ಹುಬ್ಬಳ್ಳಿ: ಮಲೆನಾಡು ಹಾಗೂ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಮುಂದುವರಿದಿದ್ದು, ಸಿಡಿಲಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. 7 ಕುರಿಗಳು ಮೃತಪಟ್ಟಿವೆ.
ರಭಸದ ಗಾಳಿಗೆ ಬಾಳೆ, ಮೆಕ್ಕೆಜೋಳ ಸಹಿತ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ವಿಭೂತಿಹಳ್ಳಿ ಗ್ರಾಮದ ಕುರಿಗಾಹಿ ಗೋವಿಂದಪ್ಪ (22) ಸಿಡಿಲು ಬಡಿದು ಮೃತಪಟ್ಟಿದ್ದಾರೆ. 7 ಕುರಿಗಳು ಕೂಡ ಅಸುನೀಗಿವೆ. ರಾಯಚೂರು, ಮಸ್ಕಿಯಲ್ಲಿ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಕಂದವಾಡಿ ಸಹಿತ ವಿವಿಧ ಗ್ರಾಮಗಳಲ್ಲಿ ಹಲವು ಮನೆಗಳು ಕುಸಿದಿವೆ.
ಕಸವನಹಳ್ಳಿ, ಕಣಿವೆಜೋಗಿಹಳ್ಳಿ ತೋಟಗಳಲ್ಲಿ ಬಾಳೆ ಗಿಡಗಳು ಮುರಿದು ಬಿದ್ದಿವೆ. ಚಳ್ಳಕೆರೆ, ಮೊಳಕಾಲ್ಮೂರಿನಲ್ಲಿ ಮೆಕ್ಕೆಜೋಳ ನೆಲಕಚ್ಚಿದೆ. ಬಳ್ಳಾರಿ ಜಿಲ್ಲೆ ಸಂಡೂರು, ಕಂಪ್ಲಿಯಲ್ಲಿ ಕೆಲವು ಮನೆಗಳ ತಗಡಿನ ಶೀಟುಗಳು ಹಾರಿ ಹೋಗಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ-ಗಾಳಿಗೆ ಅಲ್ಲಲ್ಲಿ ಮರಗಳ ರೆಂಬೆಗಳು ಮುರಿದು ಬಿದ್ದಿವೆ. ಕೆ.ಆರ್.ಪೇಟೆಯಲ್ಲಿ ಗರಿಷ್ಠ 88 ಮಿ.ಮೀ. ಮಳೆಯಾದರೆ, ಅಜ್ಜಂಪುರ ತಾಲೂಕು ಶಿವನಿಯಲ್ಲಿ ಕನಿಷ್ಠ 6 ಮಿ.ಮೀ. ಮಳೆಯಾಗಿದೆ. ಕಡೂರು ಪ್ರದೇಶದಲ್ಲಿ ಈ ತನಕ 88.4 ಮಿ.ಮೀ. ಮಳೆಯಾಗಬೇಕಿತ್ತು. ಸೋಮವಾರ ಒಂದೇ ದಿನ 85.2 ಮಿ.ಮೀ. ಮಳೆ ಸುರಿದಿದೆ.
ಬಾಳೆಹೊನ್ನೂರಿನ ಜಯಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಮಳೆ ನೀರು ಅವಾಂತರವಾಗಿದೆ. ಶೃಂಗೇರಿ ತಾಲೂಕಿನಲ್ಲಿ ಭಾರೀ ಮಳೆ-ಗಾಳಿ ಯಿಂದ ಶೃಂಗೇರಿಗೆ ಬರುತ್ತಿದ್ದ ಪ್ರವಾಸಿ ವಾಹನ ಕುಂಚೆಬೈಲು ಸಮೀಪ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಟಿಟಿ ವಾಹನದಲ್ಲಿದ್ದ ಪ್ರವಾಸಿಗರು ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ವಿದ್ಯುತ್ ಕಂಬ ಮುರಿದು ಬಿದ್ದಿದೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.