕ ರಾಜ್ಯಕ್ಕೆ ಬಂದು ಪ್ರಚೋದನಕಾರಿಯಾಗಿ ಮಾತನಾಡುವ ಸಾಧ್ಯತೆಯಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಮಧ್ಯೆ ಗಡಿವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇದ್ದು, ಈ ಮೂವರು ಸಚಿವರು ಹಾಗೂ ಸಂಸದರು ಗಡಿವಿವಾದ ಬಗ್ಗೆ ಪ್ರಚೋದನಕಾರಿಯಾಗಿ ಮಾತನಾಡುವ ಸಾಧ್ಯತೆ ಇರುವುದರಿಂದ ಬೆಳಗಾವಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಮಹಾರಾಷ್ಟ್ರ ರಾಜ್ಯದ ಮೂವರು ಸಚಿವರು ಹಾಗೂ ಸಂಸದರು ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು ಪ್ರವೇಶಿಸಿದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಫೇರಾವ್ ಹಾಕಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ:Honda ಭಾರತೀಯ ಮಾರುಕಟ್ಟೆಗೆ ಹೋಂಡಾ ಎಕ್ಸ್‌ಎಲ್ 750 ಟ್ರಾನ್ಸಲ್ಪ್ ಎಂಟ್ರಿ!
ಅಲ್ಲದೇ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಹಾಗೂ ಎಂ.ಇ.ಎಸ್ ಕಾರ್ಯಕರ್ತರ ನಡುವೆ ಘರ್ಷಣೆಗಳು ಉಂಟಾಗಿ ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಅಕ್ಟೋಬರ್ 31ರಂದು ಬೆಳಗ್ಗೆ 6 ಗಂಟೆಯಿಂದ ನವೆಂಬರ್ 2ರಂದು ಸಂಜೆವರೆಗೆ ಜಾರಿಗೆ ಬರುವಂತೆ ಬೆಳಗಾವಿ ನಗರ ಮತ್ತು ಬೆಳಗಾವಿ ಜಿಲ್ಲೆ ಗಡಿಯೊಳಗೆ ಪ್ರವೇಶಿಸದಂತೆ ನಿರ್ಭಂಧಿಸಿ ಆದೇಶ ಹೊರಡಿಸಿದ್ದಾರೆ.