Advertisement

karnataka polls; ದಿಗ್ಗಜರ ಕದನ ಕಣವೇ ಕುತೂಹಲ! ಮಂಡ್ಯದಲ್ಲಿ ಎಚ್‌ಡಿಕೆ ವರ್ಸಸ್‌ ಸುಮಲತಾ?

10:34 PM Apr 18, 2023 | Team Udayavani |

ಮಂಡ್ಯ: ಈ ಬಾರಿ ಮಂಡ್ಯ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧಿಸಿದ್ದೇ ಆದರೆ, ಅವರ ವಿರುದ್ಧ ಸುಮಲತಾ ಅಂಬರೀಶ್‌ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಮತ್ತೂಂದೆಡೆ, ಎಚ್‌.ಡಿ.ಕುಮಾರಸ್ವಾಮಿ ಅಭ್ಯರ್ಥಿಯಾದರೆ, ಅವರ ವಿರುದ್ಧ ಪಕ್ಷದ ಪ್ರಭಾವಿ ನಾಯಕರೊಬ್ಬರು ಅಥವಾ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಕೂಡ ಸಿದ್ಧತೆ ನಡೆಸಿದೆ.

Advertisement

ಚನ್ನಪಟ್ಟಣ ಕ್ಷೇತ್ರದ ಜೊತೆಗೆ ರಾಮನಗರದ ಅಭ್ಯರ್ಥಿ ತಮ್ಮ ಪುತ್ರ ನಿಖೀಲ್‌ರನ್ನು ಗೆಲ್ಲಿಸುವ ಜವಾಬ್ದಾರಿಯೂ ಕುಮಾರಸ್ವಾಮಿ ಮೇಲಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡು ಎಚ್‌ಡಿಕೆ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಗಾಳಿಸುದ್ದಿಗೆ ರೆಕ್ಕೆಪುಕ್ಕ:
ಕಳೆದ ಹಲವು ದಿನಗಳಿಂದ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆಯ ಗುಸುಗುಸು ಹಬ್ಬಿತ್ತು. ಅದಕ್ಕೆ ಈಗ ರೆಕ್ಕೆಪುಕ್ಕ ಬಂದಂತಾಗಿದೆ. ಆದರೆ, ಎಲ್ಲವನ್ನೂ ಗೌಪ್ಯವಾಗಿಡಲಾಗಿದೆ. ಶಾಸಕ ಎಂ.ಶ್ರೀನಿವಾಸ್‌ ಕ್ಷೇತ್ರ ಬಿಟ್ಟು ಕೊಡುವ ಮಾತುಗಳನ್ನಾಡಿದ್ದಾರೆ. ಇದರಿಂದ ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಖಾತೆ ತೆರೆದ ಎಚ್‌ಡಿಕೆ, ಸುಮಲತಾ:
ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಖರ್ಚು-ವೆಚ್ಚಗಳನ್ನು ತೋರಿಸಲು ನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ಕೂಡ ತೆರೆಯಲಾಗಿದೆ. ಜತೆಗೆ, ಬೆಂಬಲಿಗರಿಗಾಗಿ ಖಾಸಗಿ ಹೋಟೆಲ್‌ಗ‌ಳಲ್ಲಿನ ಎಲ್ಲ ರೂಂಗಳು ಬುಕ್‌ ಆಗಿವೆ. ಇನ್ನೊಂದೆಡೆ, ಎಚ್‌ಡಿಕೆ ಅವರನ್ನು ಎದುರಿಸಲು ಸಜ್ಜಾಗಿರುವ ಸುಮಲತಾ, ತಮ್ಮ ಹೆಸರಿನಲ್ಲಿ ನಗರದ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯಲ್ಲಿ ಖಾತೆ ತೆರೆದಿದ್ದಾರೆ. ಅಲ್ಲದೆ, ನಾಮಪತ್ರ ಸಲ್ಲಿಕೆಗೆ ಎಲ್ಲ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಹೈಕಮಾಂಡ್‌ ಸೂಚಿಸಿದರೆ ಮಂಡ್ಯದಲ್ಲಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದೂ ಸುಮಲತಾ ಹೇಳಿದ್ದಾರೆ.

ಅಶೋಕ್‌ ವಿರುದ್ಧ ಡಿ.ಕೆ.ಸುರೇಶ್‌ ಕಣಕ್ಕೆ?
ಬೆಂಗಳೂರು: ಕಂದಾಯ ಸಚಿವ ಆರ್‌.ಅಶೋಕ ಅವರು ಸ್ಪರ್ಧಿಸಿರುವ ಪದ್ಮನಾಭನಗರ ಕ್ಷೇತ್ರಕ್ಕೆ ಕಾಂಗ್ರೆಸ್‌ ಘೋಷಿತ ಅಭ್ಯರ್ಥಿ ರಘುನಾಥ ನಾಯ್ಡು ಅವರಿಗೆ ಬಿ.ಫಾರಂ ಕೊಟ್ಟಿದ್ದರೂ, ಇದುವರೆಗೂ ಅವರು ನಾಮಪತ್ರ ಸಲ್ಲಿಸದೇ ಇರುವುದು ಕುತೂಹಲ ಕೆರಳಿಸಿದೆ. ಈ ಬೆಳವಣಿಗೆ ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಬದಲಾಗುವರೇ ಎಂಬ ವದಂತಿಗಳಿಗೆ ರೆಕ್ಕೆಪುಕ್ಕ ನೀಡಿದೆ. ಅಷ್ಟೇ ಅಲ್ಲ, ಡಿ.ಕೆ. ಸುರೇಶ್‌ ಅವರೇ ಅಶೋಕ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆಯೇ ಎಂಬ ಸುದ್ದಿಗೂ ಪುಷ್ಟಿ ಸಿಕ್ಕಂತಾಗಿದೆ.

Advertisement

ರಘುನಾಥ ನಾಯ್ಡು ಅವರಿಗೆ ಬಿ.ಫಾರಂ ಕೊಡುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು “ಸದ್ಯಕ್ಕೆ ಕೆಲಸ ಮಾಡುತ್ತಿರು, ನಾನು ಹೇಳುವ ತನಕ ನಾಮಪತ್ರ ಸಲ್ಲಿಸಬೇಡ’ ಎಂಬ ಷರತ್ತು ಹಾಕಿದ್ದರು. ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನ ಬಾಕಿ ಇದ್ದರೂ ಇನ್ನೂ ನಾಯ್ಡು ನಾಮಪತ್ರ ಸಲ್ಲಿಸಿಲ್ಲ. ಈ ಮಧ್ಯೆ ಸ್ವತಃ ನಾಯ್ಡು ಅವರು “ನಾನು ಇಲ್ಲವೇ ಡಿ.ಕೆ.ಸುರೇಶ್‌’ ಅಭ್ಯರ್ಥಿಯಾಗುತ್ತೇವೆಂದು ಹೇಳಿರುವುದು ಸಾಕಷ್ಟು ವದಂತಿಗಳಿಗೆ ಆಸ್ಪದ ನೀಡಿದೆ.

ಕೊನೇ ಗಳಿಗೆಯಲ್ಲಿ ಸಾಮ್ರಾಟ್‌ಗೆ ಶಾಕ್‌?
ಸಚಿವ ಅಶೋಕ್‌ ಅವರು 2ನೇ ಕ್ಷೇತ್ರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಕನಕಪುರದಲ್ಲಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಅಶೋಕ್‌ ಅವರನ್ನು ಪದ್ಮನಾಭನಗರದಲ್ಲೇ ಕಟ್ಟಿ ಹಾಕಬೇಕೆಂಬುದು ಡಿಕೆ ಸಹೋದರರ ಪ್ಲ್ರಾನ್‌ ಅಗಿದೆ. ಹೀಗಾಗಿ ಕೊನೇ ಗಳಿಗೆಯಲ್ಲಿ ಡಿ.ಕೆ.ಸುರೇಶ್‌ ನಾಮಪತ್ರ ಸಲ್ಲಿಸಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಸದ್ಯ ಡಿ.ಕೆ.ಸುರೇಶ್‌ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದು ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಚುನಾವಣೆಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಡಿ.ಕೆ.ಸುರೇಶ್‌ ಪದ್ಮನಾಭನಗರದಲ್ಲಿ ಸ್ಪರ್ಧಿಸಿದರೆ ಅಲ್ಲಿ ಮೇಲ್ಮನೆ ಸದಸ್ಯ ಹಾಗೂ ಡಿ.ಕೆ.ಸಹೋದರರ ಸಂಬಂಧಿ ರವಿ ಚುನಾವಣೆಯ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಅಶೋಕ್‌ಗೆ ಪದ್ಮನಾಭನಗರ ಹಾಗೂ ಕನಕಪುರದಲ್ಲಿ ನಿದ್ದೆಗೆಡಿಸುವ ಎಲ್ಲಾ ತಂತ್ರಗಾರಿಕೆಗಳನ್ನು ಡಿಕೆ ಸಹೋದರರು ರೂಪಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next