Advertisement

Poll; ಖರ್ಗೆ ಸಮ್ಮುಖದಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ

12:46 PM Apr 17, 2023 | Team Udayavani |

ಬೆಂಗಳೂರು: ಬಿಜೆಪಿ ಟಿಕೆಟ್‌ ನಿರಾಕರಣೆಯಿಂದ ತೀವ್ರ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

Advertisement

ಖರ್ಗೆ ಅವರು ಶೆಟ್ಟರ್‌ ಅವರಿಗೆ ಕಾಂಗ್ರೆಸ್‌ ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್‌, ಶೆಟ್ಟರ್‌ ಒಬ್ಬರು ಶ್ರೇಷ್ಠ, ಹಾಗೂ ಸರಳ, ಸಜ್ಜನಿಕೆಯ ರಾಜಕಾರಣಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ರಾಜ್ಯದ ಸಿಎಂ ಆಗಿ, ಸ್ಪೀಕರ್‌ ಆಗಿ ಕೆಲಸ ಮಾಡಿದ್ದಾರೆ ಇಂದು ಕರ್ನಾಟಕ ರಾಜ್ಯದಲ್ಲಿ ಬಹಳ ಸಂತಸದ ದಿನವೆಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಮಾತನಾಡಿ, ಜಗದೀಶ್‌ ಶೆಟ್ಟರ್‌ ಯೊಬ್ಬ ಉತ್ತಮ ನಾಯಕ. ಅವರು ನಮ್ಮ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಶೆಟ್ಟರ್‌ ಕಾಂಗ್ರೆಸ್‌ ಸೇರುತ್ತಿದ್ದಾರೆ. ಶೆಟ್ಟರ್‌ ಪಕ್ಷ ಸೆರ್ಪಡೆಯಿಂದ ಉತ್ತರ ಕರ್ನಾಟಕದ ಭಾಗಕ್ಕೆ ಶಕ್ತಿ. ಶೆಟ್ಟರ್‌ ಅಭಯ್‌ ಸಿಂಗ್‌ ಪಾಟೀಲ್‌ ಸೇರಿ, ಹಲವು ನಾಯಕರು ಕಾಂಗ್ರೆಸ್‌ ಸೆರ್ಪಡೆಯಾಗುತ್ತಿದ್ದಾರೆ. ಶೆಟ್ಟರ್‌ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅದೇ ರೀತಿ ನಮ್ಮ ಪಕ್ಷದಲ್ಲೂ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ.  ಕರ್ನಾಟಕದಲ್ಲಿ ನಾವು 150 ಸ್ಥಾನವನ್ನು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್‌ ಪಕ್ಷಕ್ಕೆ ಜಗದೀಶ್‌ ಶೆಟ್ಟರ್‌ ಅವರನ್ನು ಸ್ವಾಗತಿಸುತ್ತೇನೆ ಎಂದರು.

ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿದ ಜಗದೀಶ್‌ ಶೆಟ್ಟರ್‌,  ನಾನು ಬಿಜೆಪಿ ಬಿಟ್ಟು, ಕಾಂಗ್ರೆಸ್‌ ಸೇರಿರುವುದು ಬಹಳ ಜನಕ್ಕೆ ಅಚ್ಚರಿಯಾಗಿದೆ. ನಾನು ಬಿಜೆಪಿಯನ್ನು ಕಟ್ಟಿ ಬೆಳೆಸಿದ ವ್ಯಕ್ತಿ.  ಬಿಜೆಪಿ ನನಗೆ ಎಲ್ಲ ರೀತಿಯ ಗೌರವವನ್ನು ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ. ಹಿರಿಯ ನಾಯಕನನ್ನು ಪಕ್ಷ ನಡೆಸಿಕೊಂಡ ರೀತಿಯಿಂದ ನೋವಾಗಿದೆ. ಜನರ ಆರ್ಶೀವಾದದಿಂದ ನಿರಂತರವಾಗಿ ಗೆಲ್ಲುತ್ತಾ ಬಂದಿದ್ದೇನೆ. ಈ ಬಾರಿ ಟಿಕೆಟ್‌ ಸಿಗುವ ವಿಶ್ವಾಸವಿತ್ತು. ಆದರೆ ಟಿಕೆಟ್‌ ಇಲ್ಲ ಎಂದಾಗ ತುಂಬಾ ಬೇಸರವಾಯಿತು. ಮೊದಲೇ ಟಿಕೆಟ್‌ ಇಲ್ಲ ಎಂದಿದ್ದರೆ, ಬೇಜಾರ್‌ ಆಗುತ್ತಿರಲಿಲ್ಲ. ಹಿರಿಯ ನಾಯಕನನ್ನು ಪಕ್ಷ ನಡೆಸಿಕೊಂಡ ರೀತಿಯಿಂದ ಬೇಸರವಾಗಿದೆ. ಬಿಜೆಪಿ ಪಕ್ಷ ಕಟ್ಟಿದ ನಾಯಕನಿಗೆ ಬೆಲೆ ಸಿಗಲಿಲ್ಲ. ಕಳೆದ 6 ತಿಂಗಳಿನಿಂದ ಪಕ್ಷ ನನ್ನನು ಕಡೆಗಣನೆ ಮಾಡಿದೆ. ಪಕ್ಷ ನನ್ನನು ಒತ್ತಾಯಪೂರ್ವಕವಾಗಿ ಹೊರ ಹಾಕಿದೆ. ಹಾಗಾಗಿ ನಾನು ಕಾಂಗ್ರೆಸ್‌ ನ ತತ್ವ ಸಿದ್ದಾಂತವನ್ನು ಒಪ್ಪಿ, ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ ಎಂದರು.

Advertisement

ನಾನು ಮೋದಿ, ಅಮಿತ್‌ ಶಾ, ಜೆ.ಪಿ. ನಡ್ಡಾ ವಿರುದ್ದ ಟೀಕೆ ಮಾಡುತ್ತಿಲ್ಲ. ಇದೆಲ್ಲ ದೆಹಲಿ ನಾಯಕರ ಗಮನಕ್ಕೆ ಬರುತ್ತಿಲ್ಲ,ಇಲ್ಲಿ ಕೆಲವರು ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದಿಂದ ಹೊರ ಹಾಕುವ ಷಡ್ಯಂತ್ರ ಮಾಡಿದರು ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ವೇಳೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ಡಿ.ಕೆ.ಶಿವಕುಮಾರ್‌ ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next