ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಮೀಸಲಾದ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ವಿಫಲವಾಗಿದೆ. ಅಲ್ಲದೆ, ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾದ 36 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲಿ ಸೋತಿದೆ.
ಕರ್ನಾಟಕದಲ್ಲಿ 51 ಮೀಸಲು ಕ್ಷೇತ್ರಗಳಿದ್ದು, ಅದರಲ್ಲಿ 36 ಸ್ಥಾನಗಳು ಎಸ್‌ಸಿ ಮತ್ತು 15 ಎಸ್‌ಟಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ನಿರ್ಧಾರದ ಹೊರತಾಗಿಯೂ ಬಿಜೆಪಿ ಮೀಸಲು ಸ್ಥಾನಗಳಲ್ಲಿತೀರಾ ಕಳಪೆ ಪ್ರದರ್ಶನ ತೋರಿದೆ.
135 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾದ ಸ್ಥಾನಗಳಲ್ಲಿ ಭಾರಿ ಗೆಲುವು ದಾಖಲಿಸಿದೆ. 36 ಎಸ್‌ಸಿ ಸ್ಥಾನಗಳ ಪೈಕಿ 21ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, 12ರಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಕಂಡಿದ್ದಾರೆ.
Related Articles
ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ಜೆಡಿಎಸ್ ಕೇವಲ ಮೂರು ಮೀಸಲು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 13 ಎಸ್‌ಸಿ-ಮೀಸಲಾತಿ ಸ್ಥಾನಗಳಲ್ಲಿ ಬಿಜೆಪಿ ಮೊದಲ ರನ್ನರ್ ಅಪ್ ಸ್ಥಾನ ಗಳಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಎಸ್‌ಸಿ ಮೀಸಲಾದ ಕುಡಚಿ, ಮುಧೋಳ, ನಾಗಠಾಣ, ಚಿತ್ತಾಪುರ, ಕನಕಗಿರಿ, ಹುಬ್ಬಳ್ಳಿ-ಧಾರವಾಡ-ಪೂರ್ವ, ಹಾವೇರಿ, ಮಾಯಕೊಂಡ, ಮೂಡಿಗೆರೆ, ಕೊರಟಗೆರೆ, ಪಾವಗಡ, ಕೆಜಿಎಫ್ , ಬಂಗಾರಪೇಟೆ, ಪುಲಕೇಶಿನಗರ, ಆನೇಕಲ್, ದೇವನಹಳ್ಳಿ, ನೆಲಮಂಗಲ, ಮಳವಳ್ಳಿ, ನಂಜನಗೂಡು ಹಾಗೂ ಟಿ. ಕೊಳ್ಳೇಗಾಲದಲ್ಲಿ ಜಯ ಸಾಧಿಸಿದೆ.
ರಾಯಬಾಗ, ಚಿಂಚೋಳಿ, ಗುಲ್ಬರ್ಗ ಗ್ರಾಮಾಂತರ, ಔರಾದ್, ಲಿಂಗಸೂಗೂರು, ಶಿರಹಟ್ಟಿ, ಹಡಗಳ್ಳಿ, ಹೊಳಲ್ಕೆರೆ, ಸಿವಿ ರಾಮನ್ ನಗರ, ಮಹದೇವಪುರ, ಸಕಲೇಶಪುರ ಮತ್ತು ಸುಳ್ಯ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಹಗರಿಬೊಮ್ಮನಹಳ್ಳಿ, ಶಿವಮೊಗ್ಗ ಗ್ರಾಮಾಂತರ, ಮುಳಬಾಗಲು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.
ಎಸ್‌ಟಿ ಮೀಸಲು ಕ್ಷೇತ್ರಗಳಾಗಿದ್ದ 15 ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಬಿಜೆಪಿಯನ್ನು ರನ್ನರ್ ಅಪ್ ಸ್ಥಾನಕ್ಕೆ ತಳ್ಳಿತು. ದೇವದುರ್ಗ ಕ್ಷೇತ್ರವನ್ನು ಜೆಡಿಎಸ್ ಗೆದ್ದುಕೊಂಡಿದೆ. ಸೋತವರಲ್ಲಿ ಎಸ್ ಟಿ ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಬಿ.ಶ್ರೀ ರಾಮುಲು ಅವರೂ ಸೇರಿದ್ದಾರೆ.
ಎಸ್‌ಟಿ ವರ್ಗಕ್ಕೆ ಮೀಸಲಾಗಿದ್ದ ಯೆಮಕನಮರಡಿ, ಸುರಪುರ, ರಾಯಚೂರು ಗ್ರಾಮಾಂತರ, ಮಾನ್ವಿ, ಕಂಪ್ಲಿ, ಸಿರುಗುಪ್ಪ, ಬಳ್ಳಾರಿ, ಸಂಡೂರು, ಕೂಡ್ಲಿಗಿ, ಮೊಳಕಾಲ್ಮುರು, ಚಳ್ಳಕೆರೆ, ಜಗಳೂರು, ಹೆಗ್ಗಡದೇವನಕೋಟೆ, ಮಸ್ಕಿ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 51 ಮೀಸಲು ಸ್ಥಾನಗಳ ಪೈಕಿ 22ರಲ್ಲಿ ಗೆಲುವು ಸಾಧಿಸಿತ್ತು.