ಬೆಂಗಳೂರು: ಪ್ರತಿ ಹಳ್ಳಿ ಹಳ್ಳಿಗೆ ರಸ್ತೆ ಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ಜನಪರ ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಹೇಳಿದರು.
ಶುಕ್ರವಾರ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ತಿರುಪಾಳ್ಯ ಗ್ರಾಮ, ಕೋಣ ಕುಂಟೆ ವಾರ್ಡ್, ಯಲಚೇನಹಳ್ಳಿ ವಾರ್ಡ್ ಸೇರಿದಂತೆ ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.
ಬೆಂಗಳೂರು ದಕ್ಷಿಣ ಅತಿದೊಡ್ಡ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರತಿ ಹಳ್ಳಿಗೂ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ವಿವಿಧ ರಸ್ತೆಗಳ ಅಗಲೀಕರಣ ಮಾಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಬಡವರಿಗೆ ಭೂಮಿ ನೀಡುವ ಕೆಲಸ ಕೂಡ ಸಚಿವ ಅಶೋಕ್ ಅವರು ಮಾಡಿದ್ದಾರೆ.ಪ್ರಧಾನಿ ಮೋದಿ ಅವರು ಅಭಿವೃದ್ದಿ ಕಾರ್ಯಗಳು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕ್ಷೇತ್ರಕ್ಕೆ ನೀಡಿರುವ
ಅನುದಾನಗಳಿಂದಾಗಿ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕೆಲಸ ನಡೆದಿದೆ ಎಂದರು. ಇದೇ ವೇಳೆ ಯಲಚೇನ ವಾರ್ಡ್‌ನಲ್ಲಿ ಮುಖಂಡರ ಸಭೆ ನಡೆಸಲಾಯಿತು. ಅನ್ಯ ಪಕ್ಷಗಳ ನಡೆಯಿಂದ ಬೇಸತ್ತು ಬಿಜೆಪಿ ಸಿದ್ಧಾಂತ ಒಪ್ಪಿ ಬಂದ ಯುವಕನ್ನು ಪಕ್ಷ ಸೇರ್ಪಡೆಗೊಳಿಸಿಲಾಯಿತು. ಕ್ಷೇತ್ರದ ಉಸ್ತುವಾರಿ ಧರ್ಮೇಂದ್ರ ಪಾಂಚಲ್, ಪಾಲಿಕೆ ಮಾಜಿ ಸದಸ್ಯ ವಿ.ಬಾಲಕೃಷ್ಣ, ಮುಖಂಡರಾದ ಬಾಲಾಜಿ ಸಿಂಗ್, ಸುರೇಶ್ ಹಂಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.